POCSO: ಬಾಲ ಕಾರ್ಮಿಕತೆ, ಪೋಕ್ಸೋ ಪ್ರಕರಣ ತಡೆಗೆ ತಂಡದ ರೀತಿ ಕೆಲಸ ಮಾಡಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಮಂಜುಳ ಸಲಹೆ
ಬಾಲ ಕಾರ್ಮಿಕತೆ, ಪೋಕ್ಸೋ ಹಾಗೂ ಬಾಲ್ಯವಿವಾಹ ಪ್ರಕರಣಗಳನ್ನು ತಡೆಗಟ್ಟುವುದು ಕೇವಲ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕಾರ್ಮಿಕ ಇಲಾಖೆ ಯ ಕೆಲಸ ಎಂದು ಭಾವಿಸಬಾರದು. ಎಲ್ಲ ಇಲಾಖೆ ಯವರು ತಮ್ಮ ಇಲಾಖೆಯ ಕಾರ್ಯ ವ್ಯಾಪ್ತಿಯಲ್ಲಿ ಸಂಪರ್ಕಕ್ಕೆ ಬರುವವರ ಬಗ್ಗೆ ನಿಗಾವಹಿಸಬೇಕು. ಒಂದು ವೇಳೆ ಇಂತಹ ಪ್ರಕರಣ ಗಳು ಕಂಡು ಬಂದರೆ ಸಕ್ಷಮ ಪ್ರಾಧಿಕಾರಿ ಗಳಿಗೆ ಮಾಹಿತಿ ನೀಡುವ ಜೊತೆಗೆ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಆಗುವಂತೆ ಮಾಡಬೇಕು.
ಬಾಲ ಕಾರ್ಮಿಕತೆ, ಪೋಕ್ಸೋ ಪ್ರಕರಣ ತಡೆಗೆ ತಂಡದ ರೀತಿ ಕೆಲಸಮಾಡಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್ ಮಂಜುಳ ಸಲಹೆ ನೀಡಿದರು -
ಚಿಕ್ಕಬಳ್ಳಾಪುರ: ಬಾಲ ಕಾರ್ಮಿಕತೆ, ಪೋಕ್ಸೋ (POCSO)ಪ್ರಕರಣಗಳು ಹಾಗೂ ಬಾಲ್ಯ ವಿವಾಹ(Child Marriage)ಗಳನ್ನು ಸಂಪೂರ್ಣವಾಗಿ ಜಿಲ್ಲೆಯಲ್ಲಿ ತಡೆಗಟ್ಟಲು ಎಲ್ಲಾ ಇಲಾಖೆಗಳು ಸಮನ್ವಯ ಹಾಗೂ ತಂಡದ ರೀತಿ ಕೆಲಸ ಮಾಡಬೇಕು ಎಂದು ಸರ್ಕಾರದ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಮಂಜುಳ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಸಂಘಟಿತ ಪ್ರಯತ್ನವಿರಲಿ: ಬಾಲ ಕಾರ್ಮಿಕತೆ, ಪೋಕ್ಸೋ ಹಾಗೂ ಬಾಲ್ಯವಿವಾಹ ಪ್ರಕರಣಗಳನ್ನು ತಡೆಗಟ್ಟುವುದು ಕೇವಲ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕಾರ್ಮಿಕ ಇಲಾಖೆಯ ಕೆಲಸ ಎಂದು ಭಾವಿಸಬಾರದು. ಎಲ್ಲ ಇಲಾಖೆ ಯವರು ತಮ್ಮ ಇಲಾಖೆಯ ಕಾರ್ಯ ವ್ಯಾಪ್ತಿಯಲ್ಲಿ ಸಂಪರ್ಕಕ್ಕೆ ಬರುವವರ ಬಗ್ಗೆ ನಿಗಾವಹಿಸಬೇಕು. ಒಂದು ವೇಳೆ ಇಂತಹ ಪ್ರಕರಣಗಳು ಕಂಡು ಬಂದರೆ ಸಕ್ಷಮ ಪ್ರಾಧಿಕಾರಿ ಗಳಿಗೆ ಮಾಹಿತಿ ನೀಡುವ ಜೊತೆಗೆ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಆಗುವಂತೆ ಮಾಡಬೇಕು. ಒಂದು ಸಾಂಘಿಕ ಪ್ರಯತ್ನದಿಂದ ಮಾತ್ರ ಇಂತಹ ಅನಿಷ್ಟ ಸಮಸ್ಯೆಗಳನ್ನು ಸಂಪೂರ್ಣವಾಗಿ ತಡೆಯಬಹುದು ಎಂದು ತಿಳಿಸಿದರು.
ಇದನ್ನೂ ಓದಿ: Chikkaballapur News: ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುರುಕುಗೊಂಡ ಸ್ವಚ್ಛತಾ ಅಭಿಯಾನ
ಕ್ಷಿಪ್ರಗತಿಯಲ್ಲಿ ವಿಲೇ ಮಾಡಿ : ಸರ್ಕಾರದ ಎಲ್ಲಾ ಕಾರ್ಯಕ್ರಮಗಳು, ಸೌಲಭ್ಯಗಳು, ಕಾಲ ವಿಳಂಬವಿಲ್ಲದೆ ಕಾಲೋಚಿತವಾಗಿ ತಲುಪಿಸಬೇಕು. ಅನಗತ್ಯ ಕಾರಣಗಳನ್ನು ನೀಡಿ ಸಕಾಲ ಯೋಜನೆಯಡಿ ಅರ್ಜಿಗಳನ್ನು ತಿರಸ್ಕಾರ ಮಾಡಬಾರದು. ಜನರಿಗೆ ಉತ್ತಮ ಜೀವನ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಆಡಳಿತ ವರ್ಗದಿಂದ ಕಾನೂನಾತ್ಮಕವಾಗಿ ಏನೆಲ್ಲ ಮಾಡಲು ಸಾಧ್ಯವೋ ಅವೆಲ್ಲವನ್ನು ಮಾಡಬೇಕು. ಸರ್ಕಾರಿ ವಸತಿ ಶಾಲೆಗಳು, ವಸತಿ ನಿಲಯಗಳು, ಅತ್ಯುತ್ತಮವಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಉತ್ತಮ ಕಲಿಕಾ ವಾತಾವರಣ ಇದೆ. ಇಂತಹ ಸೌಲಭ್ಯಗಳನ್ನು ಬಳಸಿಕೊಂಡು ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಸಿಗುವಂತೆ ಮಾಡಬೇಕು ಎಂದು ತಿಳಿಸಿದರು.
ಕೇಂದ್ರ ಸ್ಥಾನದಲ್ಲಿರಿ: ಜಿಲ್ಲಾಡಳಿತ ಅಧಿಕಾರಿಗಳು, ಸಿಬ್ಬಂದಿ ಸರ್ಕಾರದ ಆಶಯದಂತೆ ಸಮರ್ಪಕವಾಗಿ ಹಾಗೂ ಕಾಲೋಚಿತವಾಗಿ ಕಾರ್ಯ ನಿರ್ವಹಿಸಲು ಮುಖ್ಯವಾಗಿ ತಮ್ಮ ಕಾರ್ಯವ್ಯಾಪ್ತಿಯ ಕೇಂದ್ರ ಸ್ಥಾನದಲ್ಲಿದ್ದು, ಪ್ರಾಮಾಣಿಕವಾಗಿ ಸರ್ಕಾರಿ ಕೆಲಸವನ್ನು ನಿರ್ವಹಿಸಬೇಕು. ಪ್ರತಿಯೊಬ್ಬರು “ಕರ್ತವ್ಯ” ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ಈ ತಂತ್ರಾಂಶದ ಮೂಲಕವೇ ಹಾಜರಾತಿ ಹಾಕಬೇಕು ಎಂದು ಸೂಚನೆ ನೀಡಿದರು.
ಸಮಗ್ರ ಹಾಗೂ ಸೂಕ್ತ ಮಾಹಿತಿ ನೀಡಿ: ಜೂ.13ರಂದು ಮಾನ್ಯ ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಸಭೆಯನ್ನು ನಡೆಸಲಿದ್ದು, ಈ ಸಭೆಗೆ ಸಮಗ್ರ ಹಾಗೂ ಸೂಕ್ತ ಮಾಹಿತಿ ನೀಡಬೇಕು. ಜಿಲ್ಲೆಗೆ ಅಗತ್ಯವಾಗಿ ಬೇಕಾಗಿರುವ ಕೆಲಸ ಕಾರ್ಯಗಳು ಹಾಗೂ ಅನುದಾನದ ಮಾಹಿತಿ ನೀಡಬೇಕು. ರಾಜ್ಯ ಮಟ್ಟದಲ್ಲಿ ಕಡತಗಳು ವಿಲೆಗೆ ಬಾಕಿ ಇದ್ದಲ್ಲಿ ಗಮನಕ್ಕೆ ತರುವಂತೆ ಅಗತ್ಯ ಸಲಹೆ ಸೂಚನೆ ಗಳನ್ನು ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತಿಕ್ ಪಾಷಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿ ಗಳು ಹಾಜರಿದ್ದರು.