Mangaluru News: ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ; ಮಂಗಳೂರಿನ ಚರ್ಚ್ ಫಾದರ್ ವಿರುದ್ಧ ಪೋಕ್ಸೊ ಕೇಸ್ ದಾಖಲು
ಅಪ್ರಾಪ್ತ ವಯಸ್ಸಿನ ಬಾಲಕನು ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಚರ್ಚ್ಗೆ ಪ್ರಾರ್ಥನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕೃತ್ಯ ನಡೆದಿದೆ. ಚರ್ಚ್ನ ಫಾದರ್ ಅವರು ಲೈಂಗಿಕ ದುರುದ್ದೇಶದಿಂದ ಬಾಲಕನಿಗೆ ಚಾಕಲೇಟ್ ನೀಡಿ ಪುಸಲಾಯಿಸಿ, ಅನುಚಿತವಾಗಿ ವರ್ತಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
-
ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ನಗರದ ಚರ್ಚೊಂದರ (Mangaluru church) ಫಾದರ್ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ನಗರದ ವೆಲೆನ್ಸಿಯಾದ ಸೇಂಟ್ ವಿನ್ಸೆಂಟ್ ಫೆರರ್ ಚರ್ಚ್ ಸಿಪ್ರಿಯನ್ ಪಿಂಟೋ ಎಂಬುವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ.
ಎಫ್ಐಆರ್ ಪ್ರಕಾರ, ಚರ್ಚ್ ಫಾದರ್ ಬಾಲಕನಿಗೆ ಚಾಕೆಟ್ ನೀಡಿ, 'ಯು ಆರ್ ಎ ಸ್ವೀಟ್ ಬಾಯ್', 'ನಿನ್ನ ನಗು ಚೆನ್ನಾಗಿದೆ', 'ಐ ಲವ್ ಯು' ಎಂದೆಲ್ಲ ಹೇಳಿ ಪುಸಲಾಯಿಸಿ, ಚರ್ಚ್ನ ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.
ಅಷ್ಟೇ ಅಲ್ಲದೆ ಆಗಸ್ಟ್ 14ರಂದು ಸಂಜೆ 6.30ಕ್ಕೆ ಬಾಲಕ ಚರ್ಚಿಗೆ ಪ್ರಾರ್ಥನೆಗೆ ಹೋದಾಗಲೂ ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪ ಕೇಳಿಬಂದಿದೆ. ಈ ವಿಚಾರವನ್ನು ಸ್ನೇಹಿತರಲ್ಲಿ ತಿಳಿಸಿದಾಗ ಅವರಿಗೂ ಇದೇ ರೀತಿ ಫಾದರ್ ನಿರಂತರವಾಗಿ ದೌರ್ಜನ್ಯ ಎಸಗಿದ್ದರು ಎನ್ನಲಾಗಿದೆ.
ಬಳಿಕ ಈ ವಿಚಾರವನ್ನು ಬಾಲಕ ಹೆತ್ತವರಿಗೆ ತಿಳಿಸಿದ್ದು, ಅವರು ಬಿಷಪ್ ಅವರ ಗಮನಕ್ಕೆ ತಂದಿದ್ದಾರೆ. ಬಿಷಪ್ ಅವರು ಪೊಲೀಸರಿಗೆ ದೂರು ನೀಡುವಂತೆ ನಿರ್ದೇಶಿಸಿದಂತೆ ದೂರು ನೀಡುತ್ತಿರುವುದಾಗಿ ಉಲ್ಲೇಖಿಸಿಸಲಾಗಿದೆ. ಅದರಂತೆ ಆರೋಪಿತ ಫಾದರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.