ಪ್ರಧಾನಿ ನರೇಂದ್ರ ಮೋದಿಗೆ ಬಸವಣ್ಣ ಸ್ಮರಣಿಕೆ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್; ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ
DK Shivakumar: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ (ಜೂನ್ 11) ರಾಷ್ಟ್ರಪತಿ ಭವನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಅಹವಾಲು ಸಲ್ಲಿಸಿ, ಸಮಾಲೋಚನೆ ನಡೆಸಿದರು. ಪ್ರಧಾನಿ ಭೇಟಿಯ ಫೋಟೊಗಳನ್ನು ಡಿಕೆಶಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ -
ದೆಹಲಿ, ಜೂ. 11: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಗುರುವಾರ (ಜೂನ್ 11) ರಾಷ್ಟ್ರಪತಿ ಭವನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿ ಅಹವಾಲು ಸಲ್ಲಿಸಿ, ಸಮಾಲೋಚನೆ ನಡೆಸಿದರು. ಈ ವೇಳೆ ಡಿಕೆಶಿ ಬಸವಣ್ಣನವರ ಸ್ಮರಣಿಕೆಯನ್ನು ಉಡುಗೊರೆಯಾಗಿ ನೀಡಿದರು. ಪ್ರಧಾನಿ ಭೇಟಿಯ ಫೋಟೊಗಳನ್ನು ಡಿಕೆಶಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ʼʼಜತೆಯಾಗಿ ಸದೃಢ ಕರ್ನಾಟಕವನ್ನು ನಿರ್ಮಿಸಿ ಭಾರತಕ್ಕೆ ಉತ್ತಮ ಕೊಡುಗೆ ನೀಡುತ್ತೇವೆʼʼ ಎಂದು ಬರೆದುಕೊಂಡಿದ್ದಾರೆ.
ʼʼಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದೆ. ಕರ್ನಾಟಕದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಜನರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವ ಮೂಲ ಸೌಕರ್ಯ, ಹೂಡಿಕೆ, ನಗರಾಭಿವೃದ್ಧಿ, ನೀರಾವರಿ, ನಾವೀನ್ಯತೆ ಸೇರಿ ಹಲವು ಉಪಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದೇವೆʼʼ ಎಂದಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಎಕ್ಸ್ ಪೋಸ್ಟ್:
Met Hon’ble Prime Minister Shri @narendramodi avaru in New Delhi today for the first time after assuming office as the Chief Minister of Karnataka.
— DK Shivakumar (@DKShivakumar) June 11, 2026
We had a constructive discussion on Karnataka’s development priorities, including infrastructure, investment, urban mobility,… pic.twitter.com/K5fGiygwoO
ʼʼಭಾರತದ ಬೆಳವಣಿಗೆಗೆ ಕರ್ನಾಟಕವು ಯಾವಾಗಲೂ ಉತ್ತಮ ಕೊಡುಗೆ ನೀಡಿದೆ ಮತ್ತು ಆ ಪಾತ್ರವನ್ನು ಮತ್ತಷ್ಟು ಬಲಪಡಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದೇನೆ. ಅಭಿವೃದ್ಧಿಯನ್ನು ವೇಗಗೊಳಿಸಲು, ಹೆಚ್ಚಿನ ಅವಕಾಶಗಳನ್ನು ಆಕರ್ಷಿಸಲು ಮತ್ತು ಕರ್ನಾಟಕದ ಜನರ ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ. ಒಟ್ಟಾಗಿ, ನಾವು ಬಲವಾದ ಕರ್ನಾಟಕವನ್ನು ನಿರ್ಮಿಸುತ್ತೇವೆ ಮತ್ತು ಬಲವಾದ ಭಾರತಕ್ಕೆ ಅರ್ಥಪೂರ್ಣ ಕೊಡುಗೆ ನೀಡುತ್ತೇವೆʼʼ ಎಂದು ಹೇಳಿದ್ದಾರೆ.

ಮಹಿಳಾ ಸಚಿವರೇ ಇಲ್ಲದ ಸಂಪುಟ; ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾದರೂ ಏನು?
ಬಸವಣ್ಣ ಮತ್ತು ಮೋದಿ
12ನೇ ಶತಮಾನದಲ್ಲಿ ತಮ್ಮ ವಚನಗಳ ಮೂಲಕವೇ ಕರ್ನಾಟಕದಲ್ಲಿ ಸಾಮಾಜಿಕ ಕ್ರಾಂತಿ ಉಂಟು ಮಾಡಿದ ಬಸವಣ್ಣ ಎಂದರೆ ಪ್ರಧಾನಿ ಮೋದಿ ಅವರಿಗೆ ವಿಶೇಷ ಗೌರವ. ಹಿಂದೆ ಹಲವು ಬಾರಿ ಅವರು ತಮ್ಮ ಭಾಷಣದಲ್ಲಿ ಬಸವಣ್ಣ, ಬಸವಣ್ಣ ಅವರ ವಚನವನ್ನು ಉಲ್ಲೇಖಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಆಯೋಜಿಸಿದ್ದ ಶ್ರೀರಾಮಚಂದ್ರ ಹಾಗೂ ಸೀತಾ ಮಾತೆಯ ವಿವಾಹ ಪಂಚಮಿಯ ಅಂಗವಾಗಿ ಮೋದಿ ರಾಮ ಮಂದಿರದಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸಿ ವಿಶ್ವಗುರು ಜಗಜ್ಯೋತಿ ಬಸವಣ್ಣನನ್ನು ಸ್ಮರಿಸಿದ್ದರು. ಹೀಗಾಗಿ ಕನ್ನಡ ನಾಡಿನ ಆಸ್ಮಿತೆಯ ಪ್ರತೀಕ ಬಸವಣ್ಣ ಅವರ ಪ್ರತಿಮೆಯನ್ನು ಡಿಕೆಶಿ ಮೋದಿ ಅವರಿಗೆ ನೀಡಿದ್ದಾರೆ.

ವಿತ್ತ ಸಚಿವೆಯನ್ನು ಭೇಟಿಯಾದ ಡಿಕೆಶಿ
ಪ್ರಧಾನಿ ಮೋದಿ ಜತೆಗೆ ಸಿಎಂ ಡಿ.ಕೆ. ಶಿವಕುಮಾರ್ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ ಭೇಟಿಯಾದರು. ದೆಹಲಿಯ ನಿರ್ಮಲಾ ಅವರ ಕಚೇರಿಗೆ ತೆರಳಿ ಅಹವಾಲು ಸಲ್ಲಿಸಿ, ಸಮಾಲೋಚನೆ ನಡೆಸಿದರು.
ಇತಿಹಾಸ ಸೃಷ್ಟಿಸಿದ ಪ್ರಧಾನಿ ನರೇಂದ್ರ ಮೋದಿಗೆ ಕೆವಿನ್ ಪೀಟರ್ಸನ್ ಅಭಿನಂದನೆ
ಕಾಂಗ್ರೆಸ್ ನಾಯಕರ ಭೇಟಿ
ಬುಧವಾರ ದೆಹಲಿಗೆ ತೆರಳಿದ ಡಿಕೆಶಿ ಕಾಂಗ್ರೆಸ್ ವರಿಷ್ಠರ ಜತೆಗೆ ಕೇಂದ್ರ ಸಚಿವರು, ಕರ್ನಾಟಕ ಕೇಡರ್‌ನ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜತೆಗೆ ಎಐಸಿಸಿಯ ವಿವಿಧ ಘಟಕಗಳ ಮುಖ್ಯಸ್ಥರನ್ನು ಕಂಡು ಔಪಚಾರಿಕ ಸಭೆ ನಡೆಸಿದರು. ಸೋನಿಯಾ ಗಾಂಧಿ ಅವರ ನಿವಾಸಕ್ಕೂ ತೆರಳಿದರು.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.