ಬಿಎಸ್ವೈ ಅದ್ಧೂರಿ ಪುರಪ್ರವೇಶ; ಪುಷ್ಪವೃಷ್ಟಿ, ಪೂರ್ಣಕುಂಭ ಸ್ವಾಗತ, ನೇಗಿಲ ಪ್ರತಿಕೃತಿ ಜತೆ ಭಾಗಿಯಾದ ರೈತರು
BSY Abhimanotsava: ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನವನ್ನು ಗೌರವಿಸುವ ಸಲುವಾಗಿ ನಾಳೆ ಚಿತ್ರದುರ್ಗದಲ್ಲಿ ಬಿಎಸ್ವೈ ಅಭಿಮಾನೋತ್ಸವ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಲಕ್ಷಾಂತರ ಅಭಿಮಾನಿಗಳು ಭಾಗಿಯಾಗುವ ನಿರೀಕ್ಷೆ ಇದೆ.
ಚಿತ್ರದುರ್ಗದಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅದ್ಧೂರಿ ಸ್ವಾಗತ. -
ರೈತ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವವು ನಾಳೆ (ಮೇ 9) ನಡೆಯಲಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿಬಿಎಸ್ವೈ ಅವರನ್ನು ಶುಕ್ರವಾರ ಸಂಜೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ತೆರೆದ ವಾಹನದಲ್ಲಿ ಮೆರವಣಿಗೆಯುದ್ದಕ್ಕೂ ಯಡಿಯೂರಪ್ಪನವರಿಗೆ ಜಯವಾಗಲಿ; ಭಾರತ್ ಮಾತಾ ಕಿ ಜೈ, ವಿಜಯಣ್ಣನಿಗೆ ಜಯವಾಗಲಿ- ಇವೇ ಮೊದಲಾದ ಘೋಷಣೆಗಳನ್ನು ಅಭಿಮಾನಿಗಳು, ಕಾರ್ಯಕರ್ತರು ಕೂಗಿದರು.
ಯಡಿಯೂರಪ್ಪ ಅವರು ವೇದಿಕೆಗೆ ಆಗಮಿಸಿದಾಗ ಪುಷ್ಪವೃಷ್ಟಿ ಮಾಡಲಾಯಿತು. ರೈತ ನಾಯಕ ಯಡಿಯೂರಪ್ಪ ಅವರನ್ನು ನೇಗಿಲಿನ ಪ್ರತಿಕೃತಿ ಹಿಡಿದು ರೈತ ಮೋರ್ಚಾ ಪದಾಧಿಕಾರಿಗಳು, ರೈತ ಮುಖಂಡರು ಸ್ವಾಗತಿಸಿದರು. ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು.
ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ, ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ, ಮಾಜಿ ಸಚಿವ ಬಿ. ಶ್ರೀರಾಮುಲು, ಬಿ.ಸಿ. ಪಾಟೀಲ್, ಸಂಸದ ಬಿ.ವೈ. ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ವಿಧಾನಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಶಾಸಕರಾದ ಎಂ. ಚಂದ್ರಪ್ಪ ಜಿ. ಜನಾರ್ಧನ್ ರೆಡ್ಡಿ, ಎನ್. ಮುನಿರತ್ನ, ಸಿ.ಕೆ. ರಾಮಮೂರ್ತಿ, ದುರ್ಯೋಧನ ಐಹೊಳೆ, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು, ವಿಧಾನಪರಿಷತ್ ಮಾಜಿ ಸದಸ್ಯ ವೈ.ಎ. ನಾರಾಯಣಸ್ವಾಮಿ, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯ, ಎಸ್ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಜಿ.ಎಸ್. ತಿಪ್ಪಾರೆಡ್ಡಿ, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಚಿತ್ರದುರ್ಗದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ವಿವಿಧ ಕಲಾತಂಡಗಳು ಮೆರವಣಿಗೆಯನ್ನು ಇನ್ನಷ್ಟು ಆಕರ್ಷಕವನ್ನಾಗಿ ಮಾಡಿದವು. ನಾಳೆ ನಡೆಯುವ ಬಿಎಸ್ವೈ ಅವರ ಅಭಿಮಾನೋತ್ಸವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೀ ಅವರು ಭಾಗವಹಿಸುತ್ತಾರೆ. ಸುಮಾರು 10 ಲಕ್ಷದಷ್ಟು ಅಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಇದಕ್ಕಾಗಿ ವ್ಯಾಪಕ ಸಿದ್ಧತೆ ಮಾಡಲಾಗಿದೆ.
ರಾಜ್ಯ ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಜನಸೇವೆಯಲ್ಲಿ 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಾಳೆ ಚಿತ್ರದುರ್ಗದಲ್ಲಿ ಬಿಎಸ್ವೈ ಅಭಿಮಾನೋತ್ಸವ ಹಮ್ಮಿಕೊಳ್ಳಲಾಗಿದೆ.