ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗೃಹಲಕ್ಷ್ಮಿ ಯೋಜನೆಯ 5000 ಕೋಟಿ ರೂ. ಎಲ್ಲಿ ಹೋಯ್ತು?; ಸಿಎಂಗೆ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ

HD Kumaraswamy: ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಕೊಡಬೇಕಿದ್ದ ಗೃಹಲಕ್ಷ್ಮಿ‌ ಹಣ ಎಲ್ಲಿ ಹೋಗಿದೆ? ಆ ಹಣ ಖಜಾನೆಯಲ್ಲಿ ಇದೆಯಾ? ಇಲ್ಲವಾ? ಎನ್ನುವ ಅಂಶವನ್ನು ಸ್ವತಃ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಬೇಕು. ಅವರು ಮತ್ತು ಅವರ ಇಲಾಖೆಯ ಅಧಿಕಾರಿಗಳೇ ಇದಕ್ಕೆ ಜವಾಬ್ದಾರರು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ 5000 ಕೋಟಿ ರೂ. ಎಲ್ಲಿ ಹೋಯ್ತು?: ಎಚ್‌ಡಿಕೆ ಪ್ರಶ್ನೆ

ಎಚ್‌.ಡಿ.‌ ಕುಮಾರಸ್ವಾಮಿ (ಸಂಗ್ರಹ ಚಿತ್ರ) -

Profile
Siddalinga Swamy Dec 22, 2025 7:02 PM

ಹಾಸನ, ಡಿ.22: ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಬೇಕಿದ್ದ ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಎಲ್ಲಿಗೆ ಹೋಯಿತು? ಅದರ ಬಗ್ಗೆ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದರು. ಹಾಸನದಲ್ಲಿ ಭಾನುವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಕೊಡಬೇಕಿದ್ದ ಗೃಹಲಕ್ಷ್ಮಿ‌ ಹಣ ಎಲ್ಲಿ ಹೋಗಿದೆ? ಆ ಹಣ ಖಜಾನೆಯಲ್ಲಿ ಇದೆಯಾ? ಇಲ್ಲವಾ? ಎನ್ನುವ ಅಂಶವನ್ನು ಸ್ವತಃ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರೇ ಹೇಳಬೇಕು. ಅವರು ಮತ್ತು ಅವರ ಇಲಾಖೆಯ ಅಧಿಕಾರಿಗಳೇ ಇದಕ್ಕೆ ಜವಾಬ್ದಾರರು ಎಂದು ಆರೋಪಿಸಿದರು.

ಗೃಹಲಕ್ಷ್ಮಿ ಯೋಜನೆಯ 5 ಸಾವಿರ ಕೋಟಿ ಹಣದ ಬಗ್ಗೆ ಮಾಹಿತಿ ಸರಿಯಾಗಿ ನೀಡಿಲ್ಲ. ಇದು ಸಣ್ಣ ವಿಚಾರವಲ್ಲ. ಇದು ಹೇಗಾಯಿತು ಎಂದು ಸಂಬಂಧಿತ ಸಚಿವರಿಂದ ಮಾಹಿತಿ ಪಡೆದಿದ್ದೀರಾ? ಆ ಸಚಿವರ ರಾಜೀನಾಮೆ ಕೇಳಿದ್ದೀರಾ? ಹೋಗಲಿ, ಯಾರಾದರೂ ಅಧಿಕಾರಿಯನ್ನು ಇದಕ್ಕೆ ಹೊಣೆ ಮಾಡಿ ಅಮಾನತು ಮಾಡಿದ್ದೀರಾ? ಇಷ್ಟು ದೊಡ್ಡ ಮೊತ್ತದ ಹಣದ ಬಗ್ಗೆ ಎಷ್ಟು ಹಗುರವಾಗಿ ನಡೆದುಕೊಂಡಿದ್ದೀರಿ! ನೀವು ಪ್ರಖ್ಯಾತ ‌ಹಣಕಾಸು ಸಚಿವರು! ನಿಮ್ಮಂತ ಹಣಕಾಸು ಸಚಿವರು ಅಮೆರಿಕದಲ್ಲೂ ಇಲ್ಲ‌. ಡೊನಾಲ್ಡ್ ಟ್ರಂಪ್ ಅವರಿಗೂ ಇಂಥ ಹಣಕಾಸು ಮಂತ್ರಿ ಸಿಗಲ್ಲವೇನೋ ಎಂದು ಎಚ್‌.ಡಿ. ಕುಮಾರಸ್ವಾಮಿ ಲೇವಡಿ ಮಾಡಿದರು.

ಭಾರತದ ಕಾಫಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ ವಿದೇಶಗಳಿಂದ ಮುಕ್ತ ವ್ಯಾಪಾರ ಒಪ್ಪಂದ: ಜೋಶಿ

ಕೇಂದ್ರ ಸಹಕಾರ ನೀಡುತ್ತಿಲ್ಲ ಎನ್ನುವುದು ಸುಳ್ಳು

ಕೇಂದ್ರ ಸಹಕಾರ ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರ ಹೇಳುವ ಬದಲು, ಕೇಂದ್ರದ ಮನವೊಲಿಸಲು ನೀವೇನು ಮಾಡಿದ್ದೀರಿ ಎಂಬುದನ್ನು ಹೇಳಿ ಎಂದು ಅವರು ಖಾರವಾಗಿ ಪ್ರಶ್ನಿಸಿದರು. ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವವರು ಸುಖಾಸುಮ್ಮನೆ ತಮ್ಮ ಹುಳುಕು ಮುಚ್ಚಿಟ್ಟುಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ತಾವು ಮಾಡುತ್ತಿರುವ ತಪ್ಪುಗಳನ್ನು ಮುಚ್ಚಿಡುತ್ತಿದ್ದಾರೆ ಎಂದು ಟೀಕಿಸಿದರು.

ಎತ್ತಿನಹೊಳೆ ಯೋಜನೆಯಲ್ಲಿ ಕೇಂದ್ರ ಸರ್ಕಾರ ಅಡ್ಡಿ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಮಂತ್ರಿಗಳು ಆರೋಪ ಮಾಡುತ್ತಿದ್ದಾರೆ. ಆದರೆ, ಪರಿಸರಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿ, ಕಾನೂನು ಮೀರಿ ಅನೇಕ ಅನಧಿಕೃತ ಕಾಮಗಾರಿಗಳನ್ನು ನಡೆಸಿದ್ದಾರೆ. ಕೇಂದ್ರ ಪರಿಸರ ಸಚಿವಾಲಯ ಅದನ್ನು ಪ್ರಶ್ನೆ ಮಾಡಿದೆ. ಅದು ತಪ್ಪಾ? ನಾವು ಅಂತಹ ಕಾಮಗಾರಿಗಳನ್ನು ಮಾಡಿಲ್ಲ ಎಂದು ಸಂಬಂಧಿಸಿದ ಸಚಿವರು, ಅಧಿಕಾರಿಗಳು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಿ. ಬೇಡ ಎಂದವರು ಯಾರು? ಎಂದು ಅವರು ಹೇಳಿದರು.

ಕೇಂದ್ರದಿಂದ ಅನುದಾನ ಬರುತ್ತಿದೆ. ಅದರ ಬಳಕೆ ಮಾಡುವಲ್ಲಿ ರಾಜ್ಯ ಸರ್ಕಾರ ಪಾರದರ್ಶಕವಾಗಿಲ್ಲ. ಕೇಂದ್ರದಿಂದ ಬರುತ್ತಿರುವ ಅನುದಾನವನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ ಹಾಗೂ ಅದಕ್ಕೆ ಪೂರಕವಾಗಿ ಮ್ಯಾಚಿಂಗ್ ಗ್ರಾಂಟ್‌ಗಳನ್ನು ಕೊಡುತ್ತಿಲ್ಲ. ಹೋಗಲಿ, ಆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ನೀಡಿದ್ದಾರಾ? ಅದೂ ಇಲ್ಲ. ತಪ್ಪು ತಮ್ಮ ಕಡೆ ಇಟ್ಟುಕೊಂಡು ನರೇಂದ್ರ ಮೋದಿ ಅವರ ಸರ್ಕಾರವನ್ನು ಟೀಕೆ ಮಾಡಿದರೆ ಏನು ಬರುತ್ತದೆ ಎಂದು ಅವರು ವಾಗ್ದಾಳಿ ನಡೆಸಿದರು.

ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಘೋರ ವೈಫಲ್ಯ ಅನುಭವಿಸಿದೆ. ರೈತರಿಗೆ ನೆರವಾಗುವಲ್ಲಿ ಕೂಡ ವಿಫಲವಾಗಿದೆ. ಬೆಂಗಳೂರು ನಗರದಲ್ಲಿ ಮೂಲಭೂತ ಸೌಲಭ್ಯಗಳ ಬಗ್ಗೆ ಹೇಳುವಂತೆಯೇ ಇಲ್ಲ. ದೇವರಿಗೆ ಪ್ರೀತಿ ಎಂದು ವ್ಯಂಗ್ಯವಾಡಿದರು.

ಇವರ ಹಣೆಬರಕ್ಕೆ ಕೆಲಸ ಮಾಡುವ ಯೋಗ್ಯತೆ ಇಲ್ಲ. ಆದರೆ ಮಾತಿನಲ್ಲಿ ಎಲ್ಲವನ್ನು ತೋರಿಸುತ್ತಿದ್ದಾರೆ. ಹಾಸನ ಜಿಲ್ಲೆಗೆ ಲಗ್ಗೆ ಹಾಕಲು ಕಾಂಗ್ರೆಸ್ ಬಹಳ ವೇಗವಾಗಿದೆ. ಸ್ಟೇಜ್‌ಗಳಲ್ಲಿ ಹಲವು ರೀತಿಯ ಬಾಣ ಬಿರುಸುಗಳನ್ನ ನೋಡುತ್ತಿದ್ದೇವೆ. ಯಾರು ಮಾಡದೇ ಇರುವ ಕಾರ್ಯ ಮಾಡಿದ್ದೇವೆ ಎಂಬ ಹೇಳಿಕೆ ನೀಡಿದ್ದಾರೆ. ಫಲಾನುಭವಿಗಳಿಗೆ ಎಲ್ಲವನ್ನೂ ನೀಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ನಾನು ಇಡ್ಲಿ, ವಡೆ ನಾಟಿ ಕೋಳಿ ತಿಂದಿದ್ದರ ಬಗ್ಗೆ ಮಾತಾಡೊಲ್ಲ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಕೇಂದ್ರ ಸಚಿವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಚಾಟಿ ಬೀಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ನನಗೆ ಬೇಕಾಗಿಲ್ಲ. ರಾಜ್ಯದ ಜನ ಅವರಿಗೆ 140 ಸೀಟು ನೀಡಿದ್ದಾರೆ. ಇಂತಹ ಬಹುಮತದ ಸರ್ಕಾರ ಇಟ್ಟುಕೊಂಡು ಜನರ ಕೆಲಸ ಮಾಡುವುದು ಬಿಟ್ಟು ಕೇಂದ್ರ ಸರ್ಕಾರದ ಮೇಲೆ ಬಿದ್ದಿದ್ದಾರೆ. ಜನರ ಗಮನ ಬೇರೆಡೆಗೆ ಹೊರಳಿಸಲು ಈ ಸ್ಟಂಟ್ ಮಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ರೈತರ ಪರಿಸ್ಥಿತಿ ದಾರುಣವಾಗಿದೆ. ರಾಜ್ಯದಲ್ಲಿ ಈ ಸರ್ಕಾರ ಬಂದ ಮೇಲೆ 2800ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡರು ಮೂಲಭೂತ ಸೌಕರ್ಯಕ್ಕೆ ₹300 ಕೋಟಿ ಕೊಡುತ್ತೇವೆ ಎನ್ನುತ್ತಾರೆ. ಇಷ್ಟು ಹಣ ಸಾಕಾ? ಪ್ರವಾಹದಿಂದ ಆಗಿರುವ ಆಗಿರುವ ಹಾನಿಯ ಬಗ್ಗೆ ಇವರು ಹೇಳಿದ್ದು ಎಷ್ಟು? ಅದಕ್ಕೆ ರಾಜ್ಯ ಸರ್ಕಾರ ಕೊಡುತ್ತೇವೆ ಎಂದಿದ್ದು ಎಷ್ಟು? ವೇದಿಕೆ ಮೇಲೆ ಪೊಳ್ಳು ಹೇಳಿಕೆ ಕೊಟ್ಟುಕೊಂಡು ಎಷ್ಟು ದಿನ ಕೊಡ್ತೀರಿ ಎಂದು ಹೇಳಿದರು.

ಆಲಮಟ್ಟಿ-ಕುಷ್ಟಗಿ ನೂತನ ರೈಲು ಮಾರ್ಗಕ್ಕೆ ಶೀಘ್ರ ಡಿಪಿಆರ್: ಪ್ರಲ್ಹಾದ್‌ ಜೋಶಿ

ರಾಜಣ್ಣ ಅವರು ಸಹಕಾರ ಸಚಿವರಾಗಿದ್ದಾಗ ರೈತರಿಗೆ 24 ಸಾವಿರ ಕೋಟಿ ಸಾಲ ಕೊಡ್ತೇವೆ ಎಂದು ಹೇಳಿದ್ದರು. ಈಗ 12 ಸಾವಿರ ಕೋಟಿ ಕೊಟ್ಟಿದ್ದೇವೆ ಎನ್ನುತ್ತಾರೆ. ಆ ಹಣವನ್ನು ಕೂಡ ರೈತರಿಗೆ ನೀಡಿಲ್ಲ. ಅದೆಲ್ಲಾ ಒಳ ವ್ಯವಹಾರ ಎಂಬುದು ಗೊತ್ತಿದೆ ಎಂದು ಆರೋಪಿಸಿದ ಅವರು, ನಾನು ಮುಖ್ಯಮಂತ್ರಿ ಆಗಿ ರೈತರ ಸಾಲ‌ ಮನ್ನಾ ಮಾಡಿದ್ದೇನೆ. ಅದರಿಂದಾಗಿ 12 ಬ್ಯಾಂಕ್‌ಗಳು ಉಳಿದುಕೊಂಡವು. ಈ ಬಗ್ಗೆ ಶ್ವೇತ ಪತ್ರ ಹೊರಡಿಸಲಿ‌ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಸವಾಲು ಹಾಕಿದರು. ಈ ವೇಳೆ ಶಾಸಕರಾದ ಸಿ.ಎನ್. ಬಾಲಕೃಷ್ಣ, ಸ್ವರೂಪ್ ಪ್ರಕಾಶ್, ಮಾಜಿ ಶಾಸಕ ಲಿಂಗೇಶ್ ಸೇರಿದಂತೆ ಜಿಲ್ಲೆಯ ಹಲವಾರು ಮುಖಂಡರು ಹಾಜರಿದ್ದರು.