Chinthamani News: ಚಿನ್ನಸಂದ್ರದಲ್ಲಿ ನೀರಿಗಾಗಿ ಏಕಾಂಗಿ ಪ್ರತಿಭಟನೆ: 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ; ಅಧಿಕಾರಿಗಳ ವಿರುದ್ಧ ಗ್ರಾಮಸ್ಥನ ಆರೋಪ
ಚಿನ್ನಸಂದ್ರ ಗ್ರಾಮದ ತಮ್ಮ ಬಡಾವಣೆಯಲ್ಲಿ 15 ದಿನಗಳಿಂದ ಸಮರ್ಪಕವಾಗಿ ನೀರು ಪೂರೈಕೆ ಯಾಗುತ್ತಿಲ್ಲ. ಈ ಕುರಿತು ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ನೀರುಗಂಟಿ ಬಳಿ ವಿಚಾರಿಸಿದಾಗ ಮೋಟಾರ್ ಕೆಟ್ಟಿದೆ ಎಂಬ ಉತ್ತರ ನೀಡುತ್ತಿದ್ದಾರೆ. ನಿಗದಿತ ಸಮಯಕ್ಕೆ ನೀರು ಬಿಡದೆ, ಗೇಟ್‌ವಾಲ್ವ್ ಗಳನ್ನು ಮನಬಂದಂತೆ ತಿರುಗಿಸಿ ಅರ್ಧಂಬರ್ಧ ನೀರು ಪೂರೈಸಲಾಗುತ್ತಿದೆ
-
ಚಿಂತಾಮಣಿ: ತಾಲ್ಲೂಕಿನ ಚಿನ್ನಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥ ಕೃಷ್ಣ ಎಂಬು ವವರು ಗ್ರಾಮ ಪಂಚಾಯಿತಿ ಕಚೇರಿ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು.
ಚಿನ್ನಸಂದ್ರ ಗ್ರಾಮದ ತಮ್ಮ ಬಡಾವಣೆಯಲ್ಲಿ 15 ದಿನಗಳಿಂದ ಸಮರ್ಪಕವಾಗಿ ನೀರು ಪೂರೈಕೆ ಯಾಗುತ್ತಿಲ್ಲ. ಈ ಕುರಿತು ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ನೀರುಗಂಟಿ ಬಳಿ ವಿಚಾರಿಸಿದಾಗ ಮೋಟಾರ್ ಕೆಟ್ಟಿದೆ ಎಂಬ ಉತ್ತರ ನೀಡುತ್ತಿದ್ದಾರೆ. ನಿಗದಿತ ಸಮಯಕ್ಕೆ ನೀರು ಬಿಡದೆ, ಗೇಟ್‌ವಾಲ್ವ್ ಗಳನ್ನು ಮನಬಂದಂತೆ ತಿರುಗಿಸಿ ಅರ್ಧಂಬರ್ಧ ನೀರು ಪೂರೈಸಲಾಗುತ್ತಿದೆ ಎಂದು ಕೃಷ್ಣ ಆರೋಪಿಸಿದರು.
ಇದನ್ನೂ ಓದಿ: Chinthamani News: ರೈತರ ನಂಬಿಕೆ ಎಂದಿಗೂ ಹುಸಿಗೊಳಿಸುವುದಿಲ್ಲ: ಆವಲಪ್ಪ
ನೀರಿನ ಸಮಸ್ಯೆ ಕುರಿತು ಆಡಳಿತಾಧಿಕಾರಿಗೆ ದೂರವಾಣಿ ಮೂಲಕ ಪ್ರಶ್ನಿಸಿದಾಗ ಜವಾಬ್ದಾರಿ ಯುತವಾಗಿ ಸ್ಪಂದಿಸದೆ ಏಕವಚನದಲ್ಲಿ ಮಾತನಾಡಿ ಕರೆ ಕಡಿತಗೊಳಿಸಿದ್ದಾರೆ. ಬಳಿಕ ಸ್ಥಳೀಯ ರಾಜಕೀಯ ಮುಖಂಡರ ಮೂಲಕ ದೂರವಾಣಿ ಕರೆ ಮಾಡಿಸಿ ಒತ್ತಡ ಹೇರಲಾಗಿದೆ ಎಂದು ಅವರು ಆರೋಪಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೂರೈಕೆ ಹಾಗೂ ಕೊಳವೆ ಬಾವಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಕೃಷ್ಣ ದೂರಿದರು. ಗ್ರಾಮದಲ್ಲಿರುವ ಕೊಳವೆ ಬಾವಿಗಳ ಸಂಖ್ಯೆ, ಅವುಗಳಿಂದ ಪಂಪ್ ಆಗುವ ನೀರಿನ ಪ್ರಮಾಣ, ಮೇಲ್ತೊಟ್ಟಿಯಿಂದ ವಿವಿಧ ಮಾರ್ಗಗಳಿಗೆ ಪೂರೈಕೆಯಾಗುವ ನೀರಿನ ಪ್ರಮಾಣದ ಕುರಿತು ಸಮರ್ಪಕ ದಾಖಲೆ ಅಥವಾ ನೋಂದಣಿ ಪುಸ್ತಕ ನಿರ್ವಹಿಸಲಾಗುತ್ತಿಲ್ಲ. ನೀರುಗಂಟಿ ಹಾಗೂ ಆಡಳಿತಾಧಿಕಾರಿ ಪರಸ್ಪರ ಹೊಂದಾಣಿಕೆಯಿಂದ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂಬುದು ತಮ್ಮ ಆರೋಪ ವಾಗಿದೆ ಎಂದರು.
ಪಂಚಾಯಿತಿ ಸಿಬ್ಬಂದಿಯ ಇತರ ಕಾರ್ಯವೈಖರಿ ಬಗ್ಗೆ ಯಾವುದೇ ದೂರು ಇಲ್ಲ. ಆದರೆ ಕುಡಿ ಯುವ ನೀರಿನ ವಿಚಾರದಲ್ಲಿ ಆಡಳಿತಾಧಿಕಾರಿ ಹಾಗೂ ನೀರುಗಂಟಿಯ ನಿರ್ಲಕ್ಷ್ಯ ಖಂಡನೀಯ. ಹಿರಿಯ ಅಧಿಕಾರಿಗಳು ಕೂಡಲೇ ಚಿನ್ನಸಂದ್ರ ಗ್ರಾಮ ಪಂಚಾಯಿತಿಯ ನೀರಿನ ಸಮಸ್ಯೆ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಗ್ರಾಮಸ್ಥರಿಗೆ ಸಮರ್ಪಕ ಕುಡಿಯುವ ನೀರು ಪೂರೈಸ ಬೇಕು ಎಂದು ಕೃಷ್ಣ ಒತ್ತಾಯಿಸಿದರು.