Shidlaghatta News: ಅಕ್ಷರಾಭ್ಯಾಸಕ್ಕೆ ಪೇಜಾವರ ಶ್ರೀಗಳ ಆಶೀರ್ವಾದ; ನೂತನ ಕಟ್ಟಡ ಉದ್ಘಾಟನೆ
ಮಕ್ಕಳ ಜೀವನದಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಮೌಲ್ಯಗಳ ಬೆಳವಣಿಗೆಯೂ ಅತ್ಯಂತ ಮುಖ್ಯ ವಾಗಿದೆ. ಅಕ್ಷರಾಭ್ಯಾಸವು ಶಿಕ್ಷಣ ಜೀವನದ ಮೊದಲ ಹೆಜ್ಜೆಯಾಗಿದ್ದು, ಭವಿಷ್ಯದ ಸುಂದರ ಬದುಕಿಗೆ ಭದ್ರ ಬುನಾದಿ ಹಾಕುತ್ತದೆ ಎಂದು ತಿಳಿಸಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡುವಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ
-
ಶಿಡ್ಲಘಟ್ಟ: ನಗರದ ಹೊರವಲಯದಲ್ಲಿರುವ ಶ್ರೀ ಲಕ್ಷ್ಮೀ ವಿದ್ಯಾನಿಕೇತನ ಶಾಲೆಯಲ್ಲಿ ಅಕ್ಷರಾ ಭ್ಯಾಸ ಕಾರ್ಯಕ್ರಮ ಹಾಗೂ ನೂತನ ಪ್ರಿ-ಎಲ್‌ಕೆಜಿ ಮತ್ತು ಎಲ್‌ಕೆಜಿ ಕಟ್ಟಡ ಉದ್ಘಾಟನಾ ಸಮಾರಂಭ ಸಂಭ್ರಮದಿಂದ ನಡೆಯಿತು.
ಉಡುಪಿಯ ಶ್ರೀಕೃಷ್ಣ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ(
Sri Vishwaprasanna Theertha Swamiji)ಯವರು ಕಾರ್ಯ ಕ್ರಮದಲ್ಲಿ ಭಾಗವಹಿಸಿ ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಆಶೀರ್ವಚನ ನೀಡಿದರು. ಬಳಿಕ ನೂತನ ಕಟ್ಟಡ ಉದ್ಘಾಟಿಸಿ ವೀಕ್ಷಣೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಯವರು, ಮಕ್ಕಳ ಜೀವನದಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಮೌಲ್ಯಗಳ ಬೆಳವಣಿಗೆಯೂ ಅತ್ಯಂತ ಮುಖ್ಯವಾಗಿದೆ. ಅಕ್ಷರಾಭ್ಯಾಸವು ಶಿಕ್ಷಣ ಜೀವನದ ಮೊದಲ ಹೆಜ್ಜೆಯಾಗಿದ್ದು, ಭವಿಷ್ಯದ ಸುಂದರ ಬದುಕಿಗೆ ಭದ್ರ ಬುನಾದಿ ಹಾಕುತ್ತದೆ ಎಂದು ತಿಳಿಸಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡುವಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಶ್ರೀ ಲಕ್ಷ್ಮೀ ವಿದ್ಯಾನಿಕೇತನ ಶಾಲೆ ಶಿಡ್ಲಘಟ್ಟ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಶೈಕ್ಷಣಿಕ ವಾತಾವರಣ ನಿರ್ಮಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಸಂಸ್ಥಾಪಕ ದೇವರಾಜ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಆಶೀರ್ವದಿಸಿದ ಸ್ವಾಮೀಜಿಯವರು, ಶಾಲೆಯ ಮುಂದಿನ ಶೈಕ್ಷಣಿಕ ಚಟುವಟಿಕೆಗಳಿಗೆ ಶುಭ ಹಾರೈಸಿದರು.
ಶಾಲೆಯ ಸಂಸ್ಥಾಪಕ ದೇವರಾಜ್ ಮಾತನಾಡಿ, ಪೇಜಾವರ ಪರಂಪರೆಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಆಶೀರ್ವಾದ ನಮ್ಮ ಶಾಲೆಗೆ ದೊರೆತಿರುವುದು ಸೌಭಾಗ್ಯದ ಸಂಗತಿಯಾಗಿದ್ದು, ಅಕ್ಷರಾಭ್ಯಾಸ ಹಾಗೂ ನೂತನ ಕಟ್ಟಡ ಉದ್ಘಾಟನೆ ಶಾಲೆಯ ಇತಿಹಾಸದಲ್ಲಿ ಸ್ಮರಣೀಯ ಕ್ಷಣ ವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಸಿಬ್ಬಂದಿ, ಪೋಷಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.