ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr.M.C.Sudhakar: ಮೂರು ವರ್ಷಗಳಲ್ಲಿ ಅಭಿವೃದ್ಧಿಗೆ ಹೊಸ ವೇಗ: ಸಾವಿರಾರು ಕೋಟಿ ಅನುದಾನ ತಂದು ಜಿಲ್ಲೆಗೆ ಅಭಿವೃದ್ಧಿಯ ಶ್ರೀಕಾರ: ಡಾ.ಎಂ.ಸಿ.ಸುಧಾಕರ್

ಶಿಡ್ಲಘಟ್ಟಕ್ಕೆ 200 ಕೋಟಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ರೇಷ್ಮೆ ನಗರಿ ಶಿಡ್ಲಘಟ್ಟದ ಬಹು ದಿನಗಳ ಬೇಡಿಕೆಯಾಗಿದ್ದ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆ 200 ಕೋಟಿ ಆಡಳಿತಾತ್ಮಕ ಅನುಮೋದನೆ ದೊರಕಿಸಿ, ಒಂದೇ ಹಂತದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಹನುಮಂತಪುರದ ಬಳಿ ಕಾಮಗಾರಿ ನಡೆಯುತ್ತಿದ್ದು, ತಲಾ 120 ಟನ್ ಸಾಮರ್ಥ್ಯದ ಎರಡು ಗೋದಾ ಮುಗಳು, ಸ್ವಯಂಚಾಲಿತ ಕನ್ವೇಯರ್ ವ್ಯವಸ್ಥೆ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗು ತ್ತಿದೆ

ಸಾವಿರಾರು ಕೋಟಿ ಅನುದಾನ ತಂದು ಜಿಲ್ಲೆಗೆ ಅಭಿವೃದ್ಧಿಯ ಶ್ರೀಕಾರ

-

Profile
Ashok Nayak Sep 26, 2026 12:23 AM

ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೂರು ವರ್ಷಗಳ ಅವಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೊಸ ವೇಗ ನೀಡಿದ ತೃಪ್ತಿ ಇದೆ. ವಿವಿಧ ಕ್ಷೇತ್ರಗಳಿಗೆ ಸಾವಿರಾರು ಕೋಟಿ ರೂ.ಗಳ ಅನುದಾನ, ಯೋಜನೆಗಳು ಹಾಗೂ ಆಡಳಿತಾತ್ಮಕ ಅನುಮೋದನೆಗಳನ್ನು ತಂದು ಅಭಿವೃದ್ಧಿಗೆ ಶ್ರೀಕಾರ ಹಾಡಲಾಗಿದೆ ಎಂದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್(Dr.M.C.Sudhakar) ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ತಮ್ಮ ಮೂರು ವರ್ಷಗಳ ಅವಧಿಯ ಅಭಿವೃದ್ಧಿ ಕಾರ್ಯಗಳ ವಿವರ ನೀಡಿದ ಅವರು, ರೇಷ್ಮೆ, ಕೃಷಿ, ಕುಡಿಯುವ ನೀರು, ಕೈಗಾರಿಕೆ, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ ಹಾಗೂ ಮೂಲಸೌಕರ್ಯಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದರು.

ಶಿಡ್ಲಘಟ್ಟಕ್ಕೆ 200 ಕೋಟಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ರೇಷ್ಮೆ ನಗರಿ ಶಿಡ್ಲಘಟ್ಟದ ಬಹು ದಿನಗಳ ಬೇಡಿಕೆಯಾಗಿದ್ದ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆ 200 ಕೋಟಿ ಆಡಳಿತಾ ತ್ಮಕ ಅನುಮೋದನೆ ದೊರಕಿಸಿ, ಒಂದೇ ಹಂತದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಹನುಮಂತಪುರದ ಬಳಿ ಕಾಮಗಾರಿ ನಡೆಯುತ್ತಿದ್ದು, ತಲಾ 120 ಟನ್ ಸಾಮರ್ಥ್ಯದ ಎರಡು ಗೋದಾಮುಗಳು, ಸ್ವಯಂಚಾಲಿತ ಕನ್ವೇಯರ್ ವ್ಯವಸ್ಥೆ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: Dr K Sudhakar: ಸಹಕಾರ ಸಂಘಗಳ ಮೂಲಕ ರೈತರ ಆರ್ಥಿಕ ಶಕ್ತಿ ಹೆಚ್ಚಲಿ: ಡಾ.ಕೆ.ಸುಧಾಕರ್

ಶಿಡ್ಲಘಟ್ಟಕ್ಕೆ ರಾಮಸಮುದ್ರದಿಂದ ಶುದ್ಧ ಕುಡಿಯುವ ನೀರು ಪೂರೈಸಲು ₹35 ಕೋಟಿ ಯೋಜನೆ ಜಾರಿಗೊಳಿಸಲಾಗಿದೆ. ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲ್ಲೂಕುಗಳ 164 ಕೆರೆಗಳಿಗೆ ಎಚ್.ಎನ್. ವ್ಯಾಲಿ ನೀರು ತುಂಬಿಸಲು ₹237 ಕೋಟಿ ಯೋಜನೆಗೆ ಅನುಮೋದನೆ ದೊರೆತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಕೈಗಾರಿಕೆ, ಹೂವಿನ ಮಾರುಕಟ್ಟೆಗೆ ಒತ್ತು

ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ವಿವಿಧೆಡೆ ಒಟ್ಟು 10,928 ಎಕರೆ ಭೂಮಿಯನ್ನು ಮೀಸಲಿ ಡುವ ಪ್ರಕ್ರಿಯೆಗೆ ಒತ್ತು ನೀಡಲಾಗಿದೆ. ಜಂಗಮಕೋಟೆ ಭಾಗದಲ್ಲಿ 1,850 ಎಕರೆ ಭೂಸ್ವಾಧೀನ ಹಾಗೂ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಚಿಂತಾಮಣಿ ಭಾಗದ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನೂ ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸಿ ಪರಿಹರಿಸಲು ಕ್ರಮವಹಿಸಲಾಗಿದೆ ಎಂದರು.

ಚಿಕ್ಕಬಳ್ಳಾಪುರದಲ್ಲಿ ಹೂ ಬೆಳೆಗಾರರ ಬಹುದಿನಗಳ ಬೇಡಿಕೆಯಾದ ಹೈಟೆಕ್ ಹೂವಿನ ಮಾರುಕಟ್ಟೆ ಗೆ 141 ಕೋಟಿ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಸುಮಾರು 20 ಎಕರೆ ಪ್ರದೇಶದಲ್ಲಿ ಮಾರುಕಟ್ಟೆ ನಿರ್ಮಾಣ ಉದ್ದೇಶಿಸಲಾಗಿದೆ ಎಂದರು.

ನಂದಿ ಬೆಟ್ಟಕ್ಕೆ ರೋಪ್‌ವೇ, ಪ್ರವಾಸೋದ್ಯಮಕ್ಕೆ ಉತ್ತೇಜನ

ನಂದಿಗಿರಿಧಾಮದ ಪ್ರವಾಸೋದ್ಯಮ ಅಭಿವೃದ್ಧಿಗೆ 93.40 ಕೋಟಿ ವೆಚ್ಚದ ರೋಪ್‌ವೇ ಯೋಜನೆ ರೂಪುಗೊಂಡಿದ್ದು, ಭೂಮಿ ಸಮಸ್ಯೆ ಪರಿಹರಿಸಿದ ಪರಿಣಾಮ ಲೋವರ್ ಟರ್ಮಿನಲ್ ಕಾಮಗಾರಿ ಆರಂಭವಾಗಿದೆ. ಪ್ರವಾಸಿಗರಿಗಾಗಿ ಪಾರ್ಕಿಂಗ್, ಆಹಾರ ಮಳಿಗೆ, ಕುಡಿಯುವ ನೀರು ಹಾಗೂ ಶೌಚಾಲಯ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

ನಂದಿ ಬೆಟ್ಟದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ನಂದಿಗ್ರಾಮ ಹಾಗೂ ಕೈವಾರದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲು, ಕೈವಾರ-ಅಲೀಪುರವನ್ನು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿಸಲು ಹಾಗೂ ನಂದಿಬೆಟ್ಟದಲ್ಲಿ 9 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ಅನುಮೋದನೆ ಪಡೆಯಲಾಗಿದೆ ಎಂದರು.

ಆರೋಗ್ಯ ಕ್ಷೇತ್ರಕ್ಕೂ ವಿಶೇಷ ಆದ್ಯತೆ

ನಂದಿ ಮೆಡಿಕಲ್ ಕಾಲೇಜಿಗೆ ಆರಂಭದಲ್ಲಿ 530 ಕೋಟಿ ಅನುಮೋದನೆಯಾಗಿದ್ದರೂ ₹ಯ850 ಕೋಟಿಗೆ ಹೆಚ್ಚಿಸಲಾಗಿದೆ. ಬಾಕಿ ಉಳಿದಿದ್ದ 340 ಕೋಟಿ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿಸಿ ಕಾಮಗಾರಿ ಮುಂದುವರಿಸಲು ಕ್ರಮ ಕೈಗೊಳ್ಳಲಾಗಿದೆ. ವೈದ್ಯಕೀಯ ಸಲಕರಣೆಗಳಿಗಾಗಿ 40 ಕೋಟಿ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಹಳೆಯ ಸಿಟಿ ಸ್ಕ್ಯಾನ್ ಬದಲಾವಣೆ, ಎಂಆರ್‌ಐ ಸ್ಕ್ಯಾನ್ ಸ್ಥಾಪನೆಗೆ 11 ಕೋಟಿ ಮಂಜೂರು ಮಾಡಿಸಲಾಗಿದೆ. ಸುಸಜ್ಜಿತ ಡಯಾಗ್ನಸ್ಟಿಕ್ ಲ್ಯಾಬ್‌ಗಾಗಿ 8 ಕೋಟಿ ಒದಗಿಸಲಾಗಿದೆ ಎಂದರು.

ಬಾಗೇಪಲ್ಲಿ ಮತ್ತು ಚಿಂತಾಮಣಿ ಆಸ್ಪತ್ರೆಗಳಿಗೆ ತಲಾ 10 ಕೋಟಿ ಮಂಜೂರು ಮಾಡಿಸಲಾಗಿದ್ದು, ಮಂಚೇನಹಳ್ಳಿ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಮೂಲಸೌಕರ್ಯ ವಿಸ್ತರಣೆ

ಚಿಕ್ಕಬಳ್ಳಾಪುರ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಶೆಡ್‌ಗಳಲ್ಲಿ ಕಲಿಯುವ ಪರಿಸ್ಥಿತಿಗೆ ತೆರೆ ಎಳೆಯಲು 6 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ಎಂಜಿ ರಸ್ತೆ ಪದವಿ ಕಾಲೇಜಿಗೆ 6 ಕೋಟಿ, ಗೌರಿಬಿದನೂರು ಕಾಲೇಜಿಗೆ 10 ಕೋಟಿ, ಗುಡಿಬಂಡೆಗೆ 6.5 ಕೋಟಿ, ಬಾಗೇಪಲ್ಲಿಗೆ 3 ಕೋಟಿ, ಶಿಡ್ಲಘಟ್ಟಕ್ಕೆ 3 ಕೋಟಿ ಹಾಗೂ ಚಿಂತಾಮಣಿಗೆ 25 ಕೋಟಿ ಅನುದಾನ ನೀಡಲಾಗಿದೆ.

ಗೌರಿಬಿದನೂರು ಮತ್ತು ಬಾಗೇಪಲ್ಲಿ ಪಾಲಿಟೆಕ್ನಿಕ್‌ಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗಿದೆ. ಚಿಂತಾಮಣಿಯ ಪಾಲಿಟೆಕ್ನಿಕ್‌ಗೆ 76 ಕೋಟಿ ಹಾಗೂ ವಿಟಿಯು ಕಟ್ಟಡಕ್ಕೆ 165 ಕೋಟಿ ವೆಚ್ಚದ ಕಾಮಗಾರಿಗಳು ನಡೆಯುತ್ತಿವೆ ಎಂದರು.

ನೀರಾವರಿ ಯೋಜನೆಗಳಿಗೂ ಆದ್ಯತೆ

ಎತ್ತಿನಹೊಳೆ ಯೋಜನೆಯ ಪೈಪ್ ಅಳವಡಿಕೆ ಹಾಗೂ ಭೂಸ್ವಾಧೀನ ಪ್ರಕ್ರಿಯೆಗೆ ವೇಗ ನೀಡಲಾ ಗಿದೆ. ಬಾಗೇಪಲ್ಲಿಯ ಗಂಟ್ಲಮಲ್ಲಮ್ಮ ಕಣಿವೆ ಯೋಜನೆಗೆ 191 ಕೋಟಿ ಅನುಮೋದನೆ ದೊರೆತಿದೆ. ವಾಟದಹೊಸಹಳ್ಳಿ ಕುಡಿಯುವ ನೀರಿನ ಯೋಜನೆಗೆ 85 ಕೋಟಿ ಒದಗಿಸಲಾಗಿದೆ ಎಂದರು.

ಉತ್ತರ ವಿಶ್ವವಿದ್ಯಾಲಯದ ಆಡಳಿತ ಕಟ್ಟಡಕ್ಕೆ ತಮ್ಮ ಅವಧಿಯಲ್ಲಿ 88 ಕೋಟಿ ಅನುದಾನ ನೀಡಿ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದ್ದು, ನಂತರ 120 ಕೋಟಿ ವೆಚ್ಚದ ಎರಡನೇ ಹಂತದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿದೆ ಎಂದರು.

ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಿದ ಸುಬ್ಬಾರೆಡ್ಡಿ, ಪುಟ್ಟಸ್ವಾಮಿಗೌಡ, ಪ್ರದೀಪ್ ಈಶ್ವರ್, ರವಿಕುಮಾರ್, ಶಿವಶಂಕರ್‌ರೆಡ್ಡಿ ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ವಿಧಾನಪರಿಷತ್ ಸದಸ್ಯರು ಹಾಗೂ ಮುಖಂಡರಿಗೆ ಡಾ.ಎಂ.ಸಿ.ಸುಧಾಕರ್ ಧನ್ಯವಾದ ಸಲ್ಲಿಸಿದರು.