International Women's Day: ಸುಪ್ರಿಯಾ ಅವರಿಗೆ ‘ನೇತಾಜಿ ಮಹಿಳಾ ಪ್ರಶಸ್ತಿ'
ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ನ್ಯಾಷನಲ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕಿ ಕುಮಾರಿ ಸುಪ್ರಿಯಾ ನಾಯಕ್ ಅವರ ಸೇವೆಯನ್ನು ಪರಿಗಣಿಸಿ ಸಂಘದ ವತಿಯಿಂದ ಸನ್ಮಾನಿಸಿ, ‘ನೇತಾಜಿ ಮಹಿಳಾ ಪ್ರಶಸ್ತಿ’ ನೀಡಿ ಗೌರವಿಸ ಲಾಯಿತು
-
ಗೌರಿಬಿದನೂರು: ನಗರದ ಮಾದನಹಳ್ಳಿಯಲ್ಲಿ ನೇತಾಜಿ ಯುವಕ ಸಂಘದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ(International Women's Day)ಯನ್ನು ಅತ್ಯಂತ ಸಂಭ್ರಮ ಹಾಗೂ ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಶ್ಲಾಘನೀಯ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಂಟಿ ಕಾರ್ಯದರ್ಶಿ ಮಂಜುಳಾ ಮಾತನಾಡಿ, "ಇಂದಿನ ಕಾಲಘಟ್ಟದಲ್ಲಿ ಮಹಿಳೆಯರು ಎಲ್ಲಾ ರಂಗಗಳಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಶಿಕ್ಷಣದ ಜೊತೆಗೆ ಕಾನೂನು ಅರಿವು ಕೂಡ ಸೇರಿದಾಗ ಮಾತ್ರ ಮಹಿಳೆಯರ ನಿಜವಾದ ಸಬಲೀಕರಣ ಸಾಧ್ಯ ವಾಗುತ್ತದೆ," ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಸರ್ವೋದಯ ಮಹಿಳಾ ಮಂಡಳಿಯ ಅಧ್ಯಕ್ಷೆ ಪದ್ಮಾ ಮಾತನಾಡಿ, "ಗ್ರಾಮೀಣ ಭಾಗದ ಮಹಿಳೆಯರು ಕೇವಲ ಮನೆಗೆ ಸೀಮಿತವಾಗದೆ, ಸಂಘಟಿತರಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಸಮಾಜದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಬಹುದು," ಎಂದರು.
ಇದೇ ವೇಳೆ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ನ್ಯಾಷನಲ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕಿ ಕುಮಾರಿ ಸುಪ್ರಿಯಾ ನಾಯಕ್ ಅವರ ಸೇವೆಯನ್ನು ಪರಿಗಣಿಸಿ ಸಂಘದ ವತಿಯಿಂದ ಸನ್ಮಾನಿಸಿ, ‘ನೇತಾಜಿ ಮಹಿಳಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೇತಾಜಿ ಯುವಕ ಸಂಘದ ಅಧ್ಯಕ್ಷರು ಹಾಗೂ ನ್ಯಾಯವಾದಿ ಅಶೋಕ್ ಎ. ಅವರು ಮಾತನಾಡಿ, "ಮಹಿಳೆಯರಿಗೆ ಸಂವಿಧಾನ ನೀಡಿರುವ ಆಸ್ತಿ ಹಕ್ಕು ಮತ್ತು ರಕ್ಷಣಾ ಕಾಯ್ದೆಗಳ ಬಗ್ಗೆ ಗ್ರಾಮೀಣ ಮಟ್ಟದಲ್ಲಿ ಅರಿವು ಮೂಡಿಸು ವುದು ನಮ್ಮ ಸಂಘಟನೆಯ ಪ್ರಮುಖ ಆಶಯವಾಗಿದೆ. ಸ್ತ್ರೀ ಶಕ್ತಿಯನ್ನು ಗೌರವಿಸುವ ಸಮಾಜವು ಸುಸ್ಥಿರ ಪ್ರಗತಿ ಕಾಣಲು ಸಾಧ್ಯ," ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ರಾಜೇಶ್, ಕಾರ್ಯದರ್ಶಿ ಗೌರೀಶ್, ಪ್ರಮುಖರಾದ ರವೀಂದ್ರ ಕುಮಾರ್, ವೆಂಕಟ್ ರಾವ್, ಈರೇಗೌಡ, ದೀಪಕ್, ನಂಜುಂಡಪ್ಪ ಟಿ., ರವಿ ಮುಕ್ತಾಪುರಂ ಉಪಸ್ಥಿತರಿದ್ದರು. ಶಿಕ್ಷಕರಾದ ಗಿರಿಧರ್, ಗುರುರಾಜ್, ಲಕ್ಷ್ಮಿನಾರಾಯಣ ರೆಡ್ಡಿ ಹಾಗೂ ಸಮಾಜ ಸೇವಕಿ ಲಕ್ಷ್ಮಿ, ವರಲಕ್ಷ್ಮಿ ಸೇರಿದಂತೆ ಗ್ರಾಮಸ್ಥರು ಮತ್ತು ಸಂಘದ ಸದಸ್ಯರು ಭಾಗವಹಿಸಿದ್ದರು.