ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಸಾದಲಿ ಪಶು ಆಹಾರ ಘಟಕದ ವಿರುದ್ಧ ಕೋಲಾರ, ಚಿಕ್ಕಬಳ್ಳಾಪುರ ರೈತರಿಂದ ಅ.17ರಂದು ಬೃಹತ್ ಪ್ರತಿಭಟನೆ

ಸಾದಲಿ ಸಮೀಪ ಪಶು ಆಹಾರ ಘಟಕ ಸ್ಥಾಪಿಸಲು ನಾಲ್ಕು ವರ್ಷಗಳ ಹಿಂದೆ ಕೋಚಿಮುಲ್ ಮುಂದಾಗಿದ್ದಾಗ ಕೆಎಂಎಫ್ ಅನುಮತಿ ನೀಡಿರಲಿಲ್ಲ. ಬಳಿಕ ಎರಡೂ ಜಿಲ್ಲೆಗಳ ಆಡಳಿತ ಮಂಡಳಿಗಳ ಗಮನಕ್ಕೆ ತಾರದೆ, ಕೋಚಿಮುಲ್ ಒಡೆತನದ 26 ಎಕರೆ ಜಮೀನನ್ನು ಆಂಧ್ರಪ್ರದೇಶದ ಖಾಸಗಿ ಸಂಸ್ಥೆಯೊAದಕ್ಕೆ ಪಿಪಿಪಿ ಮಾದರಿಯಲ್ಲಿ ನಿರ್ವಹಣೆಗೆ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋಲಾರ, ಚಿಕ್ಕಬಳ್ಳಾಪುರ ರೈತರಿಂದ ಅ.17ರಂದು ಬೃಹತ್ ಪ್ರತಿಭಟನೆ

-

Profile
Ashok Nayak Oct 16, 2026 7:39 PM

ಚಿಕ್ಕಬಳ್ಳಾಪುರ: ಸಾದಲಿ ಪಶು ಆಹಾರ ಘಟಕದ ನಿರ್ವಹಣೆಯಲ್ಲಿ ಲೋಪಗಳಿದ್ದು, ಕಳಪೆ ಗುಣಮಟ್ಟದ ಪಶು ಆಹಾರ ಪೂರೈಕೆಯಾಗುತ್ತಿದೆ ಎಂದು ಆರೋಪಿಸಿರುವ ಕೋಲಾರ-ಚಿಕ್ಕಬಳ್ಳಾ ಪುರ ಹಾಲು ಒಕ್ಕೂಟಗಳ ಆಡಳಿತ ಮಂಡಳಿ, ಇದನ್ನು ಖಂಡಿಸಿ ಅ.17ರಂದು ಘಟಕದ ಎದುರು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಚಿಮುಲ್ ಅಧ್ಯಕ್ಷ ಮಂಜುನಾಥ್ ರೆಡ್ಡಿ, ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ಅಧೀನದಲ್ಲಿ ರಾಜ್ಯದ ಹಲವು ಕಡೆ ಪಶು ಆಹಾರ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಸಾದಲಿ ಘಟಕ ವನ್ನು ಖಾಸಗಿ ಸಂಸ್ಥೆಯೊಂದಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ನಿರ್ವಹಿಸುತ್ತಿರುವುದರಿಂದ ಆಹಾರದ ಗುಣಮಟ್ಟದ ಬಗ್ಗೆ ಸಮಸ್ಯೆಗಳು ಎದುರಾಗಿವೆ ಎಂದು ಆರೋಪಿಸಿದರು.

ಸಾದಲಿ ಸಮೀಪ ಪಶು ಆಹಾರ ಘಟಕ ಸ್ಥಾಪಿಸಲು ನಾಲ್ಕು ವರ್ಷಗಳ ಹಿಂದೆ ಕೋಚಿಮುಲ್ ಮುಂದಾಗಿದ್ದಾಗ ಕೆಎಂಎಫ್ ಅನುಮತಿ ನೀಡಿರಲಿಲ್ಲ. ಬಳಿಕ ಎರಡೂ ಜಿಲ್ಲೆಗಳ ಆಡಳಿತ ಮಂಡಳಿಗಳ ಗಮನಕ್ಕೆ ತಾರದೆ, ಕೋಚಿಮುಲ್ ಒಡೆತನದ ೨೬ ಎಕರೆ ಜಮೀನನ್ನು ಆಂಧ್ರ ಪ್ರದೇಶದ ಖಾಸಗಿ ಸಂಸ್ಥೆಯೊಂದಕ್ಕೆ ಪಿಪಿಪಿ ಮಾದರಿಯಲ್ಲಿ ನಿರ್ವಹಣೆಗೆ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: Chikkaballapur News: ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಿ; ಸಮಸ್ಯೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಿ

ಪಶು ಆಹಾರ ಉತ್ಪಾದಿಸುವ ಸಂಸ್ಥೆಯು ಕೋಳಿ ಆಹಾರವನ್ನೂ ತಯಾರಿಸುತ್ತಿರುವುದು ಗುಣ ಮಟ್ಟದ ಮೇಲೆ ಪರಿಣಾಮ ಬೀರಿದೆ ಎಂಬುದು ಹಾಲು ಉತ್ಪಾದಕರ ಆರೋಪವಾಗಿದೆ. ಪಶು ಆಹಾರದಲ್ಲಿ ಸುಣ್ಣ ಅಥವಾ ಎಂ-ಸ್ಯಾಂಡ್ ಮಿಶ್ರಣವಾಗಿರುವ ಶಂಕೆಯೂ ವ್ಯಕ್ತವಾಗಿದ್ದು, ಈ ಕುರಿತು ಪರೀಕ್ಷೆ ನಡೆಸುವಂತೆ ಕೆಎಂಎಫ್‌ಗೆ ಮನವಿ ಮಾಡಲಾಗಿದೆ ಎಂದರು.

ಜಿಲ್ಲೆಗೆ ಪ್ರತಿದಿನ ಸುಮಾರು 3000 ಟನ್ ಪಶು ಆಹಾರ ಪೂರೈಕೆಯಾಗುತ್ತಿದ್ದು, ಒಂದು ಚೀಲಕ್ಕೆ 1260 ರೂಪಾಯಿ ದರ ನಿಗದಿಯಾಗಿದೆ. ಆಹಾರ ತಯಾರಿಕೆಗೆ ಬಳಸುವ ಜೋಳ, ಹತ್ತಿ ಹಿಂಡಿ, ಮೊಲಾಸಿಸ್ ಸೇರಿದಂತೆ ಕಚ್ಚಾ ವಸ್ತುಗಳ ಗುಣಮಟ್ಟದ ಬಗ್ಗೆಯೂ ಪ್ರಶ್ನೆಗಳಿವೆ. ಮಂಡ್ಯದಲ್ಲೇ ಗುಣಮಟ್ಟದ ಮೊಲಾಸಿಸ್ ಲಭ್ಯವಿದ್ದರೂ ಆಂಧ್ರಪ್ರದೇಶದಿಂದ ತರಿಸುವ ಅಗತ್ಯವೇನು ಎಂದು ಪ್ರಶ್ನಿಸಿದರು.

ಕೆಎಂಎಫ್ ಸೂಚನೆಯಂತೆ ಗುಣಮಟ್ಟದ ಪಶು ಆಹಾರ ಪೂರೈಸಬೇಕು. ಬರಗಾಲದಿಂದ ಸಂಕಷ್ಟ ದಲ್ಲಿರುವ ರೈತರಿಗೆ ಕಳಪೆ ಆಹಾರ ನೀಡುವುದು ಅನ್ಯಾಯ. ಹೀಗಾಗಿ ಎರಡೂ ಜಿಲ್ಲೆಗಳ ಹೈನುಗಾರರು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ನಷ್ಟದಿಂದ ಲಾಭದತ್ತ ಸಾಗಲು ಕ್ರಮ: 2025-26ನೇ ಸಾಲಿನಲ್ಲಿ ಕೋಚಿಮುಲ್‌ಗೆ ಸುಮಾರು 25 ರಿಂದ 26 ಕೋಟಿ ರೂಪಾಯಿ ನಷ್ಟವಾಗಿದೆ. ಸಹಕಾರ ಸಂಘದ ಸ್ವಂತ ಪ್ಯಾಕಿಂಗ್ ಘಟಕ ಇಲ್ಲದಿರು ವುದು ನಷ್ಟಕ್ಕೆ ಪ್ರಮುಖ ಕಾರಣವಾಗಿದೆ. 2026-27ನೇ ಸಾಲಿನಲ್ಲಿ ಒಕ್ಕೂಟವನ್ನು ಲಾಭದತ್ತ ಕೊಂಡೊಯ್ಯಲು ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷ ಮಂಜುನಾಥ್ ರೆಡ್ಡಿ ಹೇಳಿದರು.

ಹಾಲು ಉತ್ಪಾದಕರ ಬೇಡಿಕೆ ಪರಿಗಣಿಸಿರುವ ಸರ್ಕಾರ, ನವೆಂಬರ್ 1ರಿಂದ ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಿಸಲು ನಿರ್ಧರಿಸಿದೆ. ಈ ಹೆಚ್ಚಳದಲ್ಲಿ ಶೇ.30ರಷ್ಟು ಒಕ್ಕೂಟಕ್ಕೆ ಹಾಗೂ ಶೇ.70ರಷ್ಟು ರೈತರಿಗೆ ನೀಡುವ ನಿರ್ಧಾರವನ್ನು ಸಚಿವ ಸಂಪುಟದಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೋಚಿಮುಲ್‌ನಲ್ಲಿ ಪ್ರತಿದಿನ ಸುಮಾರು 3 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಈಗಿರುವ ವ್ಯವಸ್ಥೆಯಲ್ಲೇ ಒಕ್ಕೂಟದ ಸ್ವಂತ ಪ್ಯಾಕಿಂಗ್ ಘಟಕ ಸ್ಥಾಪಿಸುವುದರಿಂದ ಮುಂದಿನ ದಿನಗಳಲ್ಲಿ ಲಾಭದ ನಿರೀಕ್ಷೆಯಿದೆ. ರೈತರ ಹಿತಾಸಕ್ತಿ ಕಾಪಾಡುವುದರ ಜೊತೆಗೆ ಗುಣಮಟ್ಟದ ಪಶು ಆಹಾರ ಪೂರೈಕೆಗೂ ಆದ್ಯತೆ ನೀಡಲಾಗುವುದು ಎಂದರು.

ಸ್ವAತ ಪಶು ಆಹಾರ ಘಟಕಕ್ಕೆ ಆಗ್ರಹ

ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ಮಾತನಾಡಿ, ರಾಜ್ಯದಲ್ಲಿ ಹಾಲು ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ ಹೊಂದಿರುವ ಕೋಚಿಮುಲ್‌ಗೆ ಸ್ವಂತ ಪಶು ಆಹಾರ ಘಟಕ ಇರಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಕೆಎಂಎಫ್ ಅಧೀನದಲ್ಲಿ ರಾಜಾನುಕುಂಟೆ, ಹಾಸನ, ಗುಬ್ಬಿ ಮತ್ತು ಶಿಕಾರಿಪುರ ಸೇರಿದಂತೆ ವಿವಿಧೆಡೆ ಪಶು ಆಹಾರ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಚಿಕ್ಕಬಳ್ಳಾಪುರದಲ್ಲಿ ಪಿಪಿಪಿ ಮಾದರಿಯಲ್ಲಿ ಘಟಕ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.

ಘಟಕವನ್ನು ಗುತ್ತಿಗೆಗೆ ನೀಡಿದ್ದರೆ ಅದರಿಂದ ಬರುವ ಆದಾಯ ಒಕ್ಕೂಟಕ್ಕೆ ದೊರೆಯಬೇಕಿತ್ತು. ಉಳಿದ ಜಮೀನನ್ನು ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಬಳಸುವ ಬಗ್ಗೆಯೂ ಚಿಂತನೆ ನಡೆಸಬೇಕು. ಸಾದಲಿ ಘಟಕದ ಎದುರು ಎರಡೂ ಜಿಲ್ಲೆಗಳ ಆಡಳಿತ ಮಂಡಳಿ ಸದಸ್ಯರು ಪ್ರತಿಭಟನೆ ನಡೆಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೋಚಿಮುಲ್ ಅಧ್ಯಕ್ಷ ಮಂಜುನಾಥ್ ರೆಡ್ಡಿ, ನಿರ್ದೇಶಕ ಉಲವಾಡಿ ಅಶ್ವತ್ಥ ನಾರಾಯಣ, ದಿನೇಶ್ ಜಿ.ಎಲ್., ಆದಿನಾರಾಯಣ ರೆಡ್ಡಿ, ಕಾಂತರಾಜು, ಶಿಡ್ಲಘಟ್ಟ ಮುನಿಯಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.