Haveri News: ಓಟ ನಿಲ್ಲಿಸಿದ ಕರ್ಜಗಿ ಓಂ-112; ರಾಜ್ಯಮಟ್ಟದಲ್ಲಿ ಖ್ಯಾತಿಯಾಗಿದ್ದ ಹೋರಿ ಅನಾರೋಗ್ಯದಿಂದ ಸಾವು
ಕರ್ಜಗಿಯಲ್ಲಿ ಹೋರಿ ಹಬ್ಬದ ಪೈಲ್ವಾನ್ ಆಗಿ ಮಿಂಚಿದ್ದ ಹೋರಿ ಕರ್ಜಗಿ ಓಂ ನಂಬರ್ 112, ಕಳೆದ ನಾಲ್ಕು ದಿನಗಳ ಹಿಂದಷ್ಟೇ ಬಂಕಾಪುರದ ಹಬ್ಬ ಮುಗಿಸಿ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದೆ.
ಅನಾರೋಗ್ಯದಿಂದ ಮೃತಪಟ್ಟ ಕರ್ಜಗಿ ಓಂ ಹೋರಿ. -
ಹಾವೇರಿ, ಜ.16: ಜಿಲ್ಲೆಯ ಕರ್ಜಗಿಯಲ್ಲಿ ಹೋರಿ ಬೆದರಿಸುವ ಹಬ್ಬದ ಪೈಲ್ವಾನ್ ಆಗಿ ಮಿಂಚಿದ್ದ ಕರ್ಜಗಿ ಓಂ-112 ಹೋರಿ ಅನಾರೋಗ್ಯದಿಂದ ಮೃತಪಟ್ಟಿದೆ. ತನ್ನ ಶರವೇಗದ ಓಟದ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಕರ್ನಾಟಕದ ಸ್ಪೆಷಲ್ ಬ್ರ್ಯಾಂಡ್ ಕರ್ಜಗಿ ಓಂ ಹೋರಿ ಹಬ್ಬದ ಕಿಂಗ್ ಆಗಿಯೇ ಇತ್ತು. ಇದೇ ಕಾರಣದಿಂದಾಗಿಯೇ ಇವನನ್ನು ಎಲ್ಲರೂ ಪ್ರೀತಿಯಿಂದ ಕರ್ನಾಟಕದ ಹೋರಿ ಹಬ್ಬದ ಬ್ರ್ಯಾಂಡ್ 1000CC ಕರ್ಜಗಿಯ ಓ೦ ನಂಬರ್ 112 ಎಂದು ಕರೆಯುತ್ತಿದ್ದರು.
ಕಳೆದ ನಾಲ್ಕು ದಿನಗಳ ಹಿಂದಷ್ಟೇ ಬಂಕಾಪುರದ ಹಬ್ಬ ಮುಗಿಸಿ ಅನಾರೋಗ್ಯಕ್ಕೆ ತುತ್ತಾಗಿದ್ದ ಓಂ ಹೋರಿಯು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದೆ. ಸಾವಿರಾರು ಜನರ ಮಧ್ಯೆ ತಾಕತ್ತು ಇದ್ದರೆ ಹಿಡೀರಿ ಎಂದು ಸಾವಿರಾರು ಪೈಲ್ವಾನರಿಗೆ ಸವಾಲು ಹಾಕುತ್ತಿದ್ದ ಈ ಹೋರಿಯ, ವೇಗ, ಆವೇಶ ಮತ್ತು ಜೋಶ್ ನೋಡಲೆಂದೇ ದೂರ ಊರುಗಳಿಂದ ಲಕ್ಷಾಂತರ ಅಭಿಮಾನಿಗಳು ಜಮಾಯಿಸುತ್ತಿದ್ದರು.
ಹೋರಿ ಓಟದ ಅಖಾಡದಲ್ಲಿ ತಾನು ಹೆದರುವ ಬದಲಾಗಿ ಸುತ್ತಲೂ ನೆರೆದಿರುವ ಪೈಲ್ವಾನರನ್ನು ಬೆದರಿಸಿ ಗುರಿ ತಲುಪುತ್ತಿದ್ದ ಈತನನ್ನು ಮುಟ್ಟಬೇಕೆಂದರೆ ಎಂಟೆದೆ ಬೇಕಿತ್ತು. ಮುಟ್ಟಿದರೂ ಹಿಡಿದು ನಿಲ್ಲಿಸಲು ತಾಕತ್ತು ಯಾರಿಗೂ ಇರುತ್ತಿರಲಿಲ್ಲ. ಅನೇಕ ಪೈಲ್ವಾನರು ಹಿಡಿದು ನಿಲ್ಲಿಸುವ ಸಾಹಸಕ್ಕೆ ಕೈ ಹಾಕುತ್ತಿದ್ದರು. ಆದರೂ ಯಾರ ಕೈಗೆ ಸಿಗದೆ ಮುನ್ನುಗ್ಗುವ ತಾಕತ್ತು ಈ ಓ೦ 112 ನಂಬರ್‌ನ ಹೋರಿಯದಾಗಿತ್ತು. ಈತ ನಾಲ್ಕು ವರ್ಷಗಳ ಕಾಲ ಹೋರಿ ಹಬ್ಬದ ಸ್ಪರ್ಧೆಯಲ್ಲಿ ಭಾಗವಹಿಸಿ ಲಕ್ಷಾಂತರ ಅಭಿಮಾನಿಗಳನ್ನುಗಳಿಸಿ ಅಭಿಮಾನಿಗಳು ಆರಾಧ್ಯ ದೈವ ಎನಿಸಿಕೊಂಡಿದ್ದ. ಆದರೆ ಈಗ ಈತ ಅನಾರೋಗ್ಯಕ್ಕೆ ತುತ್ತಾಗಿ ಬಾರದ ಲೋಕದತ್ತ ಪಯಣಿಸಿದ್ದಾನೆ.
ಈತನನ್ನು ಸಾಕಿದ ಮನೆಯವರು ಮತ್ತು ಲಕ್ಷಾಂತರ ಅಭಿಮಾನಿಗಳು ದುಃಖದಿಂದ ಕಣ್ಣಿರು ಹಾಕುತ್ತಿದ್ದಾರೆ. ಓ೦ನ ಪಾರ್ಥಿವ ಶರೀರವನ್ನು ಗ್ರಾಮಸ್ಥರು ಮತ್ತು ಅಭಿಮಾನಿಗಳು ಕರಜಗಿ ಗ್ರಾಮದಲ್ಲಿ ಮೆರವಣಿಗೆ ಮಾಡುವ ಮೂಲಕ ಕಣ್ಣೀರಿನ ವಿದಾಯ ಹೇಳಿದ್ದಾರೆ.
ಕರಜಗಿ ಗ್ರಾಮದ ಕಬಡ್ಡಿ ಪೈಲ್ವಾನ್ ಎಂದೆ ಹೆಸರಾದ ಜಗದೀಶ್ ನಾಗಪ್ಪ ಮಾನೆಗಾರ ಎಂಬ ಯುವಕ ನಾಲ್ಕು ವರ್ಷಗಳ ಹಿಂದೆ ಇವರದೇ ಕರ್ಜಗಿ ಓಂ ಸವಿನೆನಪಿಗಾಗಿ ಈ ಜ್ಯೂನಿಯರ್ ಕರ್ಜಗಿ ಓಂ ಹೋರಿಯನ್ನು ಖರೀದಿ ಮಾಡಿದ್ದರು. ಅಂದಿನಿಂದ ಓ೦ ಮನೆಮಗನಾಗಿಯೇ ಇದ್ದನು. ಹೋರಿ ಹಬ್ಬಕ್ಕೆ ಓಂ ಬರುತ್ತಿದೆ ಎಂದರೆ ಲಕ್ಷಾಂತರ ಅಭಿಮಾನಿಗಳು ಜಮಾಯಿಸುತ್ತಿದ್ದರು. ಯಾಕೆಂದರೆ ತನ್ನದೇಯಾದ ಅಭಿಮಾನಿಗಳ ತಂಡ ಕಟ್ಟಿಕೊಂಡಿದ್ದನು.
ಎಲ್ಲ ಹೋರಿಯಂತೆ ಈತ ಇರಲ್ಲಿಲ್ಲ. ಮಿಂಚಿನ ಓಟದ ಮೂಲಕ ಕೇವಲ ನಾಲ್ಕು ವರ್ಷದಲ್ಲಿ ಸಾಲು ಸಾಲು ಹಬ್ಬಗಳ ಸ್ಪರ್ಧೆಗಳಲ್ಲಿ ಸರ್ದಾರ ಎನಿಸಿಕೊಂಡಿದ್ದ. ಈತ ಹೋದಲ್ಲೆಲ್ಲಾ ಬಂಪರ್ ಬಹುಮಾನ ತನ್ನದಾಗಿಸಿಕೊಂಡಿದ್ದನು. ಮೂರು ಬೈಕ್, ಬಂಗಾರ, ಚಿನ್ನದ ಪದಕ, ಫ್ರಿಜ್, ಟ್ರಜುರಿ, ಟಿವಿ ಹೀಗೆ ಅನೇಕ ಬಹುಮಾನ ಪಡೆದು ಕರ್ನಾಟಕದ ಹೋರಿ ಹಬ್ಬದ ಸ್ಪೆಷಲ್ ಬ್ರ್ಯಾಂಡ್ ಆಗಿ ಹೆಸರುವಾಸಿಯಾಗಿದ್ದನು.
ದ್ವಿಚಕ್ರ ವಾಹನಕ್ಕೆ ಸಿಲುಕಿದ ಗಾಳಿಪಟದ ದಾರ; ಫ್ಲೈಓವರ್‌ನ 70 ಅಡಿ ಎತ್ತರದಿಂದ ಬಿದ್ದು ದಂಪತಿ, ಪುತ್ರಿ ಸಾವು
ಓಂ ಹೋರಿ ಉಳಿಸಿಕೊಳ್ಳಲು ಮಾಲಿಕರು ಬಹಳಷ್ಟು ಹಣ ವ್ಯಯಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇೆ ಓಂ ಶುಕ್ರವಾರ ಬೆಳಗ್ಗೆ ಮೃತಪಟ್ಟಿದೆ. ಮೃತಪಟ್ಟ ಸುದ್ದಿಯನ್ನು ಕೇಳಿ ಹೋರಿಯ ಅಭಿಮಾನಿಗಳು ಆಗಮಿಸಿ, ಅಂತಿಮ ದರ್ಶನ ಪಡೆದರು. ಓಂನ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನರು ಭಾಗಿಯಾಗಿ ಶೋಕ ವ್ಯಕ್ತಪಡಿಸಿದರು.