ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: 10 ಸಾವಿರ ಮಂದಿಗೆ ಉಚಿತ ಸೂರು ಕಲ್ಪಿಸುವ ಸಂಕಲ್ಪಕ್ಕೆ ಚಾಲನೆ ನೀಡಿದ ಸಮಾಜ ಸೇವಕ ಸಿ.ಎಂ. ಬೈರೇಗೌಡ

ಅವರಿವರೆನ್ನದೆ ಮನುಷ್ಯ ಮನುಷ್ಯರಿಗೆ ನೆರವಾಗುವುದೇ ರಾಷ್ಟ್ರಕವಿ ಕುವೆಂಪು ಹೇಳುವ ಮನುಜ ಮತ ವಿಶ್ವಪಥದ ಸಂದೇಶವಾಗಿದೆ. ಇದನ್ನು ಅರ್ಥ ಅರಿತಿರುವ ನಾನು ಮತ್ತು ನಮ್ಮ ಸಮಿತಿ ಜಿಲ್ಲೆಯ 8 ತಾಲೂಕುಗಳಲ್ಲಿ ಸಂಚರಿಸಿ ಇಂದಿಗೂ ಗುಡಿಸಿಲುಗಳಲ್ಲಿ, ಟೆಂಟು ಗಳಲ್ಲಿ, ತಡಿಕೆಗಳಲ್ಲಿ, ಬಸ್ ತಂಗುದಾಣಗಳಲ್ಲಿ ಆಶ್ರಯ ಪಡೆದು ವಾಸ ಮಾಡುತ್ತಿರುವ ನಿರ್ಗತಿಕರಿಗೆ ನೆರವಾಗಲು ಮುಂದಾಗಿದ್ದೇವೆ

ಸೂರು ಕಲ್ಪಿಸುವ ಸಂಕಲ್ಪಕ್ಕೆ ಚಾಲನೆ ನೀಡಿದ ಸಿ.ಎಂ. ಬೈರೇಗೌಡ

-

Ashok Nayak
Ashok Nayak Feb 21, 2026 11:08 PM

ಚಿಕ್ಕಬಳ್ಳಾಪುರ : ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸೂರಿಲ್ಲದವರ ಸಂಖ್ಯೆ ಹೇರಳವಾಗಿದೆ. ಇದನ್ನು ಮನಗಂಡ ಕರ್ನಾಟಕ ಮಾನವ ಹಕ್ಕುಗಳ ಕಮಿಟಿ ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಸೂರಿಲ್ಲದ ಮಂದಿಗೆ ಸೂರು (A Roof for the homeless)ಕಲ್ಪಿಸುವ ಬೃಹತ್ ಸಂಕಲ್ಪಕ್ಕೆ ಸಮಾಜದ ಸಹಕಾರ ವಿರಲಿ ಎಂದು ಸಂಸ್ಥಾಪಕ ಅಧ್ಯಕ್ಷ ಸಿ.ಎಂ.ಬೈರೇಗೌಡ ಮನವಿ ಮಾಡಿದರು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಕಮಿಟಿ ವತಿಯಿಂದ ಅಬ್ಲೂಡು ಗ್ರಾಮದ ವೃತ್ತದಲ್ಲಿ ಶನಿವಾರ ಏರ್ಪಡಿಸಿದ್ದ ಮನೆ ನಿರ್ಮಾಣದ ಪರಿಕರಗಳ ಉಚಿತ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.

ಕುವೆಂಪು ಸಂದೇಶ ಸಾಕಾರ!!
ಅವರಿವರೆನ್ನದೆ ಮನುಷ್ಯ ಮನುಷ್ಯರಿಗೆ ನೆರವಾಗುವುದೇ ರಾಷ್ಟ್ರಕವಿ ಕುವೆಂಪು ಹೇಳುವ ಮನುಜ ಮತ ವಿಶ್ವಪಥದ ಸಂದೇಶವಾಗಿದೆ. ಇದನ್ನು ಅರ್ಥ ಅರಿತಿರುವ ನಾನು ಮತ್ತು ನಮ್ಮ ಸಮಿತಿ ಜಿಲ್ಲೆಯ 8 ತಾಲೂಕುಗಳಲ್ಲಿ ಸಂಚರಿಸಿ ಇಂದಿಗೂ ಗುಡಿಸಿಲುಗಳಲ್ಲಿ, ಟೆಂಟು ಗಳಲ್ಲಿ, ತಡಿಕೆಗಳಲ್ಲಿ, ಬಸ್ ತಂಗುದಾಣಗಳಲ್ಲಿ ಆಶ್ರಯ ಪಡೆದು ವಾಸ ಮಾಡುತ್ತಿರುವ ನಿರ್ಗತಿಕರಿಗೆ ನೆರವಾಗಲು ಮುಂದಾಗಿದ್ದೇವೆ.ಈ ಸೇವೆಯನ್ನು ಸ್ವಂತ ಖರ್ಚಿನಿಂದ ಮಾಡುವ ಸಂಕಲ್ಪ ತೊಡಲಾಗಿದ್ದು ಸಮಾಜದ ಸಹಾಯವೂ ಜತೆಗೂಡಿದರೆ ಜಿಲ್ಲೆಯನ್ನು ಗುಡಿಸಲು ಮುಕ್ತ ಮಾಡಬಹುದು ಎಂದರು.

ಇದನ್ನೂ ಓದಿ: Chikkaballapur news: 25ನೇ ವರ್ಷದ ಸಂಸ್ಥಾಪನಾ ದಿನಾಚರಣೆ: ರೈತರಿಗೆ ಕೀಟನಾಶಗಳ ಬಗ್ಗೆ ಜಾಗೃತಿ ಕಾರ್ಯಕ್ರಮ

ಮಾದರಿಯಾಗಲಿ

ನಮ್ಮ ಸಂಸ್ಥೆಯ ಪರೋಪಕಾರದ ಈ ಯೋಜನೆಯ ಅವಧಿ 10 ವರ್ಷಗಳಾಗಿದ್ದು ಹಂತಹಂತವಾಗಿ ಬಡವರಿಗೆ ಆಸರೆಯಾಗುವ ಕೈಂಕರ್ಯವಿದೆ. ಗಂಡ ಹೆಂಡತಿ ಇರುವ ಒಂದು ಕುಟುಂಬಕ್ಕೆ 600 ಇಟ್ಟಿಗೆ, 25 ಮೂಟೆ ಸಿಮೆಂಟ್, ೧ ಕಿಟಕಿ, 1 ಬಾಗಿಲು, ಛಾವಣಿಗೆ ತಗಡಿನ ಶೀಟುಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಹಾಗೆಯೇ ತಂದೆತಾಯಿ ಅತ್ತೆ ಮಾವ ಹೀಗೆ ಇದ್ದಲ್ಲಿ 800 ಇಟ್ಟಿಗೆ ಜತೆಗೆ ಕಿಟಕಿ ಬಾಗಿಲಿ ಸಿಮೆಂಟ್, ಒಂದು ವೇಳೆ ಅಂಗವಿಕಲ ರಿದ್ದಲ್ಲಿ 1 ಸಾವಿರ ಇಟ್ಟಿಗೆ ಸಹಿತ ಎಲ್ಲಾ ಪರಿಕರ ನೀಡಲಾಗುವುದು. ಒಟ್ಟಾರೆ ಮನುಷ್ಯ ರಾದವರಿಗೆ ತಲೆಮೇಲೆ ಸ್ವಂತ ಸೂರಿದ್ದಲ್ಲಿ ಹೇಗೋ ಬದುಕು ಸಾಗಿಸಬಹುದು ಎಂದು ಭಾವಿಸಿ ಈ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

cbpm1sooru

ಯಾರಿಗೆಲ್ಲಾ ಈ ಸೌಲಭ್ಯ??

ಮಾನವ ಹಕ್ಕುಗಳ ಕಮಿಟಿ ೪ ಹಂತಗಳಲ್ಲಿ ಫಲಾನುಭವಿಗಳ ಆಯ್ಕೆ ಮಾಡಲಿದ್ದು ಅದರಂತೆ ಯಾವುದೇ ಸಮುದಾಯದವರಿರಲಿ ಕಡುಬಡವರಾಗಿರಬೇಕು. ಗುಡಿಸಲಿನಲ್ಲಿ ವಾಸಿಸುವವರಾಗಿರಬೇಕು. ೧ ಎಕರೆಗಿಂತ ಹೆಚ್ಚು ಭೂಮಿ ಹೊಂದಿರಬಾರದು. ಫಲಾನು ಭವಿಯ ಮಕ್ಕಳು ಸರಕಾರಿ ಶಾಲೆಗಳಲ್ಲಿ ಓದುತ್ತಿರಬೇಕು. ನೀರಾವರಿ ಸೌಲಭ್ಯ ವಂಚಿತ ರಾಗಿರಬೇಕು. ದ್ವಿಚಕ್ರವಾಹನ ಬಿಟ್ಟು ಬೇರೆ ಯಾವುದೇ ವಾಹನ ಹೊಂದಿರಬಾರದು. ಅಂತಹವರಿಗೆ ಉಚಿತ ಸೂರು ಕಲ್ಪಿಸಲು ಆಧ್ಯತೆ ನೀಡಲಾಗುವುದು.

ಲಾಭದ ಹಣದಲ್ಲಿ ಸೇವೆ??

ಮಾನವ ಹಕ್ಕುಗಳ ಕಮಿಟಿ ವತಿಯಿಂದ ಹಾಲೋಬ್ರಿಕ್ಸ್ ಇಟ್ಟಿಗೆ ಫ್ಯಾಕ್ಟರಿ ಇಟ್ಟಿದ್ದು ಇದರಲ್ಲಿ ಬರುವ ಲಾಭಾಂಶದಲ್ಲಿ ಬಡ ನಿರ್ಗತಿಕರಿಗೆ ಸೂರು ಕಲ್ಪಿಸುವ ಯೋಜನೆ ಮುಂದುವರೆಸಲಾಗುವುದು.ಸಮಾಜ ಸೇವೆ ಮಾಡಲು ರಾಜಕೀಯ ಅಧಿಕಾರವೇ ಇರಬೇಕು ಎಂದೇನಿಲ್ಲ. ಒಳ್ಳೆಯ ಮನಸ್ಸಿದ್ದರೆ ಸಾಕು.ನೊಂದವರ ಕಣ್ಣೀರು ಒರೆಸುವ ಪ್ರತಿಯೊಂದು ಕೆಲಸವೂ ಸಮಾಜಸೇವೆಯೇ ಆಗಿದೆ.ಯಾರು ಬೇಕಾದರೂ ಈಕ್ಷೇತ್ರವನ್ನು ಪ್ರವೇಶಿಸ ಬಹುದು. ಮೊದಲಿಗೆ ಶಿಡ್ಲಘಟ್ಟ ಕ್ಷೇತ್ರದ ಚಿಕಲನೇರ್ಪು ಭಾಗದಲ್ಲಿ ಮನೆ ನಿರ್ಮಾಣ ಮಾಡಲು ಪರಿಕರ ವಿತರಣೆ ಆಗಲಿದೆ.ನಂತರ ಆಂದ್ರದ ಗಡಿಯನ್ನು ಹಂಚಿಕೊಂಡಿರುವ ಚಿಂತಾಮಣಿ,ಬಾಗೇಪಲ್ಲಿ, ಗುಡಿಬಂಡೆಗಳಲ್ಲಿ ಮುಂದುವರೆಸಲಾಗುವುದು ಎಂದರು.

15*20 ಅಡಿಗೆ ವಿತರಣೆ
ನಮ್ಮ ಯೋಜನೆಯಲ್ಲಿ 15*20 ಅಡಿ ಪಾಯ ಹಾಕಿಕೊಂಡವರಿಗೆ ಸಂಪೂರ್ಣ ಮನೆ ಪೂರ್ಣವಾಗುವಷ್ಟು ಪರಿಕರಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. ಇದನ್ನು ಮೀರಿ ಪಾಯ ಹಾಕಿದ್ದರೆ ಅದರ ಹೆಚ್ಚುವರಿ ಖರ್ಚನ್ನು ಅವರೇ ಭರಿಸಬೇಕಿದೆ. ಉದ್ದೇಶ ಸರಳವಾಗಿ ಬದುಕಲು ಬೇಕಾದ ಮನೆ ನಿರ್ಮಾಣಕ್ಕೆ ನಾವು ಸಹಾಯ ಮಾಡುತ್ತಿದ್ದೇವೆ. ಇದನ್ನು ಮೀರಿ ಪಾಯ ಹಾಕಿದ್ದರೆ ಈ ಅಳತೆಯಲ್ಲಿ ಎಷ್ಟಾಗುತ್ತೋ ಅಷ್ಟನ್ನು ನೀಡಲಾಗು ವುದು. ದುಬಾರಿ ಮನೆಗಳಿಗೆ ನೆರವಾಗಲು ಆಗದು ಎಂಬುದನ್ನು ಸ್ಪಷ್ಟಪಡಿಸಿದರು.

ಅಧಿಕಾರಿಗಳ ಸಹಕಾರವಿರಲಿ
ಬಡವರ ಸೇವೆ ಮಾಡಲು ಮುಂದಾಗಿರುವ ಕಾರಣ ಜಿಲ್ಲೆಯ ಆರ್‌ಟಿಒ ಪೊಲೀಸ್ ಇಲಾಖೆ ಅಧಿಕಾರಿಗಳು ನಮಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ನಾವು ಟಿಪ್ಪರ್ ಮೂಲಕ ಮನೆ ನಿರ್ಮಾಣದ ಸಾಮಗ್ರಿಗಳನ್ನು ಸಾಗಿಸುವ ಕಾರಣ ವಿನಾಕಾರಣ ನಮ್ಮ ವಾಹನಕ್ಕೆ ತಡೆಯೊಡ್ಡುವುದು ಬೇಡ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಇಒ ನರೇಂದ್ರ ಮಾತನಾಡಿ ಸರ್ಕಾರ ಮತ್ತು ಸಮಾಜ ಒಟ್ಟಿಗೆ ಸಾಗಿದರೆ ನಾಗರೀಕ ಸಮಾಜದ ಭವಿಷ್ಯ ಉತ್ತಮವಾಗಿರಲಿದೆ.ಬಡವರಿಗೆ ಸೂರು ಕಲ್ಪಿಸಲು ಮುಂದಾಗುವ ದಾನಿಗಳ ಸಂಖ್ಯೆ ಮತ್ತು ಅವರ ಸಹಕಾರ ಜನತೆಗೆ ಹೆಚ್ಚು ಹೆಚ್ಚಾಗಿ ದೊರೆಯಲಿ, ಈ ಸೂರು ಕಲ್ಪಿಸುವ ಯೋಜನೆ ನಿರಾತಂಕವಾಗಿ ಸಾಗಲಿ ಎಂದು ಶುಭ ಹಾರೈಸಿದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ವಿಸ್ಡಮ್ ನಾಗರಾಜ್ ಮಾತನಾಡಿ ಸೂರಿಲ್ಲದ ಮಂದಿಗೆ ಸೂರು ಕಟ್ಟಿಕೊಳ್ಳಲು ಉಚಿತ ಸಾಮಗ್ರಿಗಳ ವಿತರಣೆ ಮಾಡುವ ಕೆಲಸ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವುದು ಶ್ಲಾಘನೀಯ. ಸರ್ಕಾರ ಮಾಡಬೇಕಾದ ಕೆಲಸವನ್ನು ಬೈರೇಗೌಡ ಮಾಡುತ್ತಿದ್ದಾರೆ.ಇದೊಂದು ಮಾದರಿ ಕಾರ್ಯಕ್ರಮ. 10 ಸಾವಿರ ಮನೆ ನಿರ್ಮಾಣಕ್ಕೆ ಸಂಕಲ್ಪ ಹೊಂದಿದ್ದಾರೆ. ಇಟ್ಟಿಗೆ ಕಿಟಕಿ ಬಾಗಿಲು ಎಂ.ಸ್ಯಾAಡ್ ಶೀಟ್ ಕೊಡುತ್ತಿದ್ದಾರೆ. ಗುಡಿಸಲು ಮುಕ್ತ ತಾಲೂಕು ಮಾಡಲಿ, ಇದರ ಪ್ರಯೋಜನ ಜನತೆಗೆ ಬಳಕೆಯಾಗಲಿ ಎಂದರು. ಬಳಸಿಕೊಳ್ಳಿ ಎಂದು ದೀಪು ಕರೆ ನೀಡಿದರು.

ರೈತಸಂಘದ ರವಿ ಪ್ರಕಾಶ್ ಮಾತನಾಡಿ ಭಾರತ ದೇಶದಲ್ಲಿಯೇ ವಿಶಿಷ್ಟ ಮಾದರಿ ಕಾರ್ಯ ಕ್ರಮ ಅಬ್ಲೂಡು ಗ್ರಾಮದಲ್ಲಿ ನಡೆಯುತ್ತಿದೆ.ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಬಡವರಿಗೆ ಸೂರು ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ.ಇದರಂತೆ ಹಳ್ಳಿಗೊಂದು ಗ್ರಂಥಾಲಯ ಸ್ಥಾಪನೆ ಮಾಡಲು ಕೂಡ ಮುಂದಾಗಬೇಕು ಎಂದು ಸಲಹೆ ನೀಡಿದರು. ಪುಸ್ತಕದಿಂದ ಜ್ಞಾನ ಬಂದರೆ ಮೊಬೈಲ್ ನಿಂದ ದುರಭ್ಯಾಸ ಬೆಳೇಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 10 ಮಂದಿಗೆ ಮನೆಕಟ್ಟಿಕೊಳ್ಳಲು ಬೇಕಾದ ಇಟ್ಟಿಗೆ, ಕಿಟಕಿ, ಬಾಗಿಲು, ಸಿಮೆಂಟ್ ಎಂ.ಸ್ಯಾಂಡ್, ಶೀಟ್‌ಗಳನ್ನು ಉಚಿತವಾಗಿ ವಿತರಿಸಿದರು.

ಈವೇಳೆ ರೈತ ಸಂಘದ ತಾದುರು ಮಂಜುನಾಥ್ ರವಿಪ್ರಕಾಶ್ ಕೋಟೆ ಚೆನ್ನೇಗೌಡ, ವಲಸೇನಹಳ್ಳಿ ನಾರಾಯಣಸ್ವಾಮಿ, ಮರಗೆಲಸ ಸಂಘದ ಅಧ್ಯಕ್ಷ ಪ್ರದೀಪ್ ದೀಪು, ಈಶ್ವರ್‌ರೆಡ್ಡಿ, ಮತ್ತಿತರರು ಇದ್ದರು.