KRS: ಡಿ.9ರಂದು ಬೃಹತ್ ಪ್ರತಿಭಟನೆ; ಅಕ್ರಮ ಖಾತೆ ರದ್ದುಪಡಿಸಿ, ಒತ್ತುವರಿ ತೆರವಿಗೆ ಒತ್ತಾಯ
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನುಗಳನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಪ್ರಕರಣಗಳು ನಡೆದಿದ್ದು, ಇವುಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷ ಆಗ್ರಹಿಸಿದೆ.
-
ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನುಗಳನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಪ್ರಕರಣಗಳು ನಡೆದಿದ್ದು, ಇವುಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷ ಆಗ್ರಹಿಸಿದೆ.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್, ಜಿಲ್ಲೆಯ ಹಲವು ಕಡೆ ಸರ್ಕಾರಿ ಜಮೀನುಗಳ ಅಕ್ರಮ ಖಾತೆ ಹಾಗೂ ಒತ್ತುವರಿ ಪ್ರಕರಣಗಳು ನಡೆದಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: Chikkaballapur Accident: ಚಿಕ್ಕಬಳ್ಳಾಪುರದ ಬಳಿ ಭೀಕರ ಅಪಘಾತ; ಬೊಲೆರೊಗೆ ಕಾರು ಡಿಕ್ಕಿಯಾಗಿ ನಾಲ್ವರ ದುರ್ಮರಣ!
ಚಿಕ್ಕಬಳ್ಳಾಪುರದಲ್ಲಿ 24 ಎಕರೆ ಕೆರೆ ಜಾಗ, ಗೌರಿಬಿದನೂರು ತಾಲ್ಲೂಕಿನ ಯರಗುಂಟೆಯಲ್ಲಿ ಎರಡು ಎಕರೆ ಸ್ಮಶಾನದ ಜಾಗ, ಬಾಗೇಪಲ್ಲಿ ತಾಲ್ಲೂಕಿನ ಪುಲವಾರಪಲ್ಲಿ ಗ್ರಾಮದಲ್ಲಿ 15 ಎಕರೆ ಸರ್ಕಾರಿ ಜಮೀನು ಹಾಗೂ ತೊಂಡೇಭಾವಿ ಗ್ರಾಮದ ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ ಎಂದು ದೂರಿದರು.
ಮಂಚೇನಹಳ್ಳಿ ತಾಲ್ಲೂಕಿನ ಮಿಣಕನಗುರ್ಕಿ ಗ್ರಾಮದಲ್ಲಿ ಬದುಕಿರುವ ವ್ಯಕ್ತಿಯನ್ನು ಮೃತಪಟ್ಟಿ ದ್ದಾರೆಂದು ದಾಖಲೆ ಸೃಷ್ಟಿಸಿ, ಅವರ ಜಮೀನನ್ನು ಪ್ರಭಾವಿಗಳ ಹೆಸರಿಗೆ ವರ್ಗಾಯಿಸಲಾಗಿದೆ. ಗುಡಿಬಂಡೆ ತಾಲ್ಲೂಕಿನ ಸೋಮಲಾಪುರ ಗ್ರಾಮದ ಸರ್ವೆ ನಂಬರ್ 1ರಲ್ಲಿರುವ 163 ಎಕರೆ ಜಮೀನಿಗೆ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಲಾಗಿದ್ದು, ಈ ಪೈಕಿ ಶೇ.10ರಷ್ಟು ಮಾತ್ರ ತೆರವುಗೊಳಿಸಲಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಇನ್ನೂ ಹಲವು ಅಕ್ರಮ ಖಾತೆ ಪ್ರಕರಣಗಳು ನಡೆದಿರುವ ಶಂಕೆಯಿದೆ. ಜಿಲ್ಲಾಧಿಕಾರಿ ಗಳು ಕೂಡಲೇ ಉನ್ನತ ಮಟ್ಟದ ತನಿಖೆಗೆ ಮುಂದಾಗಿ ಅಕ್ರಮ ಖಾತೆಗಳನ್ನು ರದ್ದುಗೊಳಿಸಬೇಕು. ಒತ್ತುವರಿಯಾಗಿರುವ ಸರ್ಕಾರಿ ಜಮೀನುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಬೇಕು. ಅಕ್ರಮಕ್ಕೆ ಸಹಕರಿಸಿರುವ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಡಿಸೆಂಬರ್ 9ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಸುಬ್ರಮಣಿ, ಮಂಜುನಾಥ್ ಹಾಗೂ ನರಸಿಂಹರೆಡ್ಡಿ ಉಪಸ್ಥಿತರಿದ್ದರು.