ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cancer cases: ದಕ್ಷಿಣ ಕನ್ನಡದಲ್ಲಿ ಒಂದೇ ವರ್ಷದಲ್ಲಿ ಕ್ಯಾನ್ಸರ್‌ ಪ್ರಕರಣ ದುಪ್ಪಟ್ಟು, ಕಳವಳ

Dakshina Kannada News: ಬಾಯಿ ಕ್ಯಾನ್ಸರ್‌ ಹಾಗೂ ಸ್ತನ ಕ್ಯಾನ್ಸರ್‌ಗಳ ಪ್ರಮಾಣ ಜಿಲ್ಲೆಯಲ್ಲಿ ವಿಪರೀತವಾಗಿ ಏರಿಕೆಯಾಗುತ್ತಿದೆ. ಇದರ ಜತೆಗೆ ಗರ್ಭಕಂಠದ ಕ್ಯಾನ್ಸರ್‌, ಇತರ ರೀತಿಯ ಕ್ಯಾನ್ಸರ್‌ಗಳು ಕೂಡ ಹೆಚ್ಚುತ್ತಿದ್ದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಬಹಳಷ್ಟು ಏರಿಕೆ ಕಂಡಿದೆ. ವಿಶೇಷವಾಗಿ ಮಂಗಳೂರು, ಪುತ್ತೂರು ಭಾಗದಲ್ಲಿಯೇ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಂಡಿವೆ.

ದಕ್ಷಿಣ ಕನ್ನಡದಲ್ಲಿ ಒಂದೇ ವರ್ಷದಲ್ಲಿ ಕ್ಯಾನ್ಸರ್‌ ಕೇಸ್ ದುಪ್ಪಟ್ಟು, ಕಳವಳ

ಕ್ಯಾನ್ಸರ್‌ ಪ್ರಕರಣಗಳು -

ಹರೀಶ್‌ ಕೇರ
ಹರೀಶ್‌ ಕೇರ Dec 19, 2025 9:20 AM

ಮಂಗಳೂರು, ಡಿ.19: ರಾಜ್ಯದಲ್ಲಿ'ಗೃಹ ಆರೋಗ್ಯ' ಯೋಜನೆಯಡಿ ಎನ್‌ಸಿಡಿ (ಸಾಂಕ್ರಾಮಿಕವಲ್ಲದ ರೋಗಗಳು) ಪತ್ತೆ ಹಾಗೂ ಚಿಕಿತ್ಸೆಗಳು ಸಾಗುತ್ತಿದ್ದು, ದಕ್ಷಿಣ ಕನ್ನಡ (dakshina kannada) ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ 1,411 ಮಂದಿಯಲ್ಲಿ ಕಾಣಿಸಿಕೊಂಡ ಕ್ಯಾನ್ಸರ್‌ (cancer cases) ಈ ವರ್ಷ 3,361 ಮಂದಿಯಲ್ಲಿ ಕಾಣಿಸಿಕೊಂಡಿದೆ ಎಂದು ಗೊತ್ತಾಗಿದೆ. ವರ್ಷದಲ್ಲೇ ರೋಗ ದುಪ್ಪಟ್ಟಾಗಿದ್ದು, ಜನಸಾಮಾನ್ಯರ ಕಳವಳಕ್ಕೆ ಕಾರಣವಾಗಿದೆ.

ಗೃಹ ಆರೋಗ್ಯದ ಮೂಲಕ ಕ್ಯಾನ್ಸರ್‌, ಮಧುಮೇಹ, ಅಧಿಕ ರಕ್ತದೊತ್ತಡದಂತಹ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಈ ಯೋಜನೆಯಡಿ ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್‌ ಶಂಕಿತ ಪ್ರಕರಣಗಳನ್ನು ಪತ್ತೆಹಚ್ಚಿ, ಉಚಿತ ಔಷಧ ನೀಡಲಾಗುತ್ತಿದ್ದು, ರಾಜ್ಯದಲ್ಲಿ 2025ರ ನವೆಂಬರ್‌ ತಿಂಗಳಾಂತ್ಯದಲ್ಲಿ 22 ಲಕ್ಷ ಜನರನ್ನು ತಪಾಸಣೆಗೊಳಪಡಿಸಿ, 5 ಸಾವಿರಕ್ಕೂ ಹೆಚ್ಚು ಶಂಕಿತ ಕ್ಯಾನ್ಸರ್‌ ಪ್ರಕರಣಗಳು ಪತ್ತೆಯಾಗಿವೆ.

ಗೃಹ ಆರೋಗ್ಯದಿಂದ ಪತ್ತೆ ಕಾರ‍್ಯ

ರಾಜ್ಯ ಸರಕಾರದ ಗೃಹ ಆರೋಗ್ಯ ಯೋಜನೆಯಿಂದಾಗಿ ಆರೋಗ್ಯ ಕಾರ‍್ಯಕರ್ತರು ಮನೆಮನೆಗೆ ಭೇಟಿ ನೀಡಿದ ಪರಿಣಾಮ ಕ್ಯಾನ್ಸರ್‌ ರೋಗವನ್ನು ಪತ್ತೆ ಹಚ್ಚುವ ಕಾರ‍್ಯ ಸುಲಭವಾಗಿದೆ. ಬಹಳಷ್ಟು ರೋಗಿಗಳಿಗೆ ಈ ರೋಗದ ಮಾಹಿತಿ ಇಲ್ಲದೇ ಇದ್ದು, ಕೆಲವೊಂದು ರೋಗಿಗಳಲ್ಲಿ ಮೊದಲ ಹಂತದಲ್ಲಿಯೇ ಇದರ ಪತ್ತೆ ಕಾರ‍್ಯ ಸಾಧ್ಯವಾಗಿದೆ. ಉಳಿದಂತೆ ಮತ್ತಷ್ಟು ರೋಗಿಗಳಲ್ಲಿ ಎರಡನೇ, ಮೂರನೇ ಹಂತದ ದಾಟಿದ ಪ್ರಕರಣಗಳು ಕೂಡ ಹೆಚ್ಚಾಗಿದೆ ಎನ್ನುವುದು ಕಳವಳ ಹುಟ್ಟಿಸಿದೆ.

ಇತ್ತೀಚಿನ ವರ್ಷದಲ್ಲಿ ಅವಿವಾಹಿತರಿಗೆ ಸ್ತನ ಕ್ಯಾನ್ಸರ್ ಹೆಚ್ಚಾಗಲು ಕಾರಣ ಏನು ಗೊತ್ತಾ?

ಮುಖ್ಯವಾಗಿ ಬಾಯಿ ಕ್ಯಾನ್ಸರ್‌ ಹಾಗೂ ಸ್ತನ ಕ್ಯಾನ್ಸರ್‌ಗಳ ಪ್ರಮಾಣವಂತೂ ಜಿಲ್ಲೆಯಲ್ಲಿ ವಿಪರೀತವಾಗಿ ಏರಿಕೆಯಾಗುತ್ತಿದೆ. ಇದರ ಜತೆಗೆ ಗರ್ಭಕಂಠದ ಕ್ಯಾನ್ಸರ್‌, ಇತರ ರೀತಿಯ ಕ್ಯಾನ್ಸರ್‌ಗಳು ಕೂಡ ಹೆಚ್ಚುತ್ತಿದ್ದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಬಹಳಷ್ಟು ಏರಿಕೆ ಕಂಡಿದೆ. ವಿಶೇಷವಾಗಿ ಮಂಗಳೂರು, ಪುತ್ತೂರು ಭಾಗದಲ್ಲಿಯೇ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಂಡರೆ ಉಳಿದ ತಾಲೂಕುಗಳಲ್ಲಿಯೂ ಇನ್ನೂರು ಗಡಿ ದಾಟಿದ ಪ್ರಕರಣಗಳೇ ತುಂಬಿದೆ.

ಪುರುಷರಲ್ಲಿ ಹೆಚ್ಚಿದ ಬಾಯಿ ಕ್ಯಾನ್ಸರ್‌

2024-25ನೇ ಸಾಲಿನಲ್ಲಿ 249 ಮಂದಿಯಲ್ಲಿ ಪುರುಷರ ಬಾಯಿ ಕ್ಯಾನ್ಸರ್‌ ಕಾಣಿಸಿಕೊಂಡರೆ ಇತ್ತ 118 ಮಹಿಳೆಯರಲ್ಲೂ ಪತ್ತೆಯಾಗಿದೆ. ಇದೇ ರೀತಿ ಈ ವರ್ಷ 2025-26ನೇ ಸಾಲಿನಲ್ಲಿ 123 ಪುರುಷರಲ್ಲಿ ಹಾಗೂ 47 ಮಂದಿ ಮಹಿಳೆಯಲ್ಲಿ ಬಾಯಿ ಕ್ಯಾನ್ಸರ್‌ ಪತ್ತೆಯಾಗಿದೆ. ಇದರ ಜತೆಗೆ ಜಿಲ್ಲೆಯಲ್ಲಿರುವ ಹೊರ ಜಿಲ್ಲೆಯ 26 ಮಂದಿಯಲ್ಲಿ ಬಾಯಿ ಕ್ಯಾನ್ಸರ್‌, 7 ಮಂದಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌, 53 ಮಂದಿಯಲ್ಲಿ ಇತರ ಕ್ಯಾನ್ಸರ್‌ ಕಾಣಿಸಿಕೊಂಡಿದೆ. ಸರಕಾರಿ ಆಸ್ಪತ್ರೆಯ ಬದಲು ಖಾಸಗಿ ಆಸ್ಪತ್ರೆಯಲ್ಲೇ ಹೆಚ್ಚು ಕ್ಯಾನ್ಸರ್‌ ಪ್ರಕರಣಗಳು ಪತ್ತೆಯಾಗಿದೆ. 2671 ಪ್ರಕರಣಗಳು ಬರೀ ಖಾಸಗಿ ಆಸ್ಪತ್ರೆಯಲ್ಲಿ ಪತ್ತೆಯಾಗಿದೆ.

ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ಶಿಕ್ಷಣ: ಅಂತರ ಕಡಿಮೆ ಮಾಡುವುದು

ದಕ್ಷಿಣ ಕನ್ನಡ ಜಿಲ್ಲೆಯ 23,11,835 ಲಕ್ಷ ಮಂದಿಯಲ್ಲಿ ಶೇ.30ರಷ್ಟು ಮಂದಿಯಲ್ಲಿ ಸಾಂಕ್ರಮಿಕವಲ್ಲದ ರೋಗಗಳು ಪತ್ತೆಯಾಗುವುದು ಕಳವಳಕಾರಿ ವಿಚಾರವಾಗಿದೆ. ಮುಖ್ಯವಾಗಿ ಕ್ಯಾನ್ಸರ್‌, ಹೃದ್ರೋಗ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿದೆ. ಸರಕಾರದ ಗೃಹ ಆರೋಗ್ಯ ಯೋಜನೆಯಿಂದ ಈ ಪ್ರಕರಣಗಳು ಬೇಗನೆ ಪತ್ತೆಯಾಗುತ್ತಿದೆ. ಮುಖ್ಯವಾಗಿ ಬಾಯಿಯ ಕ್ಯಾನ್ಸರ್‌ ಹಾಗೂ ಸ್ತನ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚುತ್ತಿದೆ. ಆರಂಭಿಕ ಹಂತದಲ್ಲಿದ್ದಾಗ ಇವುಗಳ ಚಿಕಿತ್ಸೆ ಬಹಳ ಸುಲಭವಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಆರೋಗ್ಯಾಧಿಕಾರಿ ಡಾ.ಎಚ್‌. ಆರ್‌. ತಿಮ್ಮಯ್ಯ ತಿಳಿಸಿದ್ದಾರೆ.