Chikkaballapur News: ಸಾಲ ಸೌಲಭ್ಯಗಳ ಹಣ ಬಿಡುಗಡೆ ಪ್ರಕ್ರಿಯೆಯಲ್ಲಿ ಬಹಳ ವಿಳಂಬ ಮತ್ತು ನಿರ್ಲಕ್ಷ ಧೋರಣೆ ಸಹಿಸಲ್ಲ : ಡಾ. ಎನ್ ಭಾಸ್ಕರ್
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ "ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ಯೋಜನೆ"ಯಡಿ ವಿಶೇಷ ಕಿರು ಸಾಲ ಸೌಲಭ್ಯ ನೀಡುವ ಮಹತ್ವಾಕಾಂಕ್ಷಿ ಯೋಜನೆಯಡಿ ಈವರೆಗೆ ಜಿಲ್ಲೆಯಲ್ಲಿ ಒಟ್ಟು 4973 ಅರ್ಜಿಗಳನ್ನು ಮಂಜೂರಾತಿ ನೀಡಿದ್ದು ಈ ಪೈಕಿ 4762 ಫಲಾನುಭವಿಗಳಿಗೆ ಬ್ಯಾಂಕುಗಳಿಂದ ಹಣ ಬಿಡುಗಡೆ ಯಾಗಿದೆ ಎಂದರು.
-
ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಡಿ ಬ್ಯಾಂಕ್‌ಗಳ ಮೂಲಕ ಅನುಷ್ಠಾನವಾಗಲಿರುವ ಕೆಲವು ಸಾಲ ಸೌಲಭ್ಯಗಳ ಹಣ ಬಿಡುಗಡೆ ಪ್ರಕ್ರಿಯೆಯಲ್ಲಿ ಬಹಳ ವಿಳಂಬ ಮತ್ತು ನಿರ್ಲಕ್ಷ ಧೋರಣೆ ತೋರಿರುವುದನ್ನು ಸಹಿಸುವುದಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಅವರು ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ನಗರ ಪರದೇಶಗಳಲ್ಲಿನ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ "ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ಯೋಜನೆ"ಯಡಿ ವಿಶೇಷ ಕಿರು ಸಾಲ ಸೌಲಭ್ಯ ನೀಡುವ ಮಹತ್ವಾಕಾಂಕ್ಷಿ ಯೋಜನೆಯಡಿ ಈವರೆಗೆ ಜಿಲ್ಲೆಯಲ್ಲಿ ಒಟ್ಟು 4973 ಅರ್ಜಿಗಳನ್ನು ಮಂಜೂರಾತಿ ನೀಡಿದ್ದು ಈ ಪೈಕಿ 4762 ಫಲಾನುಭವಿಗಳಿಗೆ ಬ್ಯಾಂಕುಗಳಿಂದ ಹಣ ಬಿಡುಗಡೆ ಯಾಗಿದೆ ಎಂದರು.
ಬಾಕಿ 211 ಅರ್ಜಿಗಳಿಗೆ ಬ್ಯಾಂಕ್ ಗಳಲ್ಲಿ ಎಲ್ಲಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಹಣ ಬಿಡುಗಡೆ ಯನ್ನು ಮಾತ್ರ ಬಾಕಿ ಇಟ್ಟಿರುವುದು ಸರಿಯಲ್ಲ. ಈ ಧೋರಣೆ ಜಿಲ್ಲೆಯ ವಿವಿಧ ಬ್ಯಾಂಕ್ ಗಳ ವ್ಯವಸ್ಥಾಪಕರ ನಿರ್ಲಕ್ಷ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಸರ್ಕಾರದ ಯಾವುದೇ ಯೋಜನೆ ಗಳಡಿ ಇಲಾಖೆಗಳಿಂದ ಮಂಜೂರಾದ ಸಾಲ ಸೌಲಭ್ಯಗಳನ್ನು ಕಾಲಮಿತಿಯೊಳಗೆ ಹಣ ಬಿಡುಗಡೆ ಮಾಡುವುದು ತಮ್ಮೆಲ್ಲರ ಆದ್ಯ ಕರ್ತವ್ಯ. ಯಾವುದೇ ಅರ್ಜಿದಾರರನ್ನು ಅನಗತ್ಯವಾಗಿ ಅಲೆದಾಡಿಸ ಬೇಡಿ, ಮುಂದಿನ ದಿನಗಳಲ್ಲಿ ಇಂತಹ ನಿರ್ಲಕ್ಷಕ್ಕೆ ಆಸ್ಪದ ನೀಡಬಾರದು ಎಂದು ಖಡಕ್ ಎಚ್ಚರಿಕೆಯನ್ನು ಅಪರ ಜಿಲ್ಲಾಧಿಕಾರಿಗಳು ನೀಡಿದರು.
ಆತ್ಮ ನಿರ್ಭರ ಯೋಜನೆಯಡಿ ಪ್ರಸ್ತುತ ಪ್ರಾಥಮಿಕ ಕಿರು ಸಾಲದ ಮೊತ್ತವನ್ನು ಸರ್ಕಾರ 10 ರಿಂದ 15 ಸಾವಿರಕ್ಕೆ ಹೆಚ್ಚಿಸಿದೆ. ಪ್ರಾಥಮಿಕ ಹಂತದ ಕಿರು ಸಾಲಕ್ಕೆ ಒಟ್ಟು 5456 ಅರ್ಜಿಗಳನ್ನು ಸ್ವೀಕರಿಸಿ 4762 ಫಲಾನುಭವಿಗಳಿಗೆ ರೂ. 499 ಲಕ್ಷಗಳ ಸಾಲ ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ ಪಡೆದ ಸಾಲವನ್ನು ತೀರಿಸಿದ ಬೀದಿ ಬದಿ ವ್ಯಾಪಾರಸ್ಥರಿಗೆ ದ್ವಿತೀಯ ಹಂತದಲ್ಲಿ 1791 ಫಲಾನು ಭವಿಗಳಿಗೆ 25 ಸಾವಿರಗಳಂತೆ ಒಟ್ಟು ರೂ. ೩೭೩ ಲಕ್ಷಗಳ ಸಾಲ ಸೌಲಭ್ಯ ನೀಡಲಾಗಿದೆ ಎಂದರು.
ಅದೇ ರೀತಿ 3ನೇ ಹಂತದಲ್ಲಿ 634 ಫಲಾನುಭವಿಗಳಿಗೆ ತಲಾ 50000 ರೂ.ಗಳಂತೆ ಒಟ್ಟು 316 ಲಕ್ಷಗಳ ಸಾಲ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯು ಬೀದಿ ಬದಿ ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲು ಬಹಳ ಸಹಕಾರಿ ಆಗಿರುವುದರಿಂದ ಹಣ ಬಿಡುಗಡೆಗೆ ಬಾಕಿ ಇರುವ 211 ಅರ್ಜಿಗಳನ್ನು ಒಂದು ವಾರದಲ್ಲಿ ವಿಲೆವಾರಿ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತಿಕ್ ಪಾಷ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್.ವೆಂಕಟೇಶರೆಡ್ಡಿ, ಕೌಶಲ್ಯಾಭಿವೃದ್ಧಿ ಅಧಿಕಾರಿ ಎಂ.ಪ್ರಸಾದ್, ಅಭಿಯಾನ ವ್ಯವಸ್ಥಾಪಕ ವೆಂಕಟಾಚಲಪತಿ ಸೇರಿದಂತೆ ಜಿಲ್ಲೆಯ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಹಾಜರಿದ್ದರು.