Youtuber Sameer: ಯೂಟ್ಯೂಬರ್ ಸಮೀರ್‌ಗೆ ತಪ್ಪದ ಸಂಕಷ್ಟ; ಬೆಂಗಳೂರಿನ ಬಾಡಿಗೆ ಮನೆ ಮೇಲೆ ಪೊಲೀಸರಿಂದ ದಾಳಿ
Dharmasthala Case: ಧರ್ಮಸ್ಥಳದ ವಿರುದ್ಧ ಎಐ ವಿಡಿಯೊ ಮಾಡಿ ಸುಳ್ಳು ಆರೋಪ ಹೊರಿಸಿದ ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸೆಪ್ಟೆಂಬರ್ 4ರಂದು ಬೆಳ್ತಂಗಡಿ ಪೊಲೀಸರು ಆತನ ಬೆಂಗಳೂರಿನ ಬಾಡಿಗೆ ಮನೆಗೆ ದಾಳಿ ನಡೆಸಿದೆ.

-

ಬೆಂಗಳೂರು: ಧರ್ಮಸ್ಥಳ ಪ್ರಕರಣದ (Dharmasthala Case) ವಿಚಾರದಲ್ಲಿ ಗುರುವಾರ (ಸೆಪ್ಟೆಂಬರ್ 4) ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಎಐ ವಿಡಿಯೊ (AI Video) ಮೂಲಕ ಕಥೆ ಕಟ್ಟಿದ್ದ ಯೂಟ್ಯೂಬರ್ ಸಮೀರ್ (Youtuber Sameer)ನ ಬೆಂಗಳೂರು ಮನೆಗೆ ದಾಳಿ ನಡೆಸಿದ ಬೆಳ್ತಂಗಡಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಗೆ 2 ಬಾರಿ ಹಾಜರಾಗಿದ್ದ ಸಮೀರ್ ಸಮರ್ಪಕವಾಗಿ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಆತನ ಮನೆಯನ್ನು ಶೋಧಿಸಲಾಗಿದೆ ಎನ್ನಲಾಗಿದೆ.
ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಮತ್ತು ತಂಡ, ಎಫ್.ಎಸ್.ಎಲ್. ವಿಭಾಗದ ಸೋಕೊ ಸಿಬ್ಬಂದಿ ಜತೆ ಬೆಂಗಳೂರಿನ ಬನ್ನೇರುಘಟ್ಟದ ಹುಳ್ಳಹಲ್ಲಿಯಲ್ಲಿರುವ ಸಮೀರ್‌ನ ಬಾಡಿಗೆ ಮನೆ ಮೇಲೆ ದಾಳಿ ನಡೆಸಲಾಯಿತು.
ಬೆಳ್ತಂಗಡಿ ನ್ಯಾಯಾಲಯದಿಂದ ಸೆಪ್ಟೆಂಬರ್ 3ರಂದು ಸರ್ಚ್ ವಾರೆಂಟ್ ಪಡೆದು ಬೆಂಗಳೂರಿಗೆ ತೆರಳಿದ್ದ ತಂಡ ಸಮೀರ್‌ನ ಕಂಪ್ಯೂಟರ್, ಮೊಬೈಲ್ ಪರಿಶೀಲನೆ ನಡೆಸಿದೆ. ಇದನ್ನು ಜಪ್ತಿ ಮಾಡುವ ಸಾಧ್ಯತೆ ಇದೆ.
ಈ ಸುದ್ದಿಯನ್ನೂ ಓದಿ: Youtuber Sameer: ಎಸ್‌ಐಟಿ ಪ್ರಶ್ನೆಗಳಿಗೆ ಪರದಾಡಿದ ಸಮೀರ್, ಮತ್ತೆ ದಾಖಲೆಗಳೊಂದಿಗೆ ವಿಚಾರಣೆಗೆ ಬರಲು ಸೂಚನೆ
ಯಾರು ಈ ಸಮೀರ್ ಎಂ.ಡಿ.?
ಎಂಜಿನಿಯರಿಂಗ್ ಪದವೀಧರನಾಗಿರುವ ಸಮೀರ್ ಎಂ.ಡಿ. ಮೂಲತಃ ಬಳ್ಳಾರಿ ಜಿಲ್ಲೆಯವನು. ʼದೂತʼ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿ ಅನೇಕ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದಾನೆ. ಈ ಪೈಕಿ ಸೌಜನ್ಯಾ ಕೊಲೆ ಪ್ರಕರಣದ ಕುರಿತು ಮಾಡಿದ್ದ ಎಐ ವಿಡಿಯೊ ಕೆಲವು ತಿಂಗಳ ಹಿಂದೆ ಭಾರಿ ಸಂಚಲನ ಸೃಷ್ಟಿಸಿತ್ತು. ಈ ವಿಡಿಯೊದಲ್ಲಿ ಸಮೀರ್ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾನೆ ಎನ್ನು ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಠಾಣೆಯ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಅಲ್ಲದೆ, ಸಮೀರ್ ಕಚೇರಿಗೆ ಭೇಟಿ ನೀಡಿದ್ದ ಪೊಲೀಸರು ವಿಚಾರಣೆಗೆ ಹಾಜರಾಗಬೇಕೆಂದೂ ಸೂಚಿಸಿದ್ದರು. ಹೀಗಾಗಿ ಆತ ಕೆಲವು ದಿನಗಳ ಹಿಂದೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಸ್‌ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದ. ಆದರೆ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪರದಾಡಿದ್ದ.
2 ದಿನಗಳಲ್ಲಿ ಒಟ್ಟು 14 ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಗಾಗಿರುವ ಸಮೀರ್‌ಗೆ ಮತ್ತೊಮ್ಮೆ ಠಾಣೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ಸೂಚಿಸಿದ್ದರು. ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಗಲಾಟೆ ಸೃಷ್ಟಿಸಿದ ಆರೋಪದ ಮೇಲೆ ಸಮೀರ್‌ನನ್ನು ಬೆಳ್ತಂಗಡಿ ಪೊಲೀಸರು ವಿಚಾರಣೆಗೆ ಕರೆದಿದ್ದರು. ಆಗಸ್ಟ್ 24ರಂದು 4.5 ಗಂಟೆ ಹಾಗೂ ಆಗಸ್ಟ್ 25ರಂದು 9.5 ಗಂಟೆ, ಒಟ್ಟು 14 ಗಂಟೆಗಳ ವಿಚಾರಣೆ ನಡೆಸಲಾಗಿತ್ತು.