Davanagere News: ಸಾಲದ ಕಂತು ಕಟ್ಟಿಲ್ಲ ಎಂದು ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿದ ಪತಿ!
Davanagere News: ಧರ್ಮಸ್ಥಳ ಸ್ವಸಹಾಯ ಸಂಘದಲ್ಲಿ ಪಡೆದ ಸಾಲದ ಕಟ್ಟದ ಹಿನ್ನೆಲೆಯಲ್ಲಿ ಹೆಂಡತಿಯ ಮೂಗನ್ನೇ ಗಂಡ ಕಚ್ಚಿ ತುಂಡರಿಸಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಪತ್ನಿ ನೆರೆ ಮನೆಯವರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ದಾವಣಗೆರೆ: ಸಾಲದ ಕಂತು ಕಟ್ಟಲಿಲ್ಲ ಎಂದು ಪತ್ನಿಯ ಮೂಗನ್ನೇ ಪತಿ ಕಚ್ಚಿ ತುಂಡರಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಗಾಯಾಳು ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿ ಜುಲೈ 8 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಜಯ್ ಎಂಬಾತ ತನ್ನ ಪತ್ನಿ ವಿದ್ಯಾ ಎಂಬುವವರ ಮೂಗು ಕಚ್ಚಿ ಕಟ್ ಮಾಡಿದ್ದಾನೆ.
ಧರ್ಮಸ್ಥಳ ಸ್ವಸಹಾಯ ಸಂಘದಲ್ಲಿ ಪಡೆದ ಸಾಲದ ಕಟ್ಟದ ಹಿನ್ನೆಲೆಯಲ್ಲಿ ಹೆಂಡತಿಯ ಮೂಗನ್ನೇ ಗಂಡ ಕಚ್ಚಿ ತುಂಡರಿಸಿದ್ದಾನೆ ಎನ್ನಲಾಗಿದೆ. ವಿಜಯ್ ಹಾಗೂ ವಿದ್ಯಾ ದಂಪತಿ ಧರ್ಮಸ್ಥಳ ಸಂಘದಲ್ಲಿ 2 ಲಕ್ಷ ರೂಪಾಯಿ ಸಾಲ ಮಾಡಿದ್ದರು. ವಿದ್ಯಾ ಪ್ರತಿ ತಿಂಗಳು ಸರಿಯಾಗಿ ಕಂತು ಕಟ್ಟುತ್ತಿದ್ದರು. ಕಳೆದ ತಿಂಗಳು 2 ವಾರ ಸಾಲದ ಕಂತು ಕಟ್ಟದ ಹಿನ್ನೆಲೆಯಲ್ಲಿ ಸಂಘದ ಸಿಬ್ಬಂದಿ ಪತಿಗೆ ಕರೆ ಮಾಡಿ ಪ್ರಶ್ನಿಸಿದ್ದಾರೆ. ಹೀಗಾಗಿ ಕುಪಿತಗೊಂಡು ಪತ್ನಿ ಜತೆ ಪತಿ ವಿಜಯ್ ಗಲಾಟೆ ಮಾಡಿದ್ದಾನೆ.
ಗಲಾಟೆ ವಿಕೋಪಕ್ಕೆ ತಿರುಗಿ ಹೆಂಡತಿಯ ಮೂಗನ್ನೇ ಕಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡ ವಿದ್ಯಾ ನೆರೆ ಮನೆಯವರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ, ಪತಿ ವಿಜಯ್ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಿಣೆ ಕೊಡಲಿಲ್ಲ ಎಂದು ಪತ್ನಿಯನ್ನು ತಿರುಪತಿಗೆ ಕರೆದೊಯ್ದು ಗರ್ಭಪಾತ ಮಾಡಿಸಿದ ಪತಿ!

ಮೈಸೂರು: ವರದಕ್ಷಿಣೆ ಕೊಡಲಿಲ್ಲ ಎಂದು ವ್ಯಕ್ತಿಯೊಬ್ಬ ಪತ್ನಿಗೆ ಗರ್ಭಪಾತ ಮಾಡಿಸಿರುವ ಆರೋಪ ಕೇಳಿಬಂದಿದೆ. ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸಂತ್ರಸ್ತ ಮಹಿಳೆಯ ಗಂಡ, ಅತ್ತೆ, ಮಾವನ ವಿರುದ್ಧ ಎಫ್ಐಆರ್ ಆಗಿದೆ. ಮದುವೆಯಾದ ಎರಡೇ ತಿಂಗಳಿಗೆ ಗಂಡ, ಅತ್ತೆ, ಮಾವ ಸೇರಿ ಗರ್ಭಪಾತ ಮಾಡಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ನವ್ಯಾ ಎಂಬ ಮಹಿಳೆ ಸಂತ್ರಸ್ತ ಮಹಿಳೆಯಾಗಿದ್ದಾರೆ. ಇವರು ಕೆ.ಆರ್.ಪೇಟೆಯ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ. ಕೆ.ಆರ್.ನಗರದ ನಿವಾಸಿ ಮಹದೇವ ತಮ್ಮ ಮಗಳಾದ ನವ್ಯಾರನ್ನು ಎರಡು ತಿಂಗಳ ಹಿಂದೆ ಬರೋಬ್ಬರಿ 80 ಲಕ್ಷ ರೂಪಾಯಿ ಖರ್ಚು ಮಾಡಿ ಬಿಳಿಕೆರೆಯ ನಿವಾಸಿ ಚಿನ್ನದ ವ್ಯಾಪಾರಿ ಗೋವಿಂದರಾಜು ಪುತ್ರ ಅಭಿಷೇಕ್ಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಎರಡು ತಿಂಗಳಲ್ಲೇ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ. ಅಲ್ಲದೇ, ಅಬಾರ್ಷನ್ ಕೂಡ ಮಾಡಿಸಿದ್ದಾರೆ ಎಂಬ ಆರೋಪ ಇದೆ.
ಈ ಬಗ್ಗೆ ಮಹಿಳೆ ವೈದ್ಯೆ ತಂದೆ ಮಹದೇವ್ ಪ್ರತಿಕ್ರಿಯಿಸಿ, ನನ್ನ ಮಗಳಿಗೆ ಅಳಿಯ, ಅತ್ತೆ, ಮಾವ ಸೇರಿ ಅಬಾರ್ಷನ್ ಮಾಡಿಸಿದ್ದಾರೆ. ಮಗಳು ಬಿಎಎಂಎಸ್ ವ್ಯಾಸಂಗ ಮಾಡಿ ವೈದ್ಯೆ ಆಗಿದ್ದಳು. ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದೆವು. ಮಗಳನ್ನು ಒಂದು ದಿನವೂ ಚೆನ್ನಾಗಿ ನೋಡಿಕೊಂಡಿಲ್ಲ. ತಿರುಪತಿಗೆ ಹೋಗೋಣ ಎಂದು ಕರೆದೊಯ್ದು ಗೊತ್ತಾಗದೇ ಗರ್ಭಪಾತ ಮಾಡಿಸಿದ್ದಾರೆ. ಖಾಸಗಿ ಆಸ್ಪತ್ರೆ ವೈದ್ಯೆ ಲತಾ ಎನ್ನುವವರು ಈ ಕೆಲಸ ಮಾಡಿದ್ದಾರೆ. ನನ್ನ ಅಳಿಯನ ವಿರುದ್ಧ ಕಾನೂನು ಕ್ರಮ ಆಗಬೇಕು. ನನ್ನ ಮಗಳಿಗೆ ನ್ಯಾಯ ಸಿಗಬೇಕು ಎಂದು ನವ್ಯಾಳ ತಂದೆ-ತಾಯಿ ಕಣ್ಣೀರಿಟ್ಟಿದ್ದಾರೆ.
ಖಾಸಗಿ ಆಸ್ಪತ್ರೆ ವೈದ್ಯೆ, ಆಸ್ಪತ್ರೆ ಎಂಡಿ ಸೇರಿ 5 ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನವ್ಯಾಳ ಗಂಡ ಅಭಿಷೇಕ್, ಮಾವ ಗೋವಿಂದರಾಜ್, ಅತ್ತೆ ಲತಾ, ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಜ್ಞಾನಶೇಖರ್, ವೈದ್ಯೆ ಲತಾ ಸೇರಿ ಐವರ ಮೇಲೆ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Double Murder Case: ಹೊಳೆನರಸೀಪುರದಲ್ಲಿ ತಂದೆ, ಅಣ್ಣನನ್ನು ಕೊಚ್ಚಿ ಕೊಲೆ ಮಾಡಿದ ಪಾಪಿ