Students' dangerous journey: ಖಾಸಗಿ ಬಸ್ಸುಗಳ ಧನದಾಹ: ಫುಟ್ʼಬೋರ್ಡ್ ಮೇಲಷ್ಟೇ ಅಲ್ಲ, ರೂಫ್ ಟಾಪ್ ಮೇಲೂ ವಿದ್ಯಾರ್ಥಿಗಳ ಅಪಾಯಕಾರಿ ಪ್ರಯಾಣ!
ಚಿಂತಾಮಣಿ ತಾಲ್ಲೂಕಿನಲ್ಲಿ ಖಾಸಗಿ ಬಸ್ ಮಾಲೀಕರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯ ಧೋರಣೆ ಮಿತಿಮೀರಿದ್ದು, ವಿದ್ಯಾರ್ಥಿಗಳು ಮತ್ತು ಸಾರ್ವ ಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದು ಮುಂದುವರೆದಿದೆ.ಬಸ್‌ಗಳ ಒಳಗೆ ನಿಲ್ಲಲು ಜಾಗವಿಲ್ಲದಿದ್ದರೂ ಕೇವಲ ಹಣದ ಆಸೆಗೆ ಬಸ್ ಸಿಬ್ಬಂದಿ ಜನರನ್ನು ಕುರಿ ತುಂಬುವಂತೆ ತುಂಬುತ್ತಿದ್ದಾರೆ.
-
ಚಿಂತಾಮಣಿ: ವಾಣಿಜ್ಯ ನಗರಿ ಚಿಂತಾಮಣಿ ತಾಲ್ಲೂಕಿನಲ್ಲಿ ಖಾಸಗಿ ಬಸ್ ಮಾಲೀಕರ ಬೇಜವಾ ಬ್ದಾರಿತನ ಹಾಗೂ ನಿರ್ಲಕ್ಷ್ಯ ಧೋರಣೆ ಮಿತಿ ಮೀರಿದ್ದು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದು ಮುಂದುವರೆದಿದೆ.
ಬಸ್‌ಗಳ ಒಳಗೆ ನಿಲ್ಲಲು ಜಾಗವಿಲ್ಲ ದಿದ್ದರೂ ಕೇವಲ ಹಣದ ಆಸೆಗೆ ಬಸ್ ಸಿಬ್ಬಂದಿ ಜನರನ್ನು ಕುರಿ ತುಂಬುವಂತೆ ತುಂಬುತ್ತಿದ್ದಾರೆ.
ಚಿಂತಾಮಣಿ ಕಡೆಯಿಂದ ಹಳ್ಳಿ ಪ್ರದೇಶಕ್ಕೆ ಹೋಗುತ್ತಿರುವ ಖಾಸಗಿ ಬಸ್‌ವೊಂದರ ಫುಟ್ಬೋರ್ಡ್ (ಮೆಟ್ಟಿಲು)ಮೇಲೆ ತೂಗಾಡುತ್ತಾ ವಿದ್ಯಾರ್ಥಿಗಳು ಪ್ರಯಾಣಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಅಷ್ಟೇ ಅಲ್ಲದೆ,ಬಸ್ಸಿನ ಟಾಪ್(ಛಾವಣಿ)ಮೇಲೂ ಹತ್ತಾರು ವಿದ್ಯಾರ್ಥಿಗಳು ಯಾವುದೇ ಸುರಕ್ಷತೆ ಯಿಲ್ಲದೆ ಕುಳಿತುಕೊಂಡು ಪ್ರಯಾಣಿಸುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಬಸ್ಸಿನ ಚಾಲಕ ಅತಿ ವೇಗವಾಗಿ ಮತ್ತು ಅಸಮರ್ಪಕ ರಸ್ತೆಗಳಲ್ಲಿ ಬಸ್ ಚಲಾಯಿಸುತ್ತಿದ್ದರೂ, ಬಾಗಿಲಲ್ಲಿ ನೇತಾಡುತ್ತಿರುವವರ ಬಗ್ಗೆ ಕನಿಷ್ಠ ಕಾಳಜಿಯನ್ನೂ ತೋರುತ್ತಿಲ್ಲ.
ಇದನ್ನೂ ಓದಿ: Chinthamani News: ಚಿಂತಾಮಣಿಯಲ್ಲಿ ಬೃಹತ್ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಪ್ರತಿದಿನ ಸಾರ್ವಜನಿಕ ರಸ್ತೆಗಳಲ್ಲೇ ಇಂತಹ ಜೀವಹಿಂಡುವ ದೃಶ್ಯಗಳು ಕಂಡುಬರುತ್ತಿದ್ದರೂ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (RTO)ಮತ್ತು ಸಂಚಾರಿ ಪೊಲೀಸರು ಮಾತ್ರ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ. ನಿಯಮ ಉಲ್ಲಂಘಿಸುವ ಇಂತಹ ಬಸ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಅಥವಾ ರಹದಾರಿ(ಪರ್ಮಿಟ್) ರದ್ದುಗೊಳಿಸುವ ಕೆಲಸವಾಗುತ್ತಿಲ್ಲ ಎಂಬ ಸಾರ್ವಜನಿಕ ವಲಯದ ಆಕ್ರೋಶಕ್ಕೆ ಈ ದೃಶ್ಯಗಳು ಸಾಕ್ಷಿಯಾಗಿವೆ.
"ಯಾವುದಾದರೂ ದೊಡ್ಡ ಅನಾಹುತ ಸಂಭವಿಸಿದ ಮೇಲೆ ಇಲಾಖೆ ಎಚ್ಚೆತ್ತುಕೊಳ್ಳುತ್ತದೆಯೇ?ನಿಯಮ ಉಲ್ಲಂಘಿಸುವ ಬಸ್ ಮಾಲೀಕರು ಮತ್ತು ಚಾಲಕರ ವಿರುದ್ಧ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು,"ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಸರ್ಕಾರಿ ಬಸ್‌ಗಳ ಕೊರತೆಯನ್ನೇ ಬಂಡವಾಳ ಮಾಡಿ ಕೊಂಡಿರುವ ಖಾಸಗಿ ಬಸ್ ಆಪರೇಟರ್‌ಗಳ ಈ ದಂಧೆಗೆ ಬ್ರೇಕ್ ಬೀಳಬೇಕಿದೆ. ಉನ್ನತ ಅಧಿಕಾರಿಗಳು ಈ ಕೂಡಲೇ ಮಿತಿಮೀರಿದ ಪ್ರಯಾಣಿಕರನ್ನು ತುಂಬುವ ಖಾಸಗಿ ಬಸ್‌ಗಳ ವಿರುದ್ಧ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಬೇಕಿದೆ.