ಹಾವೇರಿಯಲ್ಲಿ ಸಾಲ ವಸೂಲಿ ಹೆಸರಲ್ಲಿ ಬಡಜನರಿಗೆ ಕಿರುಕುಳ; ಫೈನಾನ್ಸ್ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಆಗ್ರಹ
Haveri News: ಖಾಸಗಿ ಫೈನಾನ್ಸ್ ಸಂಸ್ಥೆಗಳ ಸಾಲ ವಸೂಲಾತಿ ವಿಧಾನಗಳ ಕುರಿತು ಹಾವೇರಿ ಜಿಲ್ಲಾಡಳಿತ ಸಮಗ್ರ ಪರಿಶೀಲನೆ ನಡೆಸಬೇಕು. ಜಿಲ್ಲೆಯಲ್ಲಿರುವ ಹಣಕಾಸು ಸಂಸ್ಥೆಗಳು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
-
| ಪರಶುರಾಮ ಎಸ್.ಡಿ, ಹಾವೇರಿ
ಬಡವರು, ಕೂಲಿಕಾರರು, ಸಣ್ಣ ವ್ಯಾಪಾರಿಗಳು, ಆಟೋ ಚಾಲಕರು ಸೇರಿದಂತೆ ದುಡಿದು ಬದುಕುವ ಜನರಿಗೆ ಆರ್ಥಿಕ ನೆರವು ನೀಡಬೇಕಾದ ಖಾಸಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳೇ (Microfinance Companies) ಸಾಲ ವಸೂಲಿಯ ಹೆಸರಿನಲ್ಲಿ ಕಿರುಕುಳ ನೀಡುತ್ತಿವೆ ಎಂಬ ಆರೋಪಗಳು ಹಾವೇರಿ ಜಿಲ್ಲೆಯಲ್ಲಿ ಕೇಳಿಬರುತ್ತಿದ್ದು, ಇದು ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತಿದೆ.
ಹಾವೇರಿ ಜಿಲ್ಲೆ ಕೃಷಿ ಪ್ರಧಾನವಾಗಿದ್ದು, ಕೃಷಿ ಕೂಲಿಕಾರರು, ದಿನಗೂಲಿ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು, ಆಟೋ ಚಾಲಕರು ಸೇರಿದಂತೆ ವಿವಿಧ ವೃತ್ತಿಗಳ ಮೂಲಕ ಜೀವನ ಸಾಗಿಸುವ ಸಾವಿರಾರು ಕುಟುಂಬಗಳಿವೆ. ಶಿಕ್ಷಣ, ಮನೆ ನಿರ್ಮಾಣ, ಸಣ್ಣ ವ್ಯಾಪಾರ, ವಾಹನ ಖರೀದಿ ಹಾಗೂ ಕುಟುಂಬದ ತುರ್ತು ಅಗತ್ಯಗಳಿಗಾಗಿ ಇವರು ಖಾಸಗಿ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆಯುತ್ತಾರೆ. ಸಾಲ ಪಡೆಯುವ ಸಂದರ್ಭದಲ್ಲಿ ಸಂಸ್ಥೆಗಳು ನಿಗದಿಪಡಿಸುವ ಷರತ್ತುಗಳಿಗೆ ಸಹಿ ಮಾಡಿ, ಅಗತ್ಯ ದಾಖಲೆ ಹಾಗೂ ಜಾಮೀನು ನೀಡಿ ಸಾಲ ಪಡೆಯುವುದು ಸಾಮಾನ್ಯವಾಗಿದೆ.
ಸಾಲ ಪಡೆದ ಬಳಿಕ ಪ್ರತಿ ತಿಂಗಳು ಕಂತಿನ ರೂಪದಲ್ಲಿ ಮರುಪಾವತಿ ಮಾಡಲಾಗುತ್ತದೆ. ಆದರೆ ಕೆಲವೊಮ್ಮೆ ದುಡಿಮೆ ಕಡಿಮೆಯಾಗುವುದು, ಅನಾರೋಗ್ಯ, ಕೃಷಿ ನಷ್ಟ ಅಥವಾ ಅನಿವಾರ್ಯ ಆರ್ಥಿಕ ಸಂಕಷ್ಟದಿಂದಾಗಿ ನಿಗದಿತ ದಿನಾಂಕದಂದು ಕಂತು ಪಾವತಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಗ್ರಾಹಕರಿಗೆ ಸ್ವಲ್ಪ ಕಾಲಾವಕಾಶ ನೀಡಿ, ಮಾನವೀಯವಾಗಿ ಸಮಸ್ಯೆ ಬಗೆಹರಿಸುವ ಬದಲು ಪದೇಪದೇ ಫೋನ್ ಕರೆ ಮಾಡುವುದು, ಅವಮಾನಕರವಾಗಿ ಮಾತನಾಡುವುದು, ಮಾನಸಿಕ ಒತ್ತಡ ಹೇರುವುದು ಹಾಗೂ ಸಾರ್ವಜನಿಕವಾಗಿ ಮುಜುಗರ ಉಂಟುಮಾಡುವುದು ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಬೆಳಗ್ಗೆಯೇ ಶುರುವಾಗುತ್ತದೆಯಂತೆ ವಸೂಲಿ ಕಾಟ
ಜಿಲ್ಲೆಯಲ್ಲಿ ಸಣ್ಣಪುಟ್ಟ ಖಾಸಗಿ ಫೈನಾನ್ಸ್ ಸಂಸ್ಥೆಗಳು ಹೆಚ್ಚಾಗಿದ್ದು, ಮಹಿಳಾ ಸಂಘಗಳು ಸೇರಿದಂತೆ ವಿವಿಧ ಗುಂಪುಗಳ ಮೂಲಕ ಸಾಲ ನೀಡಲಾಗುತ್ತಿದೆ. ಸಾಲ ವಸೂಲಿಗಾಗಿ ಕೆಲವೆಡೆ ಯುವಕರನ್ನು ನೇಮಿಸಿಕೊಂಡು ಬೈಕ್‌ಗಳಲ್ಲಿ ಮನೆ ಮನೆಗೆ ತೆರಳಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಬೆಳಿಗ್ಗೆ 6 ಗಂಟೆಯಿಂದಲೇ ಸಾಲ ವಸೂಲಿಗೆ ಬರುವ ಸಿಬ್ಬಂದಿ, ಅಂದು ಕಂತು ಕಟ್ಟಲು ಸಾಧ್ಯವಾಗದ ಗ್ರಾಹಕರ ಮನೆಗೆ ತೆರಳಿ ಹಣಕ್ಕಾಗಿ ಒತ್ತಡ ಹೇರುತ್ತಾರೆ. ಎರಡು-ಮೂರು ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರೂ ಅದಕ್ಕೆ ಬೆಲೆ ಕೊಡದೆ ಬಾಯಿಗೆ ಬಂದಂತೆ ಮಾತನಾಡುವುದು, ಕಂಡಕಂಡಲ್ಲಿ ಗ್ರಾಹಕರನ್ನು ನಿಲ್ಲಿಸಿ ಪ್ರಶ್ನಿಸುವುದು ಹಾಗೂ ಭಯದ ವಾತಾವರಣ ಸೃಷ್ಟಿಸುವಂತಹ ವರ್ತನೆ ನಡೆಯುತ್ತಿದೆ ಎಂಬ ದೂರುಗಳೂ ಕೇಳಿಬಂದಿವೆ.
ಒಂದು ವಾರ ಕೆಲಸ ಸಿಕ್ಕರೆ ಕುಟುಂಬ ನಿರ್ವಹಣೆಯ ಜೊತೆಗೆ ಸಾಲದ ಕಂತು ಕಟ್ಟುವ ಕೂಲಿಕಾರರಿಗೆ ಮತ್ತೊಂದು ವಾರ ದುಡಿಮೆ ಸಿಗದೇ ಹೋದರೆ ಸಂಕಷ್ಟ ಎದುರಾಗುತ್ತದೆ. ಇದೇ ರೀತಿ ಸಣ್ಣ ವ್ಯಾಪಾರಿಗಳು ಹಾಗೂ ಆಟೋ ಚಾಲಕರಿಗೂ ಪ್ರತಿದಿನದ ಆದಾಯ ಒಂದೇ ರೀತಿಯಾಗಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಒಂದು ಅಥವಾ ಎರಡು ಕಂತು ತಡವಾದರೆ ದಂಡ, ಹೆಚ್ಚುವರಿ ಶುಲ್ಕ ಹಾಗೂ ನಿರಂತರ ಒತ್ತಡ ಹೇರುವುದು ಬಡ ಕುಟುಂಬಗಳನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತಿದೆ ಎಂಬ ಆರೋಪವಿದೆ.
ಸಾಲ ತೀರಿಸಿದ ಮೇಲೂ ‘ಬಾಕಿ’ ಎನ್ನುವ ಆರೋಪ
ಕೆಲ ಗ್ರಾಹಕರು ಸಾಲದ ಕಂತುಗಳನ್ನು ನಿಯಮಿತವಾಗಿ ಪಾವತಿಸಿದ ಬಳಿಕವೂ ಕೊನೆಯ ಹಂತದಲ್ಲಿ ಇನ್ನೂ ಹಣ ಬಾಕಿಯಿದೆ ಎಂದು ಹೇಳಿ ಹೆಚ್ಚುವರಿ ಹಣ ಕೇಳಲಾಗುತ್ತಿದೆ ಎಂಬ ಆರೋಪ ಮಾಡಿದ್ದಾರೆ. ಸಾಲದ ಸಂಪೂರ್ಣ ವಿವರ, ಪಾವತಿಸಿದ ಕಂತುಗಳು, ಬಾಕಿ ಮೊತ್ತ ಹಾಗೂ ಹೆಚ್ಚುವರಿ ಶುಲ್ಕಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡದೆ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳೂ ಕೇಳಿಬರುತ್ತಿವೆ.
ಸಾಲ ಪಡೆದವರು ಹಣ ಪಾವತಿಸಬೇಕಾದ ಜವಾಬ್ದಾರಿ ಹೊಂದಿದ್ದಾರೆ ಎಂಬುದು ಸತ್ಯ. ಆದರೆ ಸಾಲ ವಸೂಲಿಯ ಪ್ರಕ್ರಿಯೆಯೂ ಕಾನೂನುಬದ್ಧ ಮತ್ತು ಗೌರವಯುತವಾಗಿರಬೇಕು. ಗ್ರಾಹಕರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಮಾನಸಿಕ ಕಿರುಕುಳ ನೀಡುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಕಿರುಕುಳದಿಂದ ಜೀವ ಕಳೆದುಕೊಳ್ಳುವ ಆತಂಕ
ಸಾಲದ ಒತ್ತಡದಿಂದ ಕೆಲವರು ಮನೆ ಬಿಟ್ಟು ಹೋಗುವುದು, ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗುವುದು ಹಾಗೂ ಆತ್ಮಹತ್ಯೆಗೆ ಯತ್ನಿಸುವಂತಹ ದುರ್ಘಟನೆಗಳು ನಡೆಯುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಸಾಲದ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಗೆ ಇನ್ನಷ್ಟು ಒತ್ತಡ ನೀಡಿದರೆ ಪರಿಸ್ಥಿತಿ ಕೈಮೀರುವ ಸಾಧ್ಯತೆ ಇದೆ.
ಆದ್ದರಿಂದ ಸಾಲ ವಸೂಲಿಯ ಸಂದರ್ಭದಲ್ಲಿ ಗ್ರಾಹಕರಿಗೆ ಮಾನಸಿಕ ಧೈರ್ಯ ತುಂಬುವುದು, ನಿಜವಾದ ಆರ್ಥಿಕ ಸಂಕಷ್ಟವಿದ್ದರೆ ನಿಯಮಾನುಸಾರ ಮರುಪಾವತಿ ಅವಧಿ ಅಥವಾ ಇತರ ಕಾನೂನುಬದ್ಧ ಪರಿಹಾರಗಳ ಬಗ್ಗೆ ಮಾಹಿತಿ ನೀಡುವುದು ಹಣಕಾಸು ಸಂಸ್ಥೆಗಳ ಜವಾಬ್ದಾರಿಯೂ ಆಗಿದೆ. ಕೇವಲ ಒಂದು ದಿನ ಅಥವಾ ಎರಡು ದಿನ ಕಂತು ತಡವಾದ ಕಾರಣಕ್ಕೆ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವಂತಹ ವರ್ತನೆ ನಡೆಯಬಾರದು ಎಂಬ ಆಗ್ರಹ ಕೇಳಿಬರುತ್ತಿದೆ.
ಜಿಲ್ಲಾಡಳಿತ ತಕ್ಷಣ ಕ್ರಮಕ್ಕೆ ಮುಂದಾಗಲಿ
ಖಾಸಗಿ ಫೈನಾನ್ಸ್ ಸಂಸ್ಥೆಗಳ ಸಾಲ ವಸೂಲಾತಿ ವಿಧಾನಗಳ ಕುರಿತು ಹಾವೇರಿ ಜಿಲ್ಲಾಡಳಿತ ಸಮಗ್ರ ಪರಿಶೀಲನೆ ನಡೆಸಬೇಕು. ಜಿಲ್ಲೆಯಲ್ಲಿರುವ ಹಣಕಾಸು ಸಂಸ್ಥೆಗಳು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿವೆಯೇ, ಸಾಲ ನೀಡುವಾಗ ಗ್ರಾಹಕರಿಗೆ ನೀಡುತ್ತಿರುವ ದಾಖಲೆಗಳು ಹಾಗೂ ಷರತ್ತುಗಳು ಏನು, ಬಡ್ಡಿ ಮತ್ತು ದಂಡದ ಲೆಕ್ಕಾಚಾರ ಹೇಗೆ ನಡೆಯುತ್ತಿದೆ, ವಸೂಲಿಗೆ ನೇಮಿಸಿರುವ ಸಿಬ್ಬಂದಿ ಯಾವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬುದರ ಕುರಿತು ಪರಿಶೀಲನೆ ನಡೆಸಬೇಕಾಗಿದೆ.
ಅನಧಿಕೃತವಾಗಿ ಹಣಕಾಸು ವ್ಯವಹಾರ ನಡೆಸುವವರು, ಕಾನೂನುಬಾಹಿರ ರೀತಿಯಲ್ಲಿ ಸಾಲ ವಸೂಲಿ ಮಾಡುವವರು ಹಾಗೂ ಗ್ರಾಹಕರಿಗೆ ಬೆದರಿಕೆ ಅಥವಾ ಕಿರುಕುಳ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಪೊಲೀಸ್ ಇಲಾಖೆ, ಸಂಬಂಧಪಟ್ಟ ನಿಯಂತ್ರಣ ಸಂಸ್ಥೆಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಿ ಗ್ರಾಹಕರಿಗೆ ರಕ್ಷಣೆ ನೀಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಸಾಲ ಪಡೆದಿರುವುದು ಅಪರಾಧವಲ್ಲ. ಆರ್ಥಿಕ ಸಂಕಷ್ಟದಿಂದ ಸಾಲ ಪಡೆದ ಬಡ ಕುಟುಂಬಗಳಿಗೆ ಕಾನೂನುಬದ್ಧವಾಗಿ ಸಾಲ ಮರುಪಾವತಿಸಲು ಅವಕಾಶ ಕಲ್ಪಿಸುವುದು ಅಗತ್ಯ. ಆದರೆ ಅವರ ಬಡತನ, ಅಸಹಾಯಕತೆ ಹಾಗೂ ದುಡಿಮೆಯ ಅನಿಶ್ಚಿತತೆಯನ್ನು ದುರುಪಯೋಗಪಡಿಸಿಕೊಂಡು ಅವಮಾನಿಸುವುದು, ಭಯ ಹುಟ್ಟಿಸುವುದು ಅಥವಾ ಮಾನಸಿಕ ಒತ್ತಡ ಹೇರುವುದು ನಿಲ್ಲಬೇಕು.
ಮುಸ್ಲಿಂ ವ್ಯಕ್ತಿಯ ಮೊದಲ ಮದುವೆ ರದ್ದಾಗದಿದ್ರೆ 2ನೇ ವಿವಾಹವಾಗುವಂತಿಲ್ವಾ? ಹೈಕೋರ್ಟ್ ಆದೇಶವೇನು?
ಬಡವರ ಬದುಕಿಗೆ ನೆರವಾಗಬೇಕಾದ ಸಾಲ ವ್ಯವಸ್ಥೆಯೇ ಅವರ ಜೀವಕ್ಕೆ ಕುತ್ತಾಗದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡು, ಖಾಸಗಿ ಫೈನಾನ್ಸ್ ಸಂಸ್ಥೆಗಳ ಕಾರ್ಯವೈಖರಿಯ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿ, ಗ್ರಾಹಕರ ಹಕ್ಕು ಮತ್ತು ಗೌರವವನ್ನು ರಕ್ಷಿಸುವ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.