ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tipu Sultan's Palace: ನಂದಿಬೆಟ್ಟದ ಟಿಪ್ಪು ಅರಮನೆ ಮೇಲೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್ ಹೆಸರು ಕೆತ್ತನೆ!

Nandi Hills: ಅರಮನೆ ಮೇಲೆ ಇಂಗ್ಲಿಷ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಹೆಸರು ಬರೆದಿದ್ದು, ಹೆಸರಿನ ನಡುವೆ ಪ್ರೀತಿಯ ಸಂಕೇತವನ್ನೂ ಬರೆಯಲಾಗಿದೆ. ನಂದಿಗಿರಿಧಾಮ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಈ ಬರಹದ ಮೇಲೆ ಬಣ್ಣ ಬಳಿದಿದ್ದಾರೆ. ಈ ಕೃತ್ಯದ ಬಗ್ಗೆ ಪ್ರವಾಸಿಗರು ಆಕ್ರೋಶ ಹೊರಹಾಕಿದ್ದು, ಪಾರಂಪರಿಕ ಸ್ಮಾರಕದ ಮೇಲೆ ಗ್ಯಾಂಗ್‌ಸ್ಟರ್‌ ಹೆಸರು ಬರೆದು ವಿಕೃತಿ ಮೆರೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನಂದಿಬೆಟ್ಟದ ಟಿಪ್ಪು ಅರಮನೆ ಮೇಲೆ ಲಾರೆನ್ಸ್‌ ಬಿಷ್ಣೋಯ್ ಹೆಸರು ಕೆತ್ತನೆ!

-

Prabhakara R Prabhakara R Oct 28, 2025 3:28 PM

ಚಿಕ್ಕಬಳ್ಳಾಪುರ: ತಾಲೂಕಿನ ನಂದಿ ಗಿರಿಧಾಮದ ಪ್ರಸಿದ್ದ ಟಿಪ್ಪು ಬೇಸಿಗೆ ಅರಮನೆ (Tipu Sultan's Palace) ಮೇಲೆ ಕುಖ್ಯಾತ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಹೆಸರು ಬರೆದಿರುವುದು ಕಂಡುಬಂದಿದೆ. ಕಿಡಿಗೇಡಿಗಳ ಈ ಕೃತ್ಯಕ್ಕೆ ಪ್ರವಾಸಿಗರು ಆಕ್ರೋಶ ಹೊರಹಾಕಿದ್ದಾರೆ. ಸದಾ ಪ್ರವಾಸಿಗರಿಂದ ತುಂಬಿರುವ ಗಿರಿಧಾಮದ ಟಿಪ್ಪು ಬೇಸಿಗೆ ಅರಮನೆಯ ಮೇಲೆ ಈ ಬರಹ ಬರೆಯಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

ಅರಮನೆ ಮೇಲೆ ಇಂಗ್ಲಿಷ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಹೆಸರು ಬರೆದಿದ್ದು, ಹೆಸರಿನ ನಡುವೆ ಪ್ರೀತಿಯ ಸಂಕೇತವನ್ನೂ ಬರೆಯಲಾಗಿದೆ. ನಂದಿಗಿರಿಧಾಮ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಈ ಬರಹದ ಮೇಲೆ ಬಣ್ಣ ಬಳಿದಿದ್ದಾರೆ.

ಟಿಪ್ಪು ಬೇಸಿಗೆ ಅರಮನೆಯು ಪುರಾತತ್ವ ಇಲಾಖೆಗೆ ಸೇರಿದೆ. ಇಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದರೂ ಅವು ಸರಿಯಾಗಿ ಕಾರ್ಯ ನಿರ್ವಹಿಸಲ್ಲ ಎನ್ನಲಾಗಿದ್ದು, ಇದರಿಂದ ಇಲ್ಲಿನ ಪ್ರಾಚೀನ ಸ್ಮಾರಕಗಳು, ಕಟ್ಟಡಗಳ ಭದ್ರತೆ ಕುರಿತು ಪ್ರಶ್ನೆ ಉದ್ಭವಿಸಿದೆ. ಇನ್ನು ಈ ಕೃತ್ಯದ ಬಗ್ಗೆ ಪ್ರವಾಸಿಗರು ಆಕ್ರೋಶ ಹೊರಹಾಕಿದ್ದು, ಪಾರಂಪರಿಕ ಸ್ಮಾರಕದ ಮೇಲೆ ಗ್ಯಾಂಗ್‌ಸ್ಟರ್‌ ಹೆಸರು ಬರೆದು ವಿಕೃತಿ ಮೆರೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | CM Siddaramaiah: ನಂದಿ ಬೆಟ್ಟದಲ್ಲಿ 2 ಭಾರತೀಯ ಮೀಸಲು ಪಡೆ ಆರಂಭಕ್ಕೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

ಲಾರೆನ್ಸ್ ಬಿಷ್ಣೋಯ್‌ ಯಾರು?

ಲಾರೆನ್ಸ್ ಬಿಷ್ಣೋಯ್ ಭಾರತ ದೇಶದ ಕುಖ್ಯಾತ ಗ್ಯಾಂಗ್‌ಸ್ಟರ್‌ ಆಗಿದ್ದಾನೆ. ಪಂಜಾಬ್ ಮೂಲದವನಾದ ಈತ, ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಸೆರೆಮನೆಯಲ್ಲಿದ್ದುಕೊಂಡೆ ದೇಶಾದ್ಯಂತ ತನ್ನ ಅಪರಾಧ ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದಾನೆ. ಪಂಜಾಬ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಬಿಷ್ಣೋಯ್, ನಂತರ ತನ್ನದೇ ಆದ ಬೃಹತ್ ಗ್ಯಾಂಗ್ ಕಟ್ಟಿದ್ದಾನೆ.

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಬರ್ಬರ ಹತ್ಯೆಯ ಹೊಣೆಯನ್ನು ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿತ್ತು. ಅದೇ ರೀತಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಹಲವು ಬಾರಿ ಜೀವ ಬೆದರಿಕೆ ಹಾಕುವ ಮೂಲಕ ಈತ ಸುದ್ದಿಯಾಗಿದ್ದ. ಕೊಲೆ, ಸುಲಿಗೆ, ಅಪಹರಣ, ಡ್ರಗ್ಸ್ ಸಾಗಾಟದಂತಹ ನೂರಾರು ಪ್ರಕರಣಗಳು ಈತನ ಮೇಲಿವೆ. ಕೆನಡಾದಲ್ಲಿ ತಲೆಮರೆಸಿಕೊಂಡಿರುವ ಗೋಲಿ ಬ್ರಾರ್ ಜತೆಗೂಡಿ, ಜೈಲಿನಿಂದಲೇ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದಾನೆ.

ಜನಪ್ರಿಯ ಪ್ರವಾಸಿ ತಾಣ ನಂದಿ ಗಿರಿಧಾಮ

ನಂದಿ ದುರ್ಗ ಎಂದೂ ಕರೆಯಲ್ಪಡುವ ನಂದಿ ಬೆಟ್ಟ ರಾಜಧಾನಿ ಬೆಂಗಳೂರು ನಗರದ ಜನರಿಗೆ ವಾರಾಂತ್ಯದ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದೆ. ಇದು ಚಿಕ್ಕಬಳ್ಳಾಪುರ ಪಾಳೇಗಾರರು, ಟಿಪ್ಪು ಸುಲ್ತಾನ್, ಮರಾಠರು ಮತ್ತು ಅಂತಿಮವಾಗಿ ಬ್ರಿಟಿಷರ ನಿಯಂತ್ರಣದಲ್ಲಿತ್ತು. ಪ್ರಾಚೀನ ಶಾಸನಗಳಲ್ಲಿ ಇದನ್ನು ‘ನಂದಿಗಿರಿ’ ಎಂದು ಕರೆಯಲಾಗುತ್ತಿತ್ತು. ಸಮುದ್ರ ಮಟ್ಟದಿಂದ 4850 ಅಡಿಗಳಷ್ಟು ಎತ್ತರದಲ್ಲಿರುವ ನಂದಿ ಬೆಟ್ಟ ತಂಪು ಗಾಳಿ ಮತ್ತು ಪ್ರಶಾಂತ ಪರಿಸರವು ಬ್ರಿಟಿಷ್ ಮತ್ತು ಟಿಪ್ಪು ಸುಲ್ತಾನರಿಗೆ ಬೇಸಿಗೆಯ ತಾಣವಾಗಿತ್ತು. ನಂದಿ ಬೆಟ್ಟದಲ್ಲಿನ ಹವಾಮಾನವು ವರ್ಷದುದ್ದಕ್ಕೂ ಆಹ್ಲಾದಕರವಾಗಿರುತ್ತದೆ. ಸಾಹಸ ಕ್ರೀಡಾ ಪ್ರಿಯರು ಪ್ಯಾರಾಸೈಲಿಂಗ್‌ ಸಾಹಸ ಕ್ರೀಡೆಯಲ್ಲಿ ಭಾಗವಹಿಸಬಹುದು.

ಇಲ್ಲಿ ಕೋಟೆಯ ಗೋಡೆಗಳನ್ನು ಚಿಕ್ಕಬಳ್ಳಾಪುರದ ಪಾಳೇಗಾರರು ನಿರ್ಮಿಸಿದರು ಮತ್ತು ನಂತರ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರು ಇನ್ನೂ ಭದ್ರಗೊಳಿಸಿದರು ಎನ್ನಲಾಗಿದೆ. ಇದು ಸ್ವಲ್ಪ ಸಮಯದವರೆಗೆ ಮರಾಠರ ನಿಯಂತ್ರಣದಲ್ಲಿತ್ತು. ನೈರುತ್ಯ ದಿಕ್ಕಿನಲ್ಲಿ ಪ್ರಪಾತಕ್ಕೆ ʼಟಿಪ್ಪು ಡ್ರಾಪ್ʼ ಎಂಬ ಹೆಸರು ಇದೆ. ಇಲ್ಲಿ ಮರಣದಂಡನೆ ಶಿಕ್ಷೆಗೊಳಗಾದ ಕೈದಿಗಳನ್ನು ಕೆಳಗಿನ ಕಣಿವೆಗೆ ತಳ್ಳಲಾಗುತ್ತಿತ್ತು ಎಂದು ನಂಬಲಾಗಿದೆ. ಇಲ್ಲಿ ಟಿಪ್ಪುವಿನ ಬೇಸಿಗೆ ಅರಮನೆ ಇದ್ದು, ಎರಡು ಅಂತಸ್ತಿನ ಸಣ್ಣ ಕಟ್ಟಡದ ಅವಶೇಷಗಳನ್ನು ನಂದಿ ಬೆಟ್ಟದ ಮೇಲೆ ಕಾಣಬಹುದು.

ಈ ಸುದ್ದಿಯನ್ನೂ ಓದಿ | Shoot out: ನೆಲಮಂಗಲದಲ್ಲಿ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ

ನಂದಿ ಬೆಟ್ಟದಲ್ಲಿ ಶಿವನಿಗೆ ಅರ್ಪಿತವಾದ ಎರಡು ಪ್ರಾಚೀನ ದೇವಾಲಯಗಳು ಇವೆ. ನಂದಿ ಬೆಟ್ಟದ ಮೇಲೆ ಯೋಗನಂದೀಶ್ವರ ದೇವಸ್ಥಾನವಿದ್ದು, ಬೆಟ್ಟದ ಕೆಳಗಿನ ನಂದಿ ಗ್ರಾಮದಲ್ಲಿ ಭೋಗನಂದೀಶ್ವರ ದೇವಸ್ಥಾನ ಇದೆ.