K H Muniyappa: ಕೆ.ಹೆಚ್.ಮುನಿಯಪ್ಪ ಸಚಿವ ಸ್ಥಾನ ತ್ಯಜಿಸಿ ಪುತ್ರಿಗೆ ಅವಕಾಶ ನೀಡುತ್ತಾರೆಂಬುದು ಕೇವಲ ಊಹಾಪೋಹ : ಪಟ್ರೇನಹಳ್ಳಿ ಕೃಷ್ಣ
ಕೋಲಾರ ಲೋಕಸಭಾ ಕ್ಷೇತ್ರವನ್ನು ಸತತ ಏಳು ಬಾರಿ ಪ್ರತಿನಿಧಿಸಿರುವ ಮುನಿಯಪ್ಪ ಅವರ ಸುದೀರ್ಘ ರಾಜಕೀಯ ಅನುಭವ ರಾಜ್ಯಕ್ಕೆ ಅಗತ್ಯವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಅವರ ಅನುಭವ ಮತ್ತು ನಾಯಕತ್ವ ಮುಖ್ಯ ವಾಗಿದ್ದು, ಇದೇ ಕಾರಣಕ್ಕೆ ಸರ್ಕಾರ ಅವರಿಗೆ ಸಚಿವ ಸ್ಥಾನ ನೀಡಿದೆ
-
ಚಿಕ್ಕಬಳ್ಳಾಪುರ : ಹಿರಿಯ ರಾಜಕಾರಣಿ ಹಾಗೂ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ(K H Muniyappa) ಅವರು ತಮ್ಮ ಸಚಿವ ಸ್ಥಾನವನ್ನು ಪುತ್ರಿ ರೂಪಕಲಾ ಶಶಿಧರ್(Roopakala Shashidhara) ಅವರಿಗೆ ಬಿಟ್ಟುಕೊಡಲಿದ್ದಾರೆ ಎಂಬ ಸುದ್ದಿ ಕೇವಲ ಊಹಾಪೋಹವಾಗಿದ್ದು, ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಮಾದಾರ ಮಹಾಸಭಾ ಜಿಲ್ಲಾಧ್ಯಕ್ಷ ಪಟ್ರೇನಹಳ್ಳಿ ಕೃಷ್ಣ ಸ್ಪಷ್ಟಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಚ್.ಮುನಿಯಪ್ಪ ಅವರ ರಾಜಕೀಯ ಏಳಿಗೆಯನ್ನು ಸಹಿಸದ ಕೆಲವರು ಆಧಾರರಹಿತ ವದಂತಿಗಳನ್ನು ಹರಡುತ್ತಿದ್ದಾರೆ. ಮುನಿಯಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪುತ್ರಿಗೆ ಅವಕಾಶ ಮಾಡಿಕೊಡಲಿದ್ದಾರೆ ಎಂಬ ಮಾತು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.
ಕೋಲಾರ ಲೋಕಸಭಾ ಕ್ಷೇತ್ರವನ್ನು ಸತತ ಏಳು ಬಾರಿ ಪ್ರತಿನಿಧಿಸಿರುವ ಮುನಿಯಪ್ಪ ಅವರ ಸುದೀರ್ಘ ರಾಜಕೀಯ ಅನುಭವ ರಾಜ್ಯಕ್ಕೆ ಅಗತ್ಯವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಅವರ ಅನುಭವ ಮತ್ತು ನಾಯಕತ್ವ ಮುಖ್ಯ ವಾಗಿದ್ದು, ಇದೇ ಕಾರಣಕ್ಕೆ ಸರ್ಕಾರ ಅವರಿಗೆ ಸಚಿವ ಸ್ಥಾನ ನೀಡಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: KH Muniyappa: 2 ತಿಂಗಳ ಪಡಿತರ ಹಂಚಿಕೆಗೆ ಕ್ರಮ: ಆಹಾರ ಸಚಿವ ಕೆ ಎಚ್ ಮುನಿಯಪ್ಪ
ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿರುವ ಮುನಿಯಪ್ಪ ಅವರು, ಪ್ರಸ್ತುತ ಸರ್ಕಾರ ದಲ್ಲಿಯೂ ತಮ್ಮ ಅನುಭವದ ಮೂಲಕ ಉತ್ತಮ ಸೇವೆ ಸಲ್ಲಿಸುವ ವಿಶ್ವಾಸವಿದೆ. ಅವರ ಪುತ್ರಿ ರೂಪಕಲಾ ಶಶಿಧರ್ ಅವರಿಗೆ ಮಹಿಳಾ ಕೋಟಾದಡಿ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇರಬಹುದು. ಆದರೆ, ಅದಕ್ಕಾಗಿ ಮುನಿಯಪ್ಪ ಅವರು ತಮ್ಮ ಸ್ಥಾನ ತ್ಯಜಿಸಲಿದ್ದಾರೆ ಎಂಬುದು ಕೇವಲ ವದಂತಿ ಎಂದರು.
ಕೆ.ಹೆಚ್.ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಇಲಾಖೆಯಂತಹ ಪ್ರಮುಖ ಖಾತೆ ನೀಡಬೇಕು ಎಂಬುದು ನಮ್ಮ ಸಮುದಾಯದ ಪ್ರಮುಖ ಬೇಡಿಕೆಯಾಗಿದೆ. ಅವರ ಅನುಭವವನ್ನು ಸಮುದಾ ಯದ ಹಾಗೂ ರಾಜ್ಯದ ಅಭಿವೃದ್ಧಿಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಪಟ್ರೇನಹಳ್ಳಿ ಕೃಷ್ಣ ಒತ್ತಾಯಿಸಿದರು.
ಮಾದಾರ ಮಹಾಸಭಾ ಕಾರ್ಯಕಾರಿ ಸಮಿತಿ ಸದಸ್ಯರಾದ ಮುರಳಿಮೋಹನ್, ನಾರಾಯಣ ಸ್ವಾಮಿ, ತಾಲೂಕು ಕಾರ್ಯದರ್ಶಿ ಎಪಿಎಸ್ ಆನಂದ್ ಮಾತನಾಡಿ, ಮುನಿಯಪ್ಪ ಅವರು ಸಚಿವ ಸಂಪುಟದಲ್ಲಿ ಮುಂದುವರಿಯುವುದು ರಾಜ್ಯ ಹಾಗೂ ಸಮಾಜದ ಹಿತದೃಷ್ಟಿಯಿಂದ ಅಗತ್ಯ ವಾಗಿದೆ. ಎಡಗೈ ಸಮುದಾಯದ ಪ್ರಭಾವಿ ನಾಯಕರಾಗಿರುವ ಅವರ ಅನುಭವವನ್ನು ಸರ್ಕಾರ ಬಳಸಿಕೊಳ್ಳಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಖಜಾಂಚಿ ಮಂಚನಬೆಲೆ ಪ್ರಕಾಶ್, ತಿರುಮಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.