ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅವಳಿ ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಿದ ನಿರಾಸೆ; ಅಭಿವೃದ್ಧಿ ಕನಸಿಗೂ ಹಿನ್ನಡೆಯ ಆತಂಕ

ಇನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಸಚಿವ ಸ್ಥಾನ ಕೈತಪ್ಪಿದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿ, ಪಕ್ಷದ ಹಿರಿಯ ನಾಯಕರ ವಿರುದ್ಧವೇ ಆರೋಪ ಮಾಡಿದ್ದಾರೆ. ಇದರಿಂದ ಕಾಂಗ್ರೆಸ್‌ನ ಆಂತರಿಕ ಅಸಮಾಧಾನವೂ ಬಹಿರಂಗ ಗೊಂಡಿದೆ.

'ಕೈʼ ನ ಏಳು ಶಾಸಕರಿದ್ದರೂ ಸಂಪುಟದಲ್ಲಿ ಪ್ರಾತಿನಿಧ್ಯ ಇಲ್ಲ: ಪ್ರತಿಭಟನೆ

-

Profile
Ashok Nayak Aug 3, 2026 10:45 PM

ಮುನಿರಾಜು ಎಂ. ಅರಿಕೆರೆ

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(Chief Minister D K Shivkumar) ನೇತೃತ್ವದ ಸಚಿವ ಸಂಪುಟದಲ್ಲಿ ಕೋಲಾರ–ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆ ಕೊನೆ ಕ್ಷಣದಲ್ಲಿ ಹುಸಿಯಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ಭದ್ರಕೋಟೆಯಾದ ಅವಳಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಏಳು ಶಾಸಕರನ್ನು ಹೊಂದಿದ್ದರೂ ಕೂಡ ಒಬ್ಬರಿಗೂ ಕೂಡ ಸಚಿವ ಸ್ಥಾನ ಸಿಗದಿರುವುದು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ(MLA S Subbareddy) ಹಾಗೂ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಅವರ ಹೆಸರುಗಳು ಕೊನೆಯ ಕ್ಷಣದವರೆಗೂ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದವು.

ಇದನ್ನೂ ಓದಿ: Karnataka Cabinet Expansion: ಡಿಕೆಶಿ ಸಂಪುಟದ ಸಚಿವರಾಗಿ ಅಜಯ್ ಧರಮ್ ಸಿಂಗ್, ಬಾಲಕೃಷ್ಣ ಸೇರಿ 19 ಮಂದಿ ಪ್ರಮಾಣವಚನ ಸ್ವೀಕಾರ; ಇಲ್ಲಿದೆ ನೂತನ ಸಚಿವರ ಪಟ್ಟಿ

ಬಾಗೇಪಲ್ಲಿಯಲ್ಲಿ ಬೆಂಬಲಿಗರು ಅಭಿನಂದನಾ ಪೋಸ್ಟರ್‌ಗಳನ್ನು ಸಿದ್ಧಪಡಿಸಿ ಸಂಭ್ರಮಕ್ಕೆ ಕಾದಿದ್ದರೆ, ಪ್ರದೀಪ್ ಈಶ್ವರ್ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಸಚಿವ ಸ್ಥಾನ ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.

ಆದರೆ ಅಂತಿಮ ಪಟ್ಟಿಯಲ್ಲಿ ಇಬ್ಬರ ಹೆಸರೂ ಕಾಣಿಸದ ಹಿನ್ನೆಲೆಯಲ್ಲಿ ಬೆಂಬಲಿಗರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಬಾಗೇಪಲ್ಲಿಯಲ್ಲಿ ಪ್ರತಿಭಟನೆ ನಡೆದಿದ್ದು, ಪ್ರದೀಪ್ ಈಶ್ವರ್‌ಗೆ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರೂ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ (MLA S N Narayanaswamy)ಅವರು ಸಚಿವ ಸ್ಥಾನ ಕೈತಪ್ಪಿದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿ, ಪಕ್ಷದ ಹಿರಿಯ ನಾಯಕರ ವಿರುದ್ಧವೇ ಆರೋಪ ಮಾಡಿದ್ದಾರೆ. ಇದರಿಂದ ಕಾಂಗ್ರೆಸ್‌ನ ಆಂತರಿಕ ಅಸಮಾಧಾನವೂ ಬಹಿರಂಗ ಗೊಂಡಿದೆ.

3 MLAs

ರಾಜಕೀಯ ವಿಶ್ಲೇಷಕರ ಪ್ರಕಾರ, ಸಚಿವ ಸ್ಥಾನವು ಕೇವಲ ರಾಜಕೀಯ ಪ್ರತಿಷ್ಠೆಯ ವಿಷಯವಲ್ಲ. ಜಿಲ್ಲೆಗೆ ವಿಶೇಷ ಅನುದಾನ, ಹೊಸ ಅಭಿವೃದ್ಧಿ ಯೋಜನೆಗಳ ಅನುಮೋದನೆ, ಕೈಗಾರಿಕೆ, ನೀರಾವರಿ, ರಸ್ತೆ, ಆರೋಗ್ಯ, ಶಿಕ್ಷಣ ಹಾಗೂ ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸರ್ಕಾರದ ಉನ್ನತ ಮಟ್ಟದಲ್ಲಿ ಪರಿಣಾಮಕಾರಿ ಪ್ರತಿನಿಧಿತ್ವ ದೊರಕಿಸಲು ಸಚಿವರ ಪಾತ್ರ ಮಹತ್ವದ್ದಾಗಿದೆ. ಇಂತಹ ಸಂದರ್ಭದಲ್ಲಿ ಅವಳಿ ಜಿಲ್ಲೆಗೆ ಸಂಪುಟದಲ್ಲಿ ಸ್ಥಾನ ಸಿಗದಿರುವುದು ಅಭಿವೃದ್ಧಿಯ ವೇಗಕ್ಕೂ ಹಿನ್ನಡೆಯಾಗಬಹುದೆಂಬ ಆತಂಕ ವ್ಯಕ್ತವಾಗಿದೆ.

ಒಟ್ಟಾರೆ, ಕಾಂಗ್ರೆಸ್‌ನ ಏಳು ಶಾಸಕರಿದ್ದರೂ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಗದಿರುವುದು ಪಕ್ಷದ ಸ್ಥಳೀಯ ಸಂಘಟನೆ, ಕಾರ್ಯಕರ್ತರ ಮನೋಭಾವ ಹಾಗೂ 2028ರ ವಿಧಾನಸಭೆ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ರಾಜಕೀಯ ವಲಯ ತಳ್ಳಿ ಹಾಕುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಅಸಮಾಧಾನ ವನ್ನು ಕಾಂಗ್ರೆಸ್ ನಾಯಕತ್ವ ಹೇಗೆ ನಿಭಾಯಿಸುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.