ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಾಸನದಲ್ಲಿ ಗ್ರಾಹಕರ 3 ಕೋಟಿಗೂ ಹೆಚ್ಚು ಹಣದೊಂದಿಗೆ ಬ್ಯಾಂಕ್‌ ಮ್ಯಾನೇಜರ್‌ ಎಸ್ಕೇಪ್‌; ಸಾಲದ ಹೆಸರಲ್ಲಿ ವಂಚನೆ!

Hassan Bank Fraud Case: ಬ್ಯಾಂಕ್​​ನಲ್ಲಿ ಎಫ್‌ಡಿ ಇಟ್ಟರೆ 25 ಲಕ್ಷದಿಂದ 1 ಕೋಟಿವರೆಗೂ ಸಾಲ ಕೊಡಿಸುವ ಆಮಿಷವನ್ನು ಗ್ರಾಹಕರಿಗೆ ಲೇಡಿ ಬ್ಯಾಂಕ್​ ಮ್ಯಾನೇಜರ್ ಒಡ್ಡಿದ್ದಳು. ಅವರ ಮಾತು ನಂಬಿ ಬ್ಯಾಂಕ್‌ನಲ್ಲಿ ಜನ ಹಣ ಇಟ್ಟಿದ್ದಾರೆ. ಆದರೆ, ಎಫ್​ಡಿ ಮಾಡಿರುವ ಹಣಕ್ಕೆ ಯಾವುದೇ ದಾಖಲೆಯನ್ನು ಮ್ಯಾನೇಜರ್​​ ನೀಡಿಲ್ಲ ಎನ್ನಲಾಗಿದೆ. ಗ್ರಾಹಕರಿಂದ ಸಂಗ್ರಹಿಸಿದ ಹಣದೊಂದಿಗೆ ಬ್ಯಾಂಕ್‌ ಮ್ಯಾನೇಜರ್‌ ಎಸ್ಕೇಪ್‌ ಆಗಿದ್ದಾಳೆ.

ಗ್ರಾಹಕರ 3 ಕೋಟಿಗೂ ಹೆಚ್ಚು ಹಣದೊಂದಿಗೆ ಬ್ಯಾಂಕ್‌ ಮ್ಯಾನೇಜರ್‌ ಎಸ್ಕೇಪ್‌

ಹಣ ಪಡೆದು ಪರಾರಿಯಾಗಿರುವ ಹಾಸನದ ಖಾಸಗಿ ಬ್ಯಾಂಕ್‌ ಮ್ಯಾನೇಜರ್‌ ಎಚ್​​.ಎಸ್​.ಪೂಜಾ. -

Prabhakara R
Prabhakara R Feb 28, 2026 5:41 PM

ಹಾಸನ: ಸಾಲ‌ ಕೊಡಿಸುವುದಾಗಿ ಹೇಳಿ 50ಕ್ಕೂ ಹೆಚ್ಚು ಗ್ರಾಹಕರಿಂದ 3 ಕೋಟಿಗೂ ಹೆಚ್ಚು ಹಣ ಪಡೆದು ಖಾಸಗಿ ಬ್ಯಾಂಕ್‌ನ ಮ್ಯಾನೇಜರ್ ನಾಪತ್ತೆಯಾಗಿರುವ ಘಟನೆ (Hassan Bank Fraud Case) ಹಾಸನದಲ್ಲಿ ನಡೆದಿದೆ. ಸೂರ್ಯೋದಯ ಸ್ಮಾಲ್ ಫೈನಾನ್ಸ್​​​ ಬ್ಯಾಂಕ್​ ಮ್ಯಾನೇಜರ್‌ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.

ಬ್ಯಾಂಕ್​ ಮ್ಯಾನೇಜರ್ ಎಚ್​​.ಎಸ್​.ಪೂಜಾ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾಗೆ ಗ್ರಾಹಕರು ದೂರು ನೀಡಿದ್ದಾರೆ. ಎಫ್​ಡಿ ಇಡುವಂತೆ ಹೇಳಿ ಕೋಟ್ಯಂತರ ಹಣ ಸಮೇತ ಮ್ಯಾನೇಜರ್​​ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಬ್ಯಾಂಕ್​​ನಲ್ಲಿ ಎಫ್‌ಡಿ ಇಟ್ಟರೆ 25 ಲಕ್ಷದಿಂದ 1 ಕೋಟಿವರೆಗೂ ಸಾಲ ಕೊಡಿಸುವ ಆಮಿಷವನ್ನು ಗ್ರಾಹಕರಿಗೆ ಬ್ಯಾಂಕ್​ ಮ್ಯಾನೇಜರ್ ಎಚ್​​.ಎಸ್​.ಪೂಜಾ ಒಡ್ಡಿದ್ದರು. ಜತೆಗೆ 25 ಲಕ್ಷ ಲೋನ್​ಗೆ 10 ಲಕ್ಷ ಸಬ್ಸಿಡಿ ಎಂದು ನಂಬಿಸಿ ಜನರಿಂದ ಹಣ ಸಂಗ್ರಹ ಮಾಡಿದ್ದರು. ಇವರ ಮಾತು ನಂಬಿ ಬ್ಯಾಂಕ್‌ನಲ್ಲಿ ಜನ ಹಣ ಇಟ್ಟಿದ್ದಾರೆ. ಆದರೆ, ಎಫ್​ಡಿ ಮಾಡಿರುವ ಹಣಕ್ಕೆ ಯಾವುದೇ ದಾಖಲೆಯನ್ನು ಮ್ಯಾನೇಜರ್​​ ನೀಡಿಲ್ಲ ಎನ್ನಲಾಗಿದೆ. ಗ್ರಾಹಕರು ಹಣ ವಾಪಸ್ ಕೇಳಿದ್ದಕ್ಕೆ ಕೆಲವರಿಗೆ ಚೆಕ್ ನೀಡಿ ಪೂಜಾ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಹಾಸನದ ಪೆನ್ಷನ್ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಒಂದೇ ಕುಟುಂಬದ ಮೂವರ ಆತ್ಮಹತ್ಯೆ: ಕ್ರೆಡಿಟ್ ಕಾರ್ಡ್ ವಂಚನೆ, ಮಾನಸಿಕ ಕಿರುಕುಳ ನೀಡಿದ್ದ ಆರೋಪಿ ಬಂಧನ!

ಇನ್ನು ಹಣ ಸಂಗ್ರಹದ ಬಳಿಕ ಆರೋಪಿ ಎಚ್​​.ಎಸ್​.ಪೂಜಾ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ದುಬೈಗೆ ಹಾರಲು ಅವರು ವಿಮಾನ ನಿಲ್ದಾಣದಲ್ಲಿ ಓಡಾಡುತ್ತಿರುವ ಮಾಹಿತಿ ಇದ್ದು, ಅವರು ಪರಾರಿಯಾಗಲು ಯಾವುದೇ ಕಾರಣಕ್ಕೂ ಬಿಡಬಾರದು. ಅವರ ಪಾಸ್​​ಪೋರ್ಟ್​​ ರದ್ದು ಮಾಡಿ ವಿದೇಶ ಪ್ರಯಾಣವನ್ನು ತಡೆಯಬೇಕು. ಗ್ರಾಹಕರನ್ನು ವಂಚಿಸಿರುವ ಆಕೆಯನ್ನು ಬಂಧಿಸಿ, ತಮಗೆ ನ್ಯಾಯ ಕೊಡಿಸಬೇಕು ಎಂದು ಪೊಲೀಸರಿಗೆ ಸೂರ್ಯೋದಯ ಸ್ಮಾಲ್ ಫೈನಾನ್ಸ್​​​ ಬ್ಯಾಂಕ್​​ ಗ್ರಾಹಕರು ಮನವಿ ಮಾಡಿದ್ದಾರೆ.