ಹೊನ್ನಾಳಿಯಲ್ಲಿ ಅಕ್ರಮವಾಗಿ ಪೆಟ್ರೋಲ್ ಮಾರಾಟ ಮಾಡುತ್ತಿದ್ದ ಅಂಗಡಿಯಲ್ಲಿ ಬೆಂಕಿ ಅವಘಡ; ಮಾಲೀಕ ಸಜೀವ ದಹನ
Honnali News: ಎಂದಿನಂತೆ ಬೆಳಿಗ್ಗೆ ಅಂಗಡಿ ಬಾಗಿಲು ತೆರೆದು ಪೂಜೆ ಸಲ್ಲಿಸುವ ವೇಳೆ ಬೆಂಕಿ ಅವಘಡ ಸಂಭವಿಸಿದೆ. ದೇವರಿಗೆ ದೀಪ ಹಚ್ಚುತ್ತಿದ್ದಂತೆ ಬೆಂಕಿಯ ಕಿಡಿ ಪಕ್ಕದಲ್ಲೇ ಇರಿಸಿದ್ದ ಪೆಟ್ರೋಲ್ಗೆ ತಗುಲಿ ದುರಂತ ನಡೆದಿದೆ ಎಂದು ತಿಳಿದುಬಂದಿದೆ.
-
ದಾವಣಗೆರೆ: ಅಂಗಡಿಯೊಂದರಲ್ಲಿ ದೀಪ ಹಚ್ಚುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ಮಾಲೀಕ ಸಜೀವ ದಹನಗೊಂಡ ಘಟನೆ ಹೊನ್ನಾಳಿಯ (Honnali) ಕ್ಯಾಸಿನಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಂಕ್ರಯ್ಯ (55) ಮೃತಪಟ್ಟ ದುರ್ದೈವಿ. ಅವರು ಕಿರಾಣಿ ಅಂಗಡಿಯಲ್ಲಿ ದಿನಸಿ ಸಾಮಗ್ರಿಗಳ ಜತೆಗೆ ಅಕ್ರಮವಾಗಿ ಪೆಟ್ರೋಲ್ ಸಹ ಮಾರಾಟ ಮಾಡುತ್ತಿದ್ದರು. ಇದೇ ಅಗ್ನಿ ಅವಘಡಕ್ಕೆ ಕಾರಣ ಎಂದು ತಿಳಿದುಬಂದಿದೆ.
ಎಂದಿನಂತೆ ಬೆಳಿಗ್ಗೆ ಅಂಗಡಿ ಬಾಗಿಲು ತೆರೆದು ಪೂಜೆ ಸಲ್ಲಿಸುವ ವೇಳೆ, ದೀಪ ಹಚ್ಚುತ್ತಿದ್ದಂತೆ ಬೆಂಕಿಯ ಕಿಡಿ ಪಕ್ಕದಲ್ಲೇ ಇರಿಸಿದ್ದ ಪೆಟ್ರೋಲ್ಗೆ ತಗುಲಿದೆ. ಪೆಟ್ರೋಲ್ ಶೇಖರಣೆಯಾಗಿದ್ದರಿಂದ ಬೆಂಕಿ ಕ್ಷಣಮಾತ್ರದಲ್ಲಿ ಅಂಗಡಿಗೆ ವ್ಯಾಪಿಸಿದೆ. ಇದರಿಂದ ಹೊರಬರಲಾಗದೆ ಅವರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಹೊನ್ನಾಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಡ್ಯದಲ್ಲಿ ಮೂರು ಅಂಗಡಿಗಳು ಬೆಂಕಿಗಾಹುತಿ
ಮಂಡ್ಯ: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಮಂಡ್ಯ ಜಿಲ್ಲೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಮೂರು ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆದ ಈ ಘಟನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ದೀಪಾವಳಿ ಸಂಭ್ರಮದ ನಡುವೆ ಪಟಾಕಿ ಅವಘಡ: ಬೆಂಗಳೂರಿನಲ್ಲಿ 44ಕ್ಕೂ ಹೆಚ್ಚು ಜನರಿಗೆ ಗಾಯ
ಅಗ್ನಿಶಾಮಕ ದಳದ ಸಿಬ್ಬಂದಿ ಸಕಾಲದಲ್ಲಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದರಿಂದ ಕಟ್ಟಡದ ಇತರೆ ಅಂಗಡಿಗಳಿಗೆ ಬೆಂಕಿ ಹರಡುವುದು ತಪ್ಪಿದೆ. ಚಿನಕುರಳಿ ಗ್ರಾಮದ ಮಹದೇವ್ ಎಂಬುವವರಿಗೆ ಸೇರಿದ ವಾಣಿಜ್ಯ ಕಟ್ಟಡದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಟ್ಟಡದಲ್ಲಿ ಪಾತ್ರೆ ಅಂಗಡಿ, ಮೆಡಿಕಲ್ ಸ್ಟೋರ್ ಹಾಗೂ ಪ್ರಾವಿಷನ್ ಸ್ಟೋರ್ ಕಾರ್ಯನಿರ್ವಹಿಸುತ್ತಿದ್ದವು.