Haveri News: ಮೇವುಂಡಿ ಗ್ರಾಮದ ಮೂರು ಓಣಿಗಳ ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸಿದ ಪಿಡಿಒ
Haveri News: ಹಾವೇರಿ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಗ್ರಾಮದ ಮೂರು ಓಣಿಗಳ ನಿವಾಸಿಗಳ ಸಮಸ್ಯೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಆರ್. ಜಲರೆಡ್ಡಿ ತಕ್ಷಣ ಸ್ಪಂದಿಸಿ ಪರಿಹಾರ ಕಲ್ಪಿಸಿದ್ದಾರೆ.
-
ಹಾವೇರಿ, ಅ.30: ತಾಲೂಕಿನ ಮೇವುಂಡಿ ಗ್ರಾಮದಲ್ಲಿ (Haveri News) ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಮೂರು ಓಣಿಗಳ ನಿವಾಸಿಗಳ ಸಮಸ್ಯೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಆರ್. ಜಲರೆಡ್ಡಿ ತಕ್ಷಣ ಸ್ಪಂದಿಸಿ ಪರಿಹಾರ ಕಲ್ಪಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆಯಿಂದ ಸ್ಥಳೀಯ ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿತ್ತು. ಈ ಕುರಿತು ಗುರುವಾರ ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಂಡು ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದರು.
ಸಾರ್ವಜನಿಕರ ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆಯೇ ಶುಕ್ರವಾರ ಪಿಡಿಒ ಆರ್. ಜಲರೆಡ್ಡಿ ಅವರು ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಿ, ನೀರಿನ ಸಮಸ್ಯೆಯನ್ನು ಪರಿಶೀಲಿಸಿದರು. ಬಳಿಕ ತಕ್ಷಣವೇ ಅಗತ್ಯ ಕ್ರಮ ಕೈಗೊಂಡು ಗ್ರಾಮದ ಗ್ರಾಮದ ಎಸ್ಸಿ ಕಾಲೋನಿ, ಗೌಡ್ರ ಓಣಿ ಹಾಗೂ ಕರಿಯಮ್ಮ ಓಣಿಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಲ್ಲಿ ಮುಂದಾದರು.
ಸಾಮಾನ್ಯವಾಗಿ ಸಾರ್ವಜನಿಕರು ಸಮಸ್ಯೆ ಹೇಳಿಕೊಂಡ ಬಳಿಕವೂ ಪರಿಹಾರಕ್ಕಾಗಿ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇರುತ್ತದೆ. ಆದರೆ, ಮೇವುಂಡಿ ಗ್ರಾಮದಲ್ಲಿ ದೂರು ನೀಡಿದ ಮರುದಿನವೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಸ್ಪಂದಿಸಿರುವ ಪಿಡಿಒ ಅವರ ಕಾರ್ಯವೈಖರಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. ಸಾರ್ವಜನಿಕರ ಮೂಲಭೂತ ಸೌಕರ್ಯಗಳ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಕಲ್ಪಿಸುವ ಅಧಿಕಾರಿಗಳ ನಡೆ ಇತರರಿಗೂ ಮಾದರಿಯಾಗಿದೆ ಎಂಬ ಅಭಿಪ್ರಾಯ ಗ್ರಾಮಸ್ಥರಿಂದ ವ್ಯಕ್ತವಾಗಿದೆ.