ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಕೆ.ವಿ. ಪ್ರಭಾಕರ್

KV Prabhakar: ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ದತ್ತಿ ನಿಧಿ ಕಾರ್ಯಕ್ರಮದ ನೈತಿಕ ಶಕ್ತಿ. ಈ ತಾಯಿಯ ಕಾಳಜಿ, ಸಂಸ್ಕಾರ ಮತ್ತು ಕನವರಿಕೆಗಳನ್ನು ಅಕ್ಷರಕ್ಕೆ ಇಳಿಸುತ್ತಾ ಇವರ ಹೆಸರಿನ ಪ್ರಶಸ್ತಿ ಸ್ವೀಕರಿಸುತ್ತಿರುವ ತನುಜಾ ನಾಯಕ ಅವರ ಆಯ್ಕೆ ಅತ್ಯಂತ ಸೂಕ್ತವಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ.

ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಕೆ.ವಿ. ಪ್ರಭಾಕರ್

ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ದತ್ತಿ ನಿಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. -

Profile
Siddalinga Swamy Feb 26, 2026 10:27 PM

ಗದಗ, ಫೆ. 26: ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.‌ ತಮ್ಮ ಸುಖ ತ್ಯಾಗ ಮಾಡಿದ ತಾಯಿ-ತಂದೆಯರನ್ನು ವೃದ್ಧಾಶ್ರಮ ಕಾಣುವಂತಾಗಿರುವುದು ಬೇಸರದ ಸಂಗತಿ. ಆದರೆ ಬಸವರಾಜ ಹೊರಟ್ಟಿ ತಾಯಿ ಹೆಸರಲ್ಲಿ ಮಾಡುತ್ತಿರುವುದು ಮಾದರಿ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ (KV Prabhakar) ಶ್ಲಾಘಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಿದ್ದ ಅವ್ವ ಸೇವಾ ಟ್ರಸ್ಟ್, ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ದತ್ತಿ ನಿಧಿ ಕಾರ್ಯಕ್ರಮದಲ್ಲಿ ತನುಜಾ ನಾಯಕ ಅವರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಈ ಕಾರ್ಯಕ್ರಮದ ನೈತಿಕ ಶಕ್ತಿ. ಈ ತಾಯಿಯ ಕಾಳಜಿ, ಸಂಸ್ಕಾರ ಮತ್ತು ಕನವರಿಕೆಗಳನ್ನು ಅಕ್ಷರಕ್ಕೆ ಇಳಿಸುತ್ತಾ ಇವರ ಹೆಸರಿನ ಪ್ರಶಸ್ತಿ ಸ್ವೀಕರಿಸುತ್ತಿರುವ ತನುಜಾ ನಾಯಕ ಅವರ ಆಯ್ಕೆ ಅತ್ಯಂತ ಸೂಕ್ತವಾಗಿದೆ ಎಂದರು.

ಶರಣರ ಬಾಳನ್ನು ಮರಣದಲ್ಲಿ ಕಾಣು ಎನ್ನುವ ಮಾತೊಂದಿದೆ. ಶರಣರು ಮರಣ ನಂತರವೂ ಜನ‌ ಮಾನಸದಲ್ಲಿ ಬದುಕುತ್ತಾರೆ. ಇವತ್ತಿನ ಈ ಕಾರ್ಯಕ್ರಮವೇ ಅವ್ವ ಗುರವ್ವ ಅವರ ಸಂಸ್ಕಾರ ಮತ್ತು ಚೈತನ್ಯ ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದು ವಿವರಿಸಿದರು. ಇಂಥಾ ಆದರ್ಶಪ್ರಾಯ ಅವ್ವನವರ ಹೆಸರಿನ ಪ್ರಶಸ್ತಿಗೆ ತನುಜಾ ನಾಯಕ ಅವರನ್ನು ಆಯ್ಕೆ ಮಾಡಿರುವುದು ಹೆಚ್ಚು ಸೂಕ್ತವಾಗಿದೆ. ಮಹಿಳಾ ಸಂವೇದನೆ, ಕೌಟುಂಬಿಕ ಮೌಲ್ಯಗಳು, ಸಾಮಾಜಿಕ ಜಾಗೃತಿ ಮತ್ತು ಜೀವನ ಪ್ರೀತಿಯನ್ನು ಸಾರುವಂತಹ ಲೇಖನಗಳನ್ನು ನಿರಂತರವಾಗಿ ಬರೆಯುತ್ತಿರುವ ತನುಜಾ ನಾಯಕ ಅವರ "ಸಾಮಾಜಿಕ ನೋಟ" ಇವತ್ತಿನ ಕಿರಿಯ ಪತ್ರಕರ್ತರಿಗೆ ಮಾದರಿ ಎಂದರು.

ಗ್ರಾಮೀಣ ಪತ್ರಿಕೋದ್ಯಮ ಅಂದ ಕೂಡಲೇ ನನಗೆ ತಕ್ಷಣ ನೆನಪಾಗುವುದು ಪಿ. ಸಾಯಿನಾಥ್. ಅವರು ಬರೆದಿರುವ "Every body loves good drought" ಎನ್ನುವ ಪುಸ್ತಕ "ಗ್ರಾಮೀಣ ಪತ್ರಿಕೋದ್ಯದ ಬೈಬಲ್" ಎಂದು ಕರೆಯಬಹುದು. ಈ ಪುಸ್ತಕ "ಬರ ಅಂದರೆ ಎಲ್ಲರಿಗೂ ಇಷ್ಟ" ಎಂದು ಕನ್ನಡದಲ್ಲೂ ಬಂದಿದೆ. ನಗರ ಕೇಂದ್ರಿತ ಪತ್ರಿಕೋದ್ಯಮ "ಅಭಿವೃದ್ಧಿ" ಎಂದರೆ ಕೇವಲ ಜಿಡಿಪಿ ಬೆಳವಣಿಗೆ ಅಥವಾ ಷೇರು ಮಾರುಕಟ್ಟೆಯ ಏರಿಳಿತವನ್ನು ಮಾತ್ರ ಅಭಿವೃದ್ಧಿ ಎಂದು ಬಿಂಬಿಸುತ್ತವೆ. ಆದರೆ ನಿಜವಾದ ಅಭಿವೃದ್ಧಿ ಎಂದರೆ ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಿಸುವುದು ಮತ್ತು ಗ್ರಾಮೀಣ ಆರ್ಥಿಕತೆ ಬೆಳವಣಿಗೆಯೇ ನಿಜವಾದ ಅಭಿವೃದ್ಧಿ ಎನ್ನುವುದನ್ನು ನಾವು ಮರೆಯಬಾರದು ಎಂದು ಹೇಳಿದರು.‌

ಕೇಂದ್ರ ಸರ್ಕಾರ ನೋಟು ನಿಷೇಧ ಜಾರಿಗೆ ತಂದಾಗ ನಗರ ಕೇಂದ್ರಿತ ಆರ್ಥಿಕತೆ, ದುಡಿಮೆ ಎಲ್ಲ ನೆಲಕಚ್ಚಿತು. ಆದರೆ ಇಡೀ ದೇಶದ ಆರ್ಥಿಕತೆ ಪೂರ್ತಿ ನೆಲ ಕಚ್ಚದಂತೆ ಕಾಪಾಡಿದ್ದು ನಮ್ಮ ಗ್ರಾಮೀಣ ಆರ್ಥಿಕತೆ. ಸಾಸಿವೆ ಡಬ್ಬಿ, ಎಲೆ ಅಡಿಕೆ ಚೀಲದಲ್ಲಿ ಗ್ರಾಮೀಣ ಮಹಿಳೆಯರು ಕಾಪಿಡುವ, ಉಳಿತಾಯ ಮಾಡುವ ಹಣ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕುಟುಂಬಗಳ ಬದುಕಿಗೆ ಆಸರೆ ಆಗಿದ್ದನ್ನು ನಾವು ನೆನಪಿಸಿಕೊಳ್ಳಬೇಕು ಎಂದರು.

ಭಾರತದ ಗ್ರಾಮೀಣಾಭಿವೃದ್ಧಿಗೆ ಪತ್ರಿಕೋದ್ಯಮ ಸೇತುವೆಯಾಗಿ ಕೆಲಸ ಮಾಡಬೇಕಿದೆ

ಹೀಗಾಗಿ ಭಾರತದ ಗ್ರಾಮೀಣಾಭಿವೃದ್ಧಿಗೆ ಪತ್ರಿಕೋದ್ಯಮ ಸೇತುವೆಯಾಗಿ ಕೆಲಸ ಮಾಡಬೇಕಿದೆ. ಪತ್ರಿಕೋದ್ಯಮವು ಮೇಲ್ಮಟ್ಟದ ಆರ್ಥಿಕ ಪ್ರಗತಿಗಿಂತ ಹೆಚ್ಚಾಗಿ, ಹಳ್ಳಿಗಳ ಜನರ ಆರೋಗ್ಯ, ಶಿಕ್ಷಣ ಮತ್ತು ಕುಡಿಯುವ ನೀರಿನ ಲಭ್ಯತೆಯ ಬಗ್ಗೆ ಗಮನ ಹರಿಸಬೇಕಿದೆ ಎಂದರು.

ಮುಖ್ಯಮಂತ್ರಿ ಯಾವುದೇ ಜಿಲ್ಲೆಯ KDP ಸಭೆಗಳನ್ನು ನಡೆಸುವಾಗ ಆಯಾ ಜಿಲ್ಲೆಗಳ ಗ್ರಾಮೀಣ ಬದುಕಿನ ಬಗ್ಗೆ ಪತ್ರಿಕೆಗಳಲ್ಲಿ ಬಂದಿರುವ ವರದಿಗಳನ್ನು ಮೊದಲು ಗಮನಿಸುತ್ತಾರೆ. ಇಂಥಾ ಪತ್ರಿಕೆಯಲ್ಲಿ, ಇಂಥಾ ದಿನ, ಇಂಥಾ ವರದಿ ಬಂದಿದೆ ಎಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಳ್ಳುವುದನ್ನು ನೀವೂ ಗಮನಿಸಿರ್ತೀರಿ. ಕಲುಷಿತ ನೀರು ಕುಡಿದು ಸಾವನ್ನಪ್ಪಿದ ವರದಿಗಳು ಸರ್ಕಾರವನ್ನು ಎಚ್ಚರಿಸಿವೆ. ಬೆಳೆ ರೋಗದ ಬಗ್ಗೆ ಬಂದ ವರದಿಗಳು ಸಾವಿರಾರು ರೈತ ಕುಟುಂಬಗಳಿಗೆ ಪರಿಹಾರ ಒದಗಿಸಲು ನೆರವಾಗಿವೆ. ಹಾಗೆಯೇ ಬರ ಮತ್ತು ಅತಿವೃಷ್ಟಿ ಸಂದರ್ಭದ ವರದಿಗಳು ವಿಧಾನಸೌಧದಲ್ಲಿ ತುರ್ತು ಸಭೆಗಳನ್ನು ನಡೆಸಲು, ತುರ್ತು ಪರಿಹಾರ ಒದಗಿಸಲು ವೇಗವರ್ದಕಗಳಾಗಿ ನೆರವಾಗಿವೆ ಎಂದರು.

ಈ ಬಾರಿ ಬಜೆಟ್‌ನಲ್ಲಿ ಪತ್ರಕರ್ತ ಸಮುದಾಯಕ್ಕೆ ಸಿಹಿ ಸುದ್ದಿ ಇರುತ್ತೆ: ಕೆ.ವಿ. ಪ್ರಭಾಕರ್

ಹೀಗಾಗಿ ಪತ್ರಕರ್ತರು, ಪತ್ರಿಕೋದ್ಯಮದ ವಿದ್ಯಾರ್ಥಿಗಳು ಹಳ್ಳಿಗಳಿಗೆ ಹೋಗಿ ಜನರ ಸಂಕಷ್ಟಗಳನ್ನು ಆಲಿಸುವುದು, ಸ್ಟುಡಿಯೋಗಳಲ್ಲಿ ಕುಳಿತು ಚರ್ಚೆ ಮಾಡುವುದಕ್ಕಿಂತ ಹಚ್ಚು ಉಪಯುಕ್ತವಾದುದು ಎನ್ನುವುದನ್ನು ಅರಿಯಬೇಕಿದೆ ಎಂದು ತಿಳಿಸಿದರು. ಸಭಾಪತಿ ಬಸವರಾಜ ಹೊರಟ್ಟಿ, ದತ್ತಿ ನಿಧಿ ಪ್ರಶಸ್ತಿ ಪುರಸ್ಕೃತ ತನುಜಾ ನಾಯಕ ಸೇರಿ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮತ್ತು ವಿವಿಯ ಕುಲಸಚಿವ ಸುರೇಶ್ ನಾಡಗೌಡ ಮತ್ತಿತರರು ಉಪಸ್ಥಿತರಿದ್ದರು.