ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಆಲೂಗಡ್ಡೆಗೆ ಬೆಂಬಲ ಬೆಲೆ, ಸರಕಾರಿ ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ

ನಮ್ಮದು ನದಿ ಮೂಲಗಳಿಲ್ಲದ ಬಯಲು ಸೀಮೆ ಪ್ರದೇಶವಾಗಿದ್ದು, ರೈತರು ಸಾವಿರಾರು ಅಡಿ ಆಳದ ಬೋರ್‌ ವೆಲ್‌ಗಳನ್ನು ಕೊರೆದು ಕೃಷಿ ಮಾಡುತ್ತಿದ್ದಾರೆ. ಬಿತ್ತನೆ ಬೀಜದ ಒಂದು ಮೂಟೆಗೆ 1500ರಿಂದ 2000ರವರೆಗೆ ವೆಚ್ಚ ಮಾಡಿ ಬೆಳೆ ಬೆಳೆದರೂ, ಸೂಕ್ತ ಬೆಲೆ ಸಿಗದೇ ಭಾರೀ ನಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸರಕಾರ ರೈತರ ನೆರವಿಗೆ ಬರಬೇಕು

ಆಲೂಗಡ್ಡೆಗೆ ಸರಕಾರಿ ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ

ಆಲೂಗಡ್ಡೆಗೆ ಬೆಂಬಲ ಬೆಲೆ ನಿಗದಿ, ನಷ್ಟ ಪರಿಹಾರ ಹಾಗೂ ಜಿಲ್ಲಾ ಕೇಂದ್ರದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. -

Profile
Ashok Nayak Apr 18, 2026 10:44 PM

ಚಿಕ್ಕಬಳ್ಳಾಪುರ: ಆಲೂಗಡ್ಡೆಗೆ ಬೆಂಬಲ ಬೆಲೆ ನಿಗದಿ, ನಷ್ಟ ಪರಿಹಾರ ಹಾಗೂ ಜಿಲ್ಲಾ ಕೇಂದ್ರದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಶಿಡ್ಲಘಟ್ಟ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಶನಿವಾರ ಆಲೂಗಡ್ಡೆಯನ್ನು ರಸ್ತೆಗೆ ಚೆಲ್ಲಿ ಪ್ರತಿಭಟಿಸಿದರು. ಪ್ರತಿಭಟನಾರ್ಥವಾಗಿ  ಸಾರ್ವಜನಿಕರಿಗೆ ಉಚಿತವಾಗಿ ಆಲೂಗಡ್ಡೆ ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿ ಗಮನ ಸೆಳೆದರು.

ಆಲೂಗಡ್ಡೆ ಬೆಳೆದ ರೈತರು ಸಂಕಷ್ಟದಲ್ಲಿದ್ದು ರೈತರಿಗೆ ತಕ್ಷಣ ಬೆಂಬಲ ಬೆಲೆ ಘೋಷಿಸಬೇಕು. ಚಿಕ್ಕಬಳ್ಳಾಪುರದಲ್ಲಿ ಸರಕಾರಿ ಒಡೆತನದ ಕೋಲ್ಡ್ ಸ್ಟೋರೇಜ್ ಶೀಘ್ರವೇ ಪ್ರಾರಂಭಿಸಬೇಕೆAದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಕೆಪಿಆರ್‌ಎಸ್ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ನಮ್ಮದು ನದಿ ಮೂಲಗಳಿಲ್ಲದ ಬಯಲು ಸೀಮೆ ಪ್ರದೇಶವಾಗಿದ್ದು, ರೈತರು ಸಾವಿರಾರು ಅಡಿ ಆಳದ ಬೋರ್‌ ವೆಲ್‌ಗಳನ್ನು ಕೊರೆದು ಕೃಷಿ ಮಾಡುತ್ತಿದ್ದಾರೆ. ಬಿತ್ತನೆ ಬೀಜದ ಒಂದು ಮೂಟೆಗೆ 1500ರಿಂದ 2000ರವರೆಗೆ ವೆಚ್ಚ ಮಾಡಿ ಬೆಳೆ ಬೆಳೆದರೂ, ಸೂಕ್ತ ಬೆಲೆ ಸಿಗದೇ ಭಾರೀ ನಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸರಕಾರ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: Chikkaballapur News: ಏ.23ರಿಂದ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ: ಜಿಲ್ಲಾಧಿಕಾರಿ ಜಿ.ಪ್ರಭು

ಈ ಬಾರಿ ಆಲೂಗಡ್ಡೆ ಬೆಳೆದ ರೈತರು ಬೆಳೆಬೆಳೆಯಲು ಹೂಡಿಕೆ ಮಾಡಿದ ಬಂಡವಾಳವೂ ಮರಳಿ ಸಿಗದ ದುಸ್ಥಿತಿ ನಿರ್ಮಾಣವಾಗಿದೆ.ರೈತರಿದ್ದರೆ ದೇಶ ಇಲ್ಲದಿದ್ದರೆ ವಿನಾಶ ಎಂದು ವಿಷಾಧಿಸಿದರು.

ಜಿಲ್ಲೆಯಲ್ಲಿ ಕೇವಲ ಎರಡು ಖಾಸಗಿ ಕೋಲ್ಡ್ ಸ್ಟೋರೇಜ್‌ಗಳಿದ್ದು, ಅವುಗಳಲ್ಲಿ ಈಗಾಗಲೇ ಸುಮಾರು 1.09 ಲಕ್ಷ ಆಲೂಗಡ್ಡೆ ಮೂಟೆಗಳು ಭರ್ತಿಯಾಗಿವೆ. ಇದರಿಂದ ಅನೇಕ ರೈತರು ತಮ್ಮ ತೋಟಗಳಲ್ಲೇ ಆಲೂಗಡ್ಡೆ ಸಂಗ್ರಹಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಉಷ್ಣತೆಯ ಏರಿಕೆಯಿಂದ ಬೆಳೆ ಕೊಳೆಯುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು. ಆದ್ದರಿಂದ ಸರ್ಕಾರವು ತಕ್ಷಣವೇ ಆಲೂಗಡ್ಡೆಗೆ ಬೆಂಬಲ ಬೆಲೆ ನಿಗದಿ ಮಾಡಿ, ಡಾ. ಸ್ವಾಮಿನಾಥನ್ ವರದಿ ಅನ್ವಯ ಪರಿಹಾರ ಒದಗಿಸಬೇಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಕೋಲ್ಡ್ ಸ್ಟೋರೇಜ್ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಚನ್ನರಾಯಪ್ಪ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತರ ಜೀವನದ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಯಾವುದೇ ಕಾಳಜಿ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾವಿರಾರು ರೂಪಾಯಿ ಬಂಡವಾಳ ಹೂಡಿದರೂ, ಒಂದು ಮೂಟೆ ಆಲೂಗಡ್ಡೆಗೆ ?೫೦೦ರೂ ಕೂಡ ಸಿಗದ ಪರಿಸ್ಥಿತಿ ಎದುರಾಗಿದೆ. ಸಾಲ ಮಾಡಿ ಬೆಳೆ ಬೆಳೆದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ಜಿಲ್ಲೆಯ ರೈತರು ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರೂ, ಸೂಕ್ತ ದರ ಸಿಗದೇ ಅವರ ಪರಿಸ್ಥಿತಿ ದಯನೀಯವಾಗಿದೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು  ಶಾಸಕರು, ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು  ರೈತರ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಟೀಕಿಸಿದರು. ರೈತರು ಉಳಿದರೆ ಮಾತ್ರ ದೇಶ ಉಳಿಯುತ್ತದೆ ಆದ್ದರಿಂದ ಸರ್ಕಾರವು ತಕ್ಷಣವೇ ಬೇಡಿಕೆಗಳನ್ನು ಈಡೇರಿಸ ಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆ ಬಳಿಕ ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರವನ್ನು ಸಲ್ಲಿಸ ಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಶಿವಪ್ಪ, ವೆಂಕಟರಮಣಪ್ಪ ಬಾಬು, ನರಸಿಂಹ ರೆಡ್ಡಿ, ರಾಮಕೃಷ್ಣಪ್ಪ, ಶ್ರೀನಿವಾಸ್,ಮುನಿನಾರಾಯಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.