ಪತ್ರಕರ್ತರ ಸುರಕ್ಷತೆಗೆ ಹೊಸ ಗೈಡ್ಲೈನ್ಸ್? ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆ
ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರೂ ಪತ್ರಕರ್ತರೆಂದು ಹೇಳಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮಾನ್ಯತೆ ಪಡೆದ ಪತ್ರಕರ್ತರು ಮತ್ತು ಸಾಮಾಜಿಕ ಜಾಲತಾಣದ ಕಂಟೆಂಟ್ ಕ್ರಿಯೇಟರ್ಗಳ ನಡುವಿನ ವ್ಯತ್ಯಾಸ ಗುರುತಿಸಲು ಹಾಗೂ ಪತ್ರಕರ್ತರ ರಕ್ಷಣೆಗೆ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್ -
ನವದೆಹಲಿ: ಸ್ವತಂತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ (Freedom of Expression) ಹೆಸರಿನಲ್ಲಿ ಪ್ರತಿಯೊಬ್ಬರೂ ಪತ್ರಕರ್ತರೆಂದು ಹೇಳಿಕೊಳ್ಳುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ ಮಾನ್ಯತೆ ಪಡೆದ (Accredited) ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳ ಪತ್ರಕರ್ತರಿಗೆ ರಕ್ಷಣೆ ಒದಗಿಸುವುದು ಕಷ್ಟವಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ (Supreme Court) ಅಭಿಪ್ರಾಯಪಟ್ಟಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, ಅಕ್ಟೋಬರ್ 10ರಂದು ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ನಡೆದ ಪ್ರತಿಭಟನೆಗಳನ್ನು ವರದಿ ಮಾಡುತ್ತಿದ್ದ ಮಹಿಳಾ ಪತ್ರಕರ್ತರು ಸೇರಿದಂತೆ ಹಲವು ಮಾಧ್ಯಮ ಪ್ರತಿನಿಧಿಗಳಿಗೆ ಪೊಲೀಸರು ಕಿರುಕುಳ ನೀಡಿದ್ದಾರೆ ಎಂಬ ಅರ್ಜಿಯ ವಿಚಾರಣೆ ನಡೆಸಿದೆ.
ಪತ್ರಕರ್ತರು ಮತ್ತು ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್ಗಳ ನಡುವೆ ವ್ಯತ್ಯಾಸ ಇದೆ
“ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಡಿ ಪ್ರತಿಯೊಬ್ಬರೂ ತಾವು ಪತ್ರಕರ್ತರೆಂದು ಹೇಳಿಕೊಳ್ಳುತ್ತಿರುವಾಗ ಸಮಸ್ಯೆ ಎದುರಾಗುತ್ತದೆ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು, ಮಾನ್ಯತೆ ಪಡೆದ ಪತ್ರಕರ್ತರು, ಡಿಜಿಟಲ್ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವವರು ಹಾಗೂ ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್ಗಳ ನಡುವೆ ಸ್ಪಷ್ಟವಾದ ವ್ಯತ್ಯಾಸ ಗುರುತಿಸುವ ಅಗತ್ಯವಿದೆ ಎಂದಿದೆ.
ಪತ್ರಕರ್ತರಿಗೆ ಅನ್ವಯಿಸುವ ವಿವಿಧ ಹಂತಗಳ ರಕ್ಷಣೆಯನ್ನು ಪರಿಗಣಿಸಿ, ಈ ಕುರಿತು ಮಾರ್ಗಸೂಚಿಗಳನ್ನು ರೂಪಿಸುವುದಾಗಿ ನ್ಯಾಯಪೀಠ ಸೂಚಿಸಿದ್ದು, ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು, ಪತ್ರಕರ್ತರ ಸುರಕ್ಷತೆಗಾಗಿ ದೇಶಾದ್ಯಂತ ಅನ್ವಯಿಸುವ ಏಕರೂಪದ ಶಿಷ್ಟಾಚಾರ ರೂಪಿಸಬೇಕೆಂದು ಮನವಿ ಮಾಡಿದರು.
ಮಹಿಳಾ ಪತ್ರಕರ್ತರ ದೂರಿನ ತನಿಖೆಗೆ ಸೂಚನೆ
ಜಂತರ್ ಮಂತರ್ ಸಮೀಪದ ಪ್ರತಿಭಟನೆಯ ಸಂದರ್ಭದಲ್ಲಿ ಜಾತಿ ನಿಂದನೆಯ ಹೇಳಿಕೆ ನೀಡಿ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಮಹಿಳಾ ಪತ್ರಕರ್ತೆಯ ವಿರುದ್ಧ ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ, ಆಕೆಯ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಇದೇ ವೇಳೆ, ಪೊಲೀಸ್ ಅಧಿಕಾರಿಯೊಬ್ಬರು ತನ್ನ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾರೆ ಎಂದು ಮಹಿಳಾ ಪತ್ರಕರ್ತೆ ದೂರು ನೀಡಿದ್ದರೂ ಪ್ರಕರಣ ದಾಖಲಿಸಿಲ್ಲ ಎಂದು ಇಂದಿರಾ ಜೈಸಿಂಗ್ ಆರೋಪಿಸಿದ್ದು, ಪ್ರತಿಭಟನೆಯ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಹಲವು ಮಹಿಳಾ ಪತ್ರಕರ್ತೆಯರನ್ನು ಪುರುಷ ಪೊಲೀಸ್ ಸಿಬ್ಬಂದಿ ತಳ್ಳಾಡಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳನ್ನೂ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಈ ಆರೋಪಗಳನ್ನು ಗಂಭೀರವೆಂದು ಪರಿಗಣಿಸಿದ ನ್ಯಾಯಪೀಠ, ಮಹಿಳಾ ಪತ್ರಕರ್ತೆಯ ದೂರನ್ನು ಪರಿಶೀಲಿಸಿ ತನಿಖೆ ಪೂರ್ಣಗೊಳಿಸುವಂತೆ ಪೊಲೀಸರಿಗೆ ಸೂಚಿಸಿದ್ದು, ದೂರುಗಳ ವಿಚಾರಣೆಗಾಗಿ ನಿವೃತ್ತ ಮಹಿಳಾ ನ್ಯಾಯಮೂರ್ತಿಗಳು, ನಿವೃತ್ತ ಮಹಿಳಾ ಐಪಿಎಸ್ ಅಧಿಕಾರಿಗಳು ಸೇರಿದಂತೆ ಮಹಿಳಾ ಸದಸ್ಯರನ್ನೇ ಒಳಗೊಂಡ ಅಥವಾ ಬಹುಪಾಲು ಮಹಿಳಾ ಸದಸ್ಯರಿರುವ ಸ್ವತಂತ್ರ ಸಮಿತಿಯನ್ನು ರಚಿಸುವ ಸಾಧ್ಯತೆಯನ್ನೂ ನ್ಯಾಯಾಲಯ ಪ್ರಸ್ತಾಪಿಸಿದೆ.
“ಮೊಬೈಲ್ ಇದ್ದವರೆಲ್ಲ ಪತ್ರಕರ್ತರಲ್ಲ”
ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಮೈಕ್ ಹಿಡಿದುಕೊಂಡು ತಮ್ಮನ್ನು ಸ್ವತಂತ್ರ ಪತ್ರಕರ್ತರೆಂದು ಪರಿಚಯಿಸಿಕೊಳ್ಳುವ ಕೆಲವರು ವಾಸ್ತವದಲ್ಲಿ ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಮಾಡುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. “ಇಂದಿನ ಡಿಜಿಟಲ್ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ಹೊಂದಿರುವ ಪ್ರತಿಯೊಬ್ಬರೂ ಪತ್ರಕರ್ತರೆಂದು ಹೇಳಿಕೊಳ್ಳುತ್ತಿದ್ದಾರೆ. ರೀಲ್ಸ್ ಮಾಡುವವರು ಯಾರು, ಸ್ವತಂತ್ರ ಪತ್ರಕರ್ತರು ಯಾರು ಎಂಬುದನ್ನು ಗುರುತಿಸುವುದೇ ಸಮಸ್ಯೆಯಾಗಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪತ್ರಕರ್ತರ ಹಕ್ಕುಗಳು ಮತ್ತು ಸುರಕ್ಷತೆಯನ್ನು ಕಾಪಾಡುವುದರ ಜೊತೆಗೆ, ನಿಜವಾದ ಪತ್ರಕರ್ತರು ಹಾಗೂ ಸಾಮಾಜಿಕ ಜಾಲತಾಣದ ಕಂಟೆಂಟ್ ಸೃಷ್ಟಿಕರ್ತರ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸೂಕ್ತ ಮಾರ್ಗಸೂಚಿಗಳ ಅಗತ್ಯವಿದೆ ಎಂಬುದನ್ನು ಈ ವಿಚಾರಣೆ ಮುನ್ನೆಲೆಗೆ ತಂದಿದೆ.