Chikkaballapur News: ಗ್ರಾಮೀಣರ ಆರೋಗ್ಯವೇ ಮೊದಲ ಆದ್ಯತೆ, ರಾಜಕಾರಣಕ್ಕೆ ಎರಡನೇ ಸ್ಥಾನ
ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ, ನೇತ್ರ, ದಂತ, ಹೃದಯ, ಮೂಳೆ ಮತ್ತು ಕೀಲು, ಮಧುಮೇಹ, ರಕ್ತದೊತ್ತಡ, ರ್ಚಂರೋಗ ಸೇರಿದಂತೆ ವಿವಿಧ ವಿಭಾಗಗಳ ತಜ್ಞ ವೈದ್ಯರು ಸಾರ್ವಜನಿಕರನ್ನು ಪರೀಕ್ಷಿಸಿ, ಮುಂದಿನ ಚಿಕಿತ್ಸೆಗೆ ಅಗತ್ಯ ಸಲಹೆಗಳನ್ನು ನೀಡಿದರು. ಆರೋಗ್ಯ ಜಾಗೃತಿ ಮೂಡಿಸುವ ಸಲುವಾಗಿ ಜೀವನಶೈಲಿ ಬದಲಾವಣೆ, ಪೌಷ್ಟಿಕ ಆಹಾರ ಹಾಗೂ ಕಾಯಿಲೆ ತಡೆ ಕುರಿತು ಅರಿವು ಮೂಡಿಸಲಾಯಿತು.
-
ಚಿಕ್ಕಬಳ್ಳಾಪುರ: ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ತಾಲೂಕಿನ ಚಿಕ್ಕಕಾಡಿಗೇನಹಳ್ಳಿ ಗ್ರಾಮದ ಕಲ್ಯಾಣ ಮಂಟಪದಲ್ಲಿ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್‌ರೆಡ್ಡಿ ಹಾಗೂ ಬೆಂಗಳೂರು ಈಸ್ಟ್ ಪಾಯಿಂಟ್ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ 'ಬೃಹತ್ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ-3' ಬಾರೀ ಜನಸ್ಪಂದನೆಯೊಂದಿಗೆ ಯಶಸ್ವಿಯಾಗಿ ನಡೆಯಿತು.
ಆಗಲಗುರ್ಕಿ, ಕೊಂಡೇನಹಳ್ಳಿ, ದೊಡ್ಡಮರಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಮಂದಿ ಶಿಬಿರದಲ್ಲಿ ಪಾಲ್ಗೊಂಡು ವಿವಿಧ ಕಾಯಿಲೆಗಳ ಉಚಿತ ಆರೋಗ್ಯ ತಪಾಸಣೆ, ತಜ್ಞ ವೈದ್ಯರ ಸಲಹೆ, ಔಷಧೋಪಚಾರ ಹಾಗೂ ಚಿಕಿತ್ಸಾ ಮಾರ್ಗದರ್ಶನ ಪಡೆದುಕೊಂಡರು. ಅಗತ್ಯವಿರುವ ಫಲಾನುಭವಿಗಳಿಗೆ ಉಚಿತ ಕನ್ನಡಕ ಹಾಗೂ ವಾಕಿಂಗ್ ಸ್ಟಿಕ್‌ಗಳನ್ನು ವಿತರಿಸಲಾಯಿತು.
ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ, ನೇತ್ರ, ದಂತ, ಹೃದಯ, ಮೂಳೆ ಮತ್ತು ಕೀಲು, ಮಧುಮೇಹ, ರಕ್ತದೊತ್ತಡ, ರ್ಚಂರೋಗ ಸೇರಿದಂತೆ ವಿವಿಧ ವಿಭಾಗಗಳ ತಜ್ಞ ವೈದ್ಯರು ಸಾರ್ವಜನಿಕರನ್ನು ಪರೀಕ್ಷಿಸಿ, ಮುಂದಿನ ಚಿಕಿತ್ಸೆಗೆ ಅಗತ್ಯ ಸಲಹೆಗಳನ್ನು ನೀಡಿದರು. ಆರೋಗ್ಯ ಜಾಗೃತಿ ಮೂಡಿಸುವ ಸಲುವಾಗಿ ಜೀವನಶೈಲಿ ಬದಲಾವಣೆ, ಪೌಷ್ಟಿಕ ಆಹಾರ ಹಾಗೂ ಕಾಯಿಲೆ ತಡೆ ಕುರಿತು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಸಂದೀಪ್ ರೆಡ್ಡಿ, "ಜನರ ಆರೋಗ್ಯವೇ ನಮ್ಮ ಮೊದಲ ಆದ್ಯತೆ. ರಾಜಕಾರಣಕ್ಕೆ ಎರಡನೇ ಸ್ಥಾನ ಮಾತ್ರ. ಚಿಕ್ಕಬಳ್ಳಾ ಪುರ ವಿಧಾನಸಭಾ ಕ್ಷೇತ್ರದ ಪ್ರತಿಯೊಬ್ಬ ನಾಗರಿಕ ಆರೋಗ್ಯವಂತನಾಗಿರಬೇಕು ಎಂಬುದು ನಮ್ಮ ಆಶಯ. ಆರೋಗ್ಯ, ಆರ್ಥಿಕ ಚೈತನ್ಯ ಮತ್ತು ಸಾಮಾಜಿಕ ಸಾಮರಸ್ಯ ಬಲಪಡಿಸುವ ಉದ್ದೇಶದಿಂದ ಇಂತಹ ಜನಪರ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತೇವೆ" ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿರುವ ಗ್ರಾಮೀಣರು ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದು ಇಂತಹ ಶಿಬಿರಗಳ ಮೂಲಕ ತಿಳಿದುಬರುತ್ತಿದೆ. ಕೃಷಿ ಪ್ರಧಾನವಾದ ಕ್ಷೇತ್ರದಲ್ಲಿ ದಿನವಿಡೀ ದುಡಿಯುವ ರೈತರು ಸಹ ರಕ್ತದೊತ್ತಡ, ಮಧುಮೇಹ, ಮೂಳೆ ಹಾಗೂ ಕೀಲು ನೋವು, ದೃಷ್ಟಿದೋಷ, ದಂತ ಸಮಸ್ಯೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವುದು ತಪಾಸಣೆ ವೇಳೆ ಕಂಡುಬಂದಿದೆ ಎಂದು ಹೇಳಿದರು.
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಬಡ ಕುಟುಂಬಗಳಿಗೆ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾಧ್ಯವಾದ ಮಟ್ಟಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರ ಆರೋಗ್ಯ ಸುಧಾ ರಣೆಗೆ ನೆರವಾಗಲಾಗುತ್ತಿದೆ. ಈ ಜನಸೇವಾ ಕಾರ್ಯದಲ್ಲಿ ಈಸ್ಟ್ ಪಾಯಿಂಟ್ ಆಸ್ಪತ್ರೆಯ ತಜ್ಞ ವೈದ್ಯರು ಮತ್ತು ಸಿಬ್ಬಂದಿ ಕೈಜೋಡಿಸಿರುವುದು ಶ್ಲಾಘನೀಯ ಎಂದು ಸಂದೀಪ್ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಬಿರದಲ್ಲಿ ವೈದ್ಯರು, ಆಸ್ಪತ್ರೆಯ ಸಿಬ್ಬಂದಿ, ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ನ ಪದಾಧಿಕಾರಿಗಳು, ಸ್ವಯಂಸೇವಕರು ಹಾಗೂ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದು, ಆರೋಗ್ಯ ಸೇವೆಯನ್ನು ಇನ್ನಷ್ಟು ಜನರಿಗೆ ತಲುಪಿಸುವ ಸಂಕಲ್ಪ ವ್ಯಕ್ತಪಡಿಸಿದರು.