ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

2nd PUC Results 2026: ತಾಯಿ ಸಾವಿನ ನೋವಿನಲ್ಲೂ ಪರೀಕ್ಷೆ ಬರೆದು ರಾಜ್ಯಕ್ಕೆ ಟಾಪರ್‌ ಆದ ದಿಶಾ; 600ಕ್ಕೆ 600 ಅಂಕ!

ಮೂಡುಬಿದಿರೆ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿನಿ ದಿಶಾ ಅಭೂತಪೂರ್ವ ಅವರ ಸಾಧನೆ ಮಾಡಿದ್ದಾರೆ. ಪರೀಕ್ಷೆಯ ಸಮಯದಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ಅವರು, ನೋವಿನ ನಡುವೆ ಮನೋಧೈರ್ಯ ಕಳೆದುಕೊಳ್ಳದೆ ಪರೀಕ್ಷೆಯನ್ನು ಬರೆದು ವಾಣಿಜ್ಯ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ತಾಯಿ ಸಾವಿನ ನೋವಿನಲ್ಲೂ ಪರೀಕ್ಷೆ ಬರೆದು ರಾಜ್ಯಕ್ಕೆ ಟಾಪರ್‌ ಆದ ದಿಶಾ!

ಮೂಡುಬಿದಿರೆ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿನಿ ದಿಶಾ. -

Prabhakara R
Prabhakara R Apr 9, 2026 11:13 PM

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (2nd PUC Results 2026) ಗುರುವಾರ ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿನಿ ದಿಶಾ (Disha) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸದ್ಯ ಈಕೆಯ ಸಾಧನೆಗೆ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ. ಆದರೆ, ಈ ನಗು ಮುಖದ ಹಿಂದೆ ಯಾರೂ ಊಹಿಸಲಾಗದಷ್ಟು ಶೋಕವೊಂದಿದೆ. ಈಕೆಯ ಸಾಧನೆಯ ಕಥೆ ಕೇಳಿದರೆ ಎಂಥವರ ಕಣ್ಣಂಚನ್ನು ಒದ್ದೆ ಮಾಡುತ್ತದೆ.

ಹೌದು, ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ, ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡು ಆತ್ಮವಿಶ್ವಾಸದಿಂದ ಇದ್ದರು. ಮೊದಲ ಮೂರು ವಿಷಯಗಳ ಪರೀಕ್ಷೆ ಮುಗಿದಿದ್ದವು. ಆದರೆ, ವಿಧಿ ಆಡಿದ ಆಟವೇ ಬೇರೆಯಾಗಿತ್ತು. ಪರೀಕ್ಷೆ ನಡೆಯುತ್ತಿರುವಾಗಲೇ ದಿಶಾ ಅವರ ತಾಯಿ ಆಕಸ್ಮಿಕವಾಗಿ ನಿಧನರಾದರು. ಇದರಿಂದ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತಹ ಪರಿಸ್ಥಿತಿ. ಒಂದೆಡೆ ಹೆತ್ತ ತಾಯಿಯ ಕಳೆದುಕೊಂಡ ದುಃಖ, ಇನ್ನೊಂದೆಡೆ ಭವಿಷ್ಯವನ್ನು ನಿರ್ಧರಿಸುವ ಪರೀಕ್ಷೆ. ಈ ಸಂಕಷ್ಟದ ಸಮಯದಲ್ಲಿ ಧೃತಿಗೆಡದ ದಿಶಾ, ತಾಯಿಯ ಕನಸನ್ನು ನನಸು ಮಾಡುವ ದೃಢ ಸಂಕಲ್ಪ ಮಾಡಿದರು.

ತಾಯಿಯ ಅಗಲಿಕೆಯ ನೋವಿನಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿನಿ ಹೋರಾಟಕ್ಕೆ ಕಾಲೇಜು ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಸಂಪೂರ್ಣ ಬೆಂಬಲವಾಗಿ ನಿಂತರು. "ಆ ಸಮಯದಲ್ಲಿ ಏನು ಮಾಡಬೇಕೆಂದು ತಿಳಿಯದಾಗಿತ್ತು. ಆದರೆ, ನನ್ನ ಅಮ್ಮನಿಗೋಸ್ಕರವಾದರೂ ನಾನು ಇದನ್ನು ಸಾಧಿಸಬೇಕಿತ್ತು," ಎಂದು ದಿಶಾ ಮಾಧ್ಯಮಗಳ ಮುಂದೆ ಮಾತನಾಡುತ್ತಾ ಭಾವುಕರಾಗಿದ್ದಾರೆ.

ತಾಯಿಯ ನೆನಪುಗಳನ್ನು ಮೆಲುಕು ಹಾಕಿದ ದಿಶಾ, "ಪರೀಕ್ಷೆ ಬಗ್ಗೆ ಭಯವಾದಾಗಲೆಲ್ಲಾ ಅಮ್ಮ, 'ನೀನು ಕಷ್ಟಪಟ್ಟಿದ್ದೀಯ, ದೇವರು ಇದ್ದಾನೆ, ಯಾರ ಹಣೆಯಲ್ಲಿ ಬರೆದಿದೆಯೋ ಅವರಿಗೆ ಸಿಗುತ್ತೆ, ಹೆದರಬೇಡ' ಎಂದು ಧೈರ್ಯ ಹೇಳುತ್ತಿದ್ದರು. ಆ ಮಾತುಗಳೇ ನನಗೆ ಶಕ್ತಿಯಾದವು. ಅಮ್ಮ ಈಗ ಇದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು," ಎಂದು ಕಣ್ಣೀರಾಗಿದ್ದಾರೆ.

2nd PUC District Wise Result 2026: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್; ಜಿಲ್ಲಾವಾರು ಪಟ್ಟಿ ಇಲ್ಲಿದೆ

ಇನ್ನು ತಾಯಿಯ ಕನಸಿನಂತೆ ಮುಂದೆ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗುವ ಗುರಿ ಹೊಂದಿರುವ ದಿಶಾ, ತಮ್ಮ ಜೂನಿಯರ್‌ಗಳಿಗೆ, "ಕೇವಲ ಹೆಚ್ಚು ಹೊತ್ತು ಓದುವುದಲ್ಲ, ಓದಿದ್ದನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೀರಿ ಎಂಬುದು ಮುಖ್ಯ. ಹೆಚ್ಚು ಹೆಚ್ಚು ಅಭ್ಯಾಸ ಮಾಡಿ," ಎಂದು ಕಿವಿಮಾತು ಹೇಳಿದ್ದಾರೆ.