MLA HD Revanna: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಚ್.ಡಿ.ರೇವಣ್ಣಗೆ ಬಿಗ್ ರಿಲೀಫ್; ಕೇಸ್ ಕೈಬಿಟ್ಟ ಕೋರ್ಟ್
ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮನೆಕೆಲಸದಾಕೆ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ, ಇದೀಗ ರೇವಣ್ಣರನ್ನು ಕೋರ್ಟ್ ಖುಲಾಸೆಗೊಳಿಸಿದೆ.
ಮಾಜಿ ಸಚಿವ ಎಚ್.ಡಿ.ರೇವಣ್ಣ (ಸಂಗ್ರಹ ಚಿತ್ರ) -
ಬೆಂಗಳೂರು, ಡಿ.29: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣಗೆ (MLA HD Revanna) ಬಿಗ್ ರಿಲೀಫ್ ಸಿಕ್ಕಿದೆ. ವಿಳಂಬವಾಗಿ ದೂರು ದಾಖಲಿಸಲಾಗಿದೆ ಎಂದು ಪ್ರಕರಣವನ್ನು 42ನೇ ಎಸಿಜೆಎಂ ಕೋರ್ಟ್ ರದ್ದುಪಡಿಸಿದೆ. ಇದರಿಂದ ರೇವಣ್ಣ ಆರೋಪ ಮುಕ್ತವಾಗಿದ್ದಾರೆ.
ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮನೆಕೆಲಸದಾಕೆ ನೀಡಿದ ದೂರಿನ ಮೇರೆಗೆ ಹಾಸನ ಜಿಲ್ಲೆಯ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಎಚ್.ಡಿ. ರೇವಣ್ಣ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಪ್ರಕರಣ ವಿಚಾರಣೆ ನಡೆಸಿ, ಎಚ್.ಡಿ. ರೇವಣ್ಣರನ್ನು ಖುಲಾಸೆಗೊಳಿಸಿದೆ.
ಏನಿದು ಪ್ರಕರಣ?
ಮನೆಗೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ ಹಾಗೂ ಅವರ ಪುತ್ರ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ 2024ರ ಏ.28ರಂದು ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆಯ ದೂರು ಆಧರಿಸಿ ಐಪಿಸಿ ಸೆಕ್ಷನ್ ಪ್ರಕರಣ 354A, 354D, 506, 509ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ರೇವಣ್ಣ ಮೊದಲನೇ ಆರೋಪಿ ಹಾಗೂ ಪ್ರಜ್ವಲ್‌ನ ಎರಡನೇ ಆರೋಪಿಯನ್ನಾಗಿ ಹೆಸರಿಸಲಾಗಿತ್ತು.
ರೇವಣ್ಣ ಅವರು, ತಮ್ಮ ಪತ್ನಿ ಭವಾನಿಯವರು ಮನೆಯಲ್ಲಿ ಇಲ್ಲದಿದ್ದ ವೇಳೆ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಅಲ್ಲದೆ ತಮ್ಮ ಮಗಳಿಗೂ ಕಿರುಕುಳ ನೀಡಿದ್ದರು. ಇದರಿಂದ ತಾನು ಕೆಲಸ ತೊರೆದಿದ್ದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದರು.
ಮಾಜಿ ಸಚಿವ ಹೆಚ್‌ಎಂ ರೇವಣ್ಣ ಪುತ್ರನ ಕಾರು ಡಿಕ್ಕಿ, ಬೈಕ್ ಸವಾರ ಸಾವು
ಬಳಿಕ ಎಸ್‌ಐಟಿ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿದ್ದರು. ಆದರೆ, ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ರೇವಣ್ಣ ಕೋರ್ಟ್ ಮೆಟ್ಟಿಲೇರಿದ್ದರು. ವಾದ – ಪ್ರತಿವಾದ ಆಲಿಸಿದ್ದ ಕೋರ್ಟ್, ವಿಳಂಬವಾಗಿ ದೂರು ದಾಖಲಿಸಲಾಗಿದೆ. ಜತೆಗೆ ಪ್ರಕರಣದ ವಿಚಾರಣೆಯೂ ಕೂಡ ತಡವಾಗಿದೆ ಎಂಬ ಕಾರಣ ನೀಡಿ ರೇವಣ್ಣರನ್ನು ಪ್ರಕರಣದಿಂದ ಕೈಬಿಟ್ಟಿದೆ.