ಎಲ್ಲಾ ಸಮಾಜಗಳಿಗೆ ನೆರಳು, ಆಶ್ರಯ ನೀಡುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕಿದೆ: ಬಿ.ವೈ ವಿಜಯೇಂದ್ರ
ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ವೀರ ಸಿಂಹಾಸನ ಮಹಾಸಂಸ್ಥಾನ ಮಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾ ರಥೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದ್ದಾರೆ.
-
ಚಿಕ್ಕಮಗಳೂರು: ವೀರಶೈವ ಲಿಂಗಾಯತ ಸಮಾಜ ಜಾಗೃತಿಯಾಗಬೇಕಾದ ಅಗತ್ಯವಿದೆ, ಕೆಲವು ದುಷ್ಟ ಶಕ್ತಿಗಳು ಸಮಾಜವನ್ನು ಒಡೆದು ಆಳುವ ನೀತಿಯನ್ನ ಅನುಸರಿಸುತ್ತಿವೆ. ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳಪಂಗಡಗಳು ವ್ಯತ್ಯಾಸಗಳನ್ನು ಮರೆತು ಒಟ್ಟಾಗಿ, ಒಂದಾಗಿ ಒಟ್ಟುಗೂಡಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯವಿದೆ. ಎಲ್ಲಾ ಸಮಾಜಗಳಿಗೆ ನೆರಳು ಹಾಗೂ ಆಶ್ರಯ ನೀಡುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಹೇಳಿದರು.
ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ವೀರ ಸಿಂಹಾಸನ ಮಹಾಸಂಸ್ಥಾನ ಮಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾ ರಥೋತ್ಸವ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದರು.
ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ವೀರಶೈವ ಲಿಂಗಾಯತ ಮಠಗಳಲ್ಲದೆ ರಾಜ್ಯದಲ್ಲಿರುವ ಎಲ್ಲಾ ಸಮಾಜದ ಮಠಮಾನ್ಯಗಳಿಗೆ ಅನುದಾನ ನೀಡಿ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಿದರು, ಕಾರಣ ಎಲ್ಲಾ ಮಠಮಾನ್ಯಗಳು ಸಮಾಜದ ಮಕ್ಕಳಿಗೆ ಅಕ್ಷರದಾಸೋಹ, ಅನ್ನದಾಸೋಹ ಹಾಗು ಜ್ಞಾನ ದಾಸೋಹ ನೀಡುವ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡುತ್ತಿವೆ ಎಂದು ಶ್ಲಾಘಿಸಿದರು.
ರಂಭಾಪುರಿ ಶ್ರೀಗಳು ಯಡಿಯೂರಪ್ಪನವರ ರಾಜಕೀಯ ಏಳುಬೀಳುಗಳ ಸಮಯದಲ್ಲಿ ಧೈರ್ಯ ನೀಡಿ ಮಾರ್ಗದರ್ಶನ ಮಾಡಿದ್ದಾರೆ, ಅದೇ ರೀತಿ ರಾಜಕೀಯ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ನನಗೂ ಸವಾಲುಗಳನ್ನು ಗಟ್ಟಿಯಾಗಿ ಎದುರಿಸುವ ಶಕ್ತಿಯನ್ನು ದಯಪಾಲಿಸಬೇಕೆಂದು ಮನವಿ ಮಾಡಿದರು.
ಸಮಾಜವನ್ನು ತಿದ್ದಿ ಸರಿದಾರಿಗೆ ತರವ ಕೆಲಸವು ಜಗದ್ಗುರುಗಳ ನೇತೃತ್ವದಲ್ಲಿ ನಡೆಯುತ್ತಿದೆ, ಶ್ರೀ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರು ಹೆಚ್ಚಿನ ಅನುದಾನವನ್ನು ನೀಡಬೇಕೆಂದು ಮನವಿ ಮಾಡಿದರು.