ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MI vs PBKS: ಗೆಲುವಿನ ಓಟ ಮುಂದುವರಿಸಿದ ಪಂಜಾಬ್‌; ಮುಂಬೈ ವಿರುದ್ಧ 7 ವಿಕೆಟ್‌ ಜಯ

IPL 2026: ಪಾದದ ಗಾಯದಿಂದಾಗಿ ಈ ಪಂದ್ಯದಿಂದ ಹೊರಗಳಿದ ರೋಹಿತ್‌ ಶರ್ಮ ಬದಲು ಹಾಲಿ ಆವೃತ್ತಿಯಲ್ಲಿ ಮೊದಲ ಪಂದ್ಯವಾಡಿದ ಡಿ ಕಾಕ್‌ ಆಕರ್ಷಕ ಶತಕ ಬಾರಿಸಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್‌ ನಡೆಸಿದ ಅವರು 60 ಎಸೆತಗಳಿಂದ 7 ಸೊಗಸಾದ ಸಿಕ್ಸರ್‌ ಮತ್ತು 8 ಬೌಂಡರಿ ನೆರವಿನಿಂದ ಅಜೇಯ 112 ರನ್‌ ಗಳಿಸಿದರು.

ಸತತ 4ನೇ ಸೋಲಿಗೆ ತುತ್ತಾದ ಮುಂಬೈ; ಪಂಜಾಬ್‌ ಕಿಂಗ್ಸ್‌ಗೆ ಭರ್ಜರಿ ಜಯ

Arshdeep Singh started his second over with two wickets -

Abhilash BC
Abhilash BC Apr 16, 2026 11:07 PM

ಮುಂಬಯಿ, ಎ.16: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ತಮ ನಿರ್ವಹಣೆ ತೋರಿದ ಪಂಜಾಬ್‌ ಕಿಂಗ್ಸ್‌(MI vs PBKS) ತಂಡ ಗುರುವಾರ ನಡೆದ ಮುಂಬೈ ಇಂಡಿಯನ್ಸ್‌ ವಿರುದ್ಧದ ಐಪಿಎಲ್‌(IPL 2026) ಪಂದ್ಯದಲ್ಲಿ 7 ವಿಕೆಟ್‌ ಅಂತರದ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಹಾಲಿ ಆವೃತ್ತಿಯಲ್ಲಿ ಅಜೇಯ ಓಟ ಮುಂದುವರಿಸಿತು. ಜತೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ತನ್ನದಾಗಿಸಿಕೊಂಡಿತು. ಮುಂಬೈ ಸತತ ನಾಲ್ಕನೇ ಸೋಲಿಗೆ ತುತ್ತಾಯಿತು.

ಇಲ್ಲಿನ ವಾಂಖೆಡೆ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ ತಂಡ ಬೌಲಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್‌ಗೆ ಇಳಿದ ಮುಂಬೈ ಕ್ವಿಂಟನ್‌ ಡಿ ಕಾಕ್‌ ಅವರ ಶತಕದ ನೆರವಿನಿಂದ 6 ವಿಕೆಟ್‌ಗೆ 196 ರನ್‌ ಬಾರಿಸಿತು. ಜವಾಬಿತ್ತ ಪಂಜಾಬ್‌ ಯಾವುದೇ ಒತ್ತಡವಿಲ್ಲದೆ 16.3 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ನಷ್ಟಕ್ಕೆ 198 ರನ್‌ ಬಾರಿಸಿ ಸುಲಭ ಗೆಲುವು ತನ್ನದಾಗಿಸಿಕೊಂಡಿತು.

ಚೇಸಿಂಗ್‌ ವೇಳೆ ಪಂಜಾಬ್‌ ಕೂಡ ಮುಂಬೈನಂತೆ ಆರಂಭಿಕ ಆಘಾತ ಎದುರಿಸಿತು. ಪ್ರಿಯಾಂಶ್‌ ಆರ್ಯ(15) ಮತ್ತು ಕೂಪರ್‌ ಕೊನೋಲಿ(17) ವಿಕೆಟ್‌ ಬೇಗನೆ ಕಳೆದುಕೊಂಡಿತು. ಆದರೆ ನಾಯಕ ಶ್ರೇಯಸ್‌ ಅಯ್ಯರ್‌ ಮತ್ತು ಪ್ರಭ್‌ಸಿಮ್ರಾನ್‌ ಸಿಂಗ್‌ ಬಿರುಸಿನ ಬ್ಯಾಟಿಂಗ್‌ ಮೂಲಕ ತಂಡಕ್ಕೆ ಹಾನಿಯಾಗದಂತೆ ನೋಡಿಕೊಂಡರು. ಗೆಲುವಿಗೆ 12 ರನ್‌ ಬೇಕಿದ್ದಾಗ ಅಯ್ಯರ್‌ ವಿಕೆಟ್‌ ಕಳೆದುಕೊಂಡರೂ ಪ್ರಭ್‌ಸಿಮ್ರಾನ್‌ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಅಯ್ಯರ್‌ 35 ಎಸೆತಗಳಲ್ಲಿ 66 ರನ್‌ ಬಾರಿಸಿದರೆ, ಪ್ರಭ್‌ಸಿಮ್ರಾನ್‌ 39 ಎಸೆತಗಳಿಂದ 80*ರನ್‌ ಗಳಿಸಿದರು. ಜಸ್‌ಪ್ರೀತ್‌ ಬುಮ್ರಾ ಈ ಪಂದ್ಯದಲ್ಲಿಯೂ ವಿಕೆಟ್‌ ಲೆಸ್‌ ಎನಿಸಿಕೊಂಡರು. 4 ಓವರ್‌ಗೆ 41 ರನ್‌ ಬಿಟ್ಟುಕೊಟ್ಟು ದುಬಾರಿ ಎನಿಸಿಕೊಂಡರು.

ಶ್ರೇಯಸ್‌ ಅಯ್ಯರ್‌ ಗ್ರೇಟೆಸ್ಟ್‌ ಐಪಿಎಲ್‌ ಫೀಲ್ಡಿಂಗ್‌ ಕಂಡು ದಂಗಾದ ರೋಹಿತ್‌, ಸೂರ್ಯಕುಮಾರ್‌

ಇದಕ್ಕೂ ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈಗೆ, ಎಡಗೈ ವೇಗಿ ಅರ್ಶ್‌ದೀಪ್‌ ಸಿಂಗ್‌ ಅವಳಿ ಆಘಾತವಿಕ್ಕಿದರು. ತಾನೆಸೆದ ಎರಡನೇ ಓವರ್‌ನಲ್ಲಿ ರಯಾನ್ ರಿಕೆಲ್ಟನ್(2) ಮತ್ತು ಸೂರ್ಯಕುಮಾರ್‌ ಯಾದವ್‌ ವಿಕೆಟ್‌ ಕೆಡವಿದರು. ಸೂರ್ಯಕುಮಾರ್‌ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದರು. ಆದರೆ ಮೂರನೇ ವಿಕೆಟ್‌ಗೆ ಜತೆಯಾದ ಕ್ವಿಂಟನ್‌ ಡಿ ಕಾಕ್‌ ಮತ್ತು ನಮನ್‌ ಧೀರ್‌ ಅತ್ಯಮೂಲ್ಯ 122 ರನ್‌ಗಳ ಜತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು.

ಶತಕ ಬಾರಿಸಿದ ಡಿ ಕಾಕ್‌

ಪಾದದ ಗಾಯದಿಂದಾಗಿ ಈ ಪಂದ್ಯದಿಂದ ಹೊರಗಳಿದ ರೋಹಿತ್‌ ಶರ್ಮ ಬದಲು ಹಾಲಿ ಆವೃತ್ತಿಯಲ್ಲಿ ಮೊದಲ ಪಂದ್ಯವಾಡಿದ ಡಿ ಕಾಕ್‌ ಆಕರ್ಷಕ ಶತಕ ಬಾರಿಸಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್‌ ನಡೆಸಿದ ಅವರು 60 ಎಸೆತಗಳಿಂದ 7 ಸೊಗಸಾದ ಸಿಕ್ಸರ್‌ ಮತ್ತು 8 ಬೌಂಡರಿ ನೆರವಿನಿಂದ ಅಜೇಯ 112 ರನ್‌ ಗಳಿಸಿದರು. ಇದು ಐಪಿಎಲ್‌ನಲ್ಲಿ ಡಿ ಕಾಕ್‌ ಬಾರಿಸಿದ ಮೂರನೇ ಶತಕ. ಒಟ್ಟಾರೆಯಾಗಿ ಟಿ20 ಕ್ರಿಕೆಟ್‌ನಲ್ಲಿ 9ನೇ ಶತಕ.

ನಮನ್ ಧೀರ್(50) ಅರ್ಧಶತಕ ಬಾರಿಸಿದರು. ಹಾರ್ದಿಕ್‌ ಪಾಂಡ್ಯ 14 ರನ್‌ ಗಳಿಸಿದರು. ಒಟ್ಟಾರೆ ತಂಡದ ಪರ ಎರಡಂಕಿ ಮೊತ್ತ ಕಲೆಹಾಕಿದ್ದು ಕೇವಲ ಮೂವರು ಮಂದಿ ಮಾತ್ರ. ಪಂಜಾಬ್‌ ಪರ ಘಾತಕ ಬೌಲಿಂಗ್‌ ದಾಳಿ ನಡೆಸಿದ ಎಡಗೈ ವೇಗಿ ಅರ್ಶ್‌ದೀಪ್‌ ಸಿಂಗ್‌ 22 ರನ್‌ಗೆ 3 ವಿಕೆಟ್‌ ಕಿತ್ತು ಮಿಂಚಿದರು.