ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Lakkundi gold treasure: ಲಕ್ಕುಂಡಿಯಲ್ಲಿ ನಿಧಿ ಪತ್ತೆ, ನಿಧಿ ಸಿಕ್ಕ ಮನೆಯವರಿಗೆ ಬೀದಿಪಾಲಾಗುವ ಭೀತಿ! ಪ್ರಾಮಾಣಿಕತೆಯೇ ಮುಳುವಾಯ್ತಾ?

ಮನೆ ಪಾಯ ಅಗೆಯುವಾಗ ಚಿನ್ನದ ನಿಧಿ ಪತ್ತೆಯಾಗಿತ್ತು. ಪ್ರಾಮಾಣಿಕತೆ ಮೆರೆದ ಕುಟುಂಬ ನಿಧಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರೂ, ಈಗ ಆ ಕುಟುಂಬಕ್ಕೆ ಭಯ ಮತ್ತು ಆತಂಕ ಶುರುವಾಗಿದೆ. ನಿಧಿ ಸಿಕ್ಕಿದ ಸ್ಥಳವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿರುವ ಕಾರಣ, ಅವರು ಕಟ್ಟುತ್ತಿದ್ದ ಮನೆ ಅರ್ಧಕ್ಕೆ ನಿಂತಿದೆ. ಹೀಗಾಗಿ, ವಾಸಕ್ಕೆ ಮನೆಯಿಲ್ಲದೆ ಕುಟುಂಬ ಬೀದಿಗೆ ಬಂದಂತಾಗಿದೆ.

ಲಕ್ಕುಂಡಿಯಲ್ಲಿ ನಿಧಿ ಪತ್ತೆ, ನಿಧಿ ಸಿಕ್ಕ ಮನೆಯವರಿಗೆ ಬೀದಿಪಾಲಾಗುವ ಭೀತಿ!

ಲಕ್ಕುಂಡಿಯಲ್ಲಿ ನಿಧಿ ಪತ್ತೆ -

ಹರೀಶ್‌ ಕೇರ
ಹರೀಶ್‌ ಕೇರ Jan 11, 2026 3:11 PM

ಗದಗ, ಜ.11: ಜಿಲ್ಲೆಯ (gadag news) ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಚಿನ್ನದ ನಿಧಿ (Lakkundi gold treasure) ಪತ್ತೆಯಾಗಿದ್ದು, ಇದೀಗ ಆ ನಿಧಿಗೆ ಸಂಬಂಧಪಟ್ಟಂತೆ ಹಲವಾರು ಬೆಳವಣಿಗೆಗಳು ನಡೆದಿವೆ. ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇನ್ನಷ್ಟು ಉತ್ಖನನ ನಡೆಯಬೇಕು ಎಂದಿದ್ದಾರೆ. ಆದರೆ ನಿಧಿ ಸಿಕ್ಕ ಜಾಗದಲ್ಲಿರುವ ಮನೆಯವರ ಸ್ಥಿತಿ ಮುಂದೇನು ಎಂಬುದು ಪ್ರಶ್ನೆಯಾಗಿದೆ.

ನಿಧಿ ಸಿಕ್ಕ ಬೆನ್ನಲ್ಲೇ ಕ್ಷಿಪ್ರ ಬೆಳವಣಿಗೆಗಳು ನಡೆದಿವೆ. ಮನೆ ಪಾಯ ಅಗೆಯುವಾಗ ಚಿನ್ನದ ನಿಧಿ ಪತ್ತೆಯಾಗಿತ್ತು. ಪ್ರಾಮಾಣಿಕತೆ ಮೆರೆದ ಕುಟುಂಬ ನಿಧಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರೂ, ಈಗ ಆ ಕುಟುಂಬಕ್ಕೆ ಭಯ ಮತ್ತು ಆತಂಕ ಶುರುವಾಗಿದೆ. ನಿಧಿ ಸಿಕ್ಕಿದ ಸ್ಥಳವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿರುವ ಕಾರಣ, ಅವರು ಕಟ್ಟುತ್ತಿದ್ದ ಮನೆ ಅರ್ಧಕ್ಕೆ ನಿಂತಿದೆ. ಹೀಗಾಗಿ, ವಾಸಕ್ಕೆ ಮನೆಯಿಲ್ಲದೆ ಕುಟುಂಬ ಬೀದಿಗೆ ಬಂದಂತಾಗಿದೆ. ಎಲ್ಲಿ ಬದುಕು ಸಾಗಿಸಬೇಕು ಎಂಬ ಚಿಂತೆಯಲ್ಲಿದೆ. ಮನೆಯ ಯಜಮಾನ ಮೃತಪಟ್ಟಿದ್ದು, ಕುಟುಂಬದಲ್ಲಿ ತಾಯಿ ಮತ್ತು ಚಿಕ್ಕ ಮಗನಿದ್ದಾನೆ. ಈ ಬಡ ಕುಟುಂಬಕ್ಕೆ ಈಗ ಆಸರೆ ಇಲ್ಲದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮನೆಯ ಸದಸ್ಯರು ಮತ್ತು ಗ್ರಾಮಸ್ಥರು ಒಗ್ಗಟ್ಟಾಗಿ ನಿಂತು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸರ್ಕಾರ ಮಾನವೀಯ ದೃಷ್ಟಿಯಿಂದ ಕುಟುಂಬಕ್ಕೆ ಒಂದು ನಿವೇಶನ ಅಥವಾ ಮನೆಯನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕುಟುಂಬದವರು ಚಿನ್ನದ ಆಸೆಯನ್ನು ಬಿಟ್ಟು, ನಮಗೆ ಮನೆ ಬೇಕು ಎಂದು ಕಣ್ಣೀರು ಹಾಕುತ್ತಿದ್ದಾರೆ. “ನಮ್ಮ ಅಣ್ಣನ ಮನೆ ಅಥವಾ ಸಣ್ಣ ಮಾವನ ಮನೆಯಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿದ್ದೇವೆ. ಚಿನ್ನದ ನಿಧಿ ನಮಗೆ ಬೇಡ, ಸರ್ಕಾರ ನಮಗೆ ಬದುಕಲು ಒಂದು ಮನೆ ನೀಡಿದರೆ ಸಾಕು. ಮಗನಿಗೆ ಶಿಕ್ಷಣ ಕೊಡಿಸಿ, ಅವನ ಭವಿಷ್ಯ ರೂಪಿಸಲು ಸಹಾಯ ಮಾಡಿ” ಎಂದು ಬೇಡಿಕೊಂಡಿದ್ದಾರೆ.

ನಿಧಿ ಆಸೆಗಾಗಿ ದತ್ತು ಮಗು ಬಲಿ ಕೊಡಲು ಸಿದ್ಧರಾಗಿದ್ರಾ ಮುಸ್ಲಿಂ ದಂಪತಿ? 8 ತಿಂಗಳ ಕಂದಮ್ಮನ ರಕ್ಷಣೆ

ನಿಧಿ ಸಿಕ್ಕಾಗ ನಾವು ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ಊಹಿಸಿರಲಿಲ್ಲ, ಹೊಲ ಮಾರಿ ಮನೆ ಕಟ್ಟಲು ಆರಂಭಿಸಿದ್ದೇವೆ ಎಂದು ಕುಟುಂಬದ ಹಿರಿಯ ಸದಸ್ಯರೊಬ್ಬರು ನೋವಿನಿಂದ ತಿಳಿಸಿದ್ದಾರೆ. ಚಿನ್ನ ದೊರೆತಿದ್ದರೂ, ಅದು ಇವರಿಗೆ ನೆಮ್ಮದಿ ನೀಡುವ ಬದಲು ಕಷ್ಟ ತಂದಿದೆ. ಹೀಗಾಗಿ, ಸರ್ಕಾರವು ಕೂಡಲೇ ಸ್ಪಂದಿಸಿ ಆ ಕುಟುಂಬಕ್ಕೆ ಸೂಕ್ತ ನೆರವು ನೀಡಬೇಕೆಂದು ಇಡೀ ಲಕ್ಕುಂಡಿ ಗ್ರಾಮಸ್ಥರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.

ಉತ್ಖನನ ಆಗಬೇಕು

ಈ ಪ್ರದೇಶವನ್ನು ಹಿಂದೆ ಚಿನ್ನದ ನಾಣ್ಯಗಳನ್ನು ತಯಾರಿಸುವ ಟಂಕಶಾಲೆ ಎಂದು ಗುರುತಿಸಲಾಗಿದ್ದು,ರಾಜ ಮಹಾರಾಜರ ಅವಶೇಷಗಳು ಮತ್ತು ನೂರಾರು ಬಾವಿಗಳು ಇಲ್ಲಿದ್ದ ಬಗ್ಗೆ ದಾಖಲೆಗಳಿವೆ. ಹೀಗಾಗಿ ನಿಧಿ ಪತ್ತೆಯಾದ ಸ್ಥಳಕ್ಕೆ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜ್ಯ ಸರ್ಕಾರವು ಈ ಪ್ರದೇಶದಲ್ಲಿ ಉತ್ಖನನ ಕಾರ್ಯ ಪ್ರಾರಂಭಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಉತ್ಖನನ ನಡೆಯಲಿದೆ. ಇದರಿಂದ ಗ್ರಾಮದ ಇತಿಹಾಸದ ಕುರಿತು ಇನ್ನಷ್ಟು ಮಹತ್ವದ ಅಂಶಗಳು ಹೊರಬರಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.