ಮೇ 9ರ ಬಿಎಸ್‍ವೈ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಮಹತ್ವದ ಬದಲಾವಣೆ; ವಿಜಯೇಂದ್ರ ಕೊಟ್ರು ಬಿಗ್ ಅಪ್‌ಡೇಟ್
BSY Abhimanotsava: ಮೇ 9ರಂದು ಬೆಳಗ್ಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೂತನ ಸಿಎಂ ಪ್ರಮಾಣವಚನ ನಡೆಯಲಿದೆ. ಆದ್ದರಿಂದ ಮಾಜಿ ಮುಖ್ಯಮಂತ್ರಿ ಬಿಎಸ್‍ವೈ ಅಭಿಮಾನೋತ್ಸವವು ಬೆಳಗ್ಗೆಯ ಬದಲಾಗಿ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿದರು. -
ಚಿತ್ರದುರ್ಗ, ಮೇ 6: ಮೇ 9ರಂದು ಬೆಳಗ್ಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೂತನ ಸಿಎಂ ಪ್ರಮಾಣವಚನ ನಡೆಯಲಿದೆ. ಆದ್ದರಿಂದ ಮಾಜಿ ಮುಖ್ಯಮಂತ್ರಿ ಬಿಎಸ್‍ವೈ ಅಭಿಮಾನೋತ್ಸವವು (BSY Abhimanotsava) ಬೆಳಗ್ಗೆಯ ಬದಲಾಗಿ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ನಡೆಯಲಿದೆ. 3.45ರ ವೇಳೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಜೀವನದ 50 ವರ್ಷಗಳ ಪಯಣ ಪೂರೈಸಿದ ಶುಭ ಘಳಿಗೆಯಲ್ಲಿ ಬಿ.ಎಸ್.ವೈ. ಅವರ ಅಭಿಮಾನೋತ್ಸವವನ್ನು ಚಿತ್ರದುರ್ಗದಲ್ಲಿ ನಡೆಸಲಾಗುತ್ತಿದೆ. ಈ ಸಂಬಂಧ ವ್ಯಾಪಕ ಸಿದ್ಧತೆ ನಡೆದಿದೆ. 10 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸಲಿದ್ದಾರೆ ಎಂದು ಹೇಳಿದರು.
ಪ್ರತಿ ಜಿಲ್ಲೆಗೆ ಹೋಗಿ ಸ್ವಾಮೀಜಿಗಳಿಗೆ ಆಮಂತ್ರಣಪತ್ರ ನೀಡಲು ಯೋಜಿಸಿದ್ದೆವು. ಸಮಯದ ಅಭಾವದಿಂದ ಎಲ್ಲರ ಭೇಟಿ ಸಾಧ್ಯವಾಗಿಲ್ಲ. ನಾಡಿನ ಎಲ್ಲ ಹರಗುರು ಚರಮೂರ್ತಿಗಳು, ಮಠಾಧೀಶರು, ಸ್ವಾಮೀಜಿಗಳು 9ರಂದು ಐತಿಹಾಸಿಕ ಅಭಿಮಾನೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು. ಎಲ್ಲ ಸಮಾಜದ ಗುರುಗಳು ಬಂದು ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಅಭಿಮಾನಿಗಳು ಆಗಮಿಸಲು 10 ಸಾವಿರ ಬಸ್‍ಗಳನ್ನು ಬುಕ್ಕಿಂಗ್ ಮಾಡಲಾಗಿದೆ. 45ರಿಂದ 50 ಸಾವಿರ ಕಾರು ಮತ್ತಿತರ ನಾಲ್ಕು ವಾಹನಗಳು ಬರಲಿವೆ. ನಮ್ಮ ನಿರೀಕ್ಷೆಗೂ ಮೀರಿ ಸ್ಪಂದನೆ ಲಭಿಸುತ್ತಿದೆ. ಸ್ವಾಮೀಜಿಗಳು, ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2 ಗ್ರಂಥಗಳ ಬಿಡುಗಡೆ: ಗೋವಿಂದ ಕಾರಜೋಳ
ಮಾಜಿ ಡಿಸಿಎಂ ಮತ್ತು ಸಂಸದ ಗೋವಿಂದ ಕಾರಜೋಳ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ಸಮಾಜ ಸೇವೆ, ಜೀವನಚರಿತ್ರೆಯನ್ನು ನಾವು ಐತಿಹಾಸಿಕ ನಗರ ಚಿತ್ರದುರ್ಗದಲ್ಲಿ ಒಂದು ಸಾಂಸ್ಕೃತಿಕ ಹಬ್ಬದ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದೇವೆ. ಅವರ ಜೀವನಚರಿತ್ರೆ ಮತ್ತು ಸದನದಲ್ಲಿ ಯಡಿಯೂರಪ್ಪ ಎಂಬ ವಿಚಾರದಲ್ಲಿ ‘ಕೆಂದಾವರೆ- ಕಮಲದಲ್ಲಿ ಅರಳಿದ ಹೂ’ ‘ಸದನದಲ್ಲಿ ಶಿಕಾರಿʼ ಎಂಬ 2 ಗ್ರಂಥಗಳನ್ನು ಅವತ್ತು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ: ಬಿ.ವೈ. ವಿಜಯೇಂದ್ರ
ಮೇ 8ರಂದು ಸಂಜೆ ಯಡಿಯೂರಪ್ಪ ಪುರ ಪ್ರವೇಶ
ಮೇ 8ರಂದು ಸಂಜೆ ಯಡಿಯೂರಪ್ಪಅವರ ಪುರ ಪ್ರವೇಶ ನಡೆಯಲಿದೆ. ಇದನ್ನು ನಾಡಿನ ಸಾಂಸ್ಕೃತಿಕ ಹಬ್ಬದ ರೀತಿಯಲ್ಲಿ ಮಾಡಲು ತಯಾರಿ ಮಾಡಿದ್ದೇವೆ. 24 ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.