ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಬೆಂಗಳೂರಿನ ಸಿಸಿಬಿ ಇನ್ಸ್‌ಪೆಕ್ಟರ್ ಸೇರಿ ಐವರು ಕನ್ನಡಿಗರ ಸಾವು; ಮೃತರ ಗುರುತು ಪತ್ತೆ

Uttarakhand helicopter crash: ಉತ್ತರಾಖಂಡದ ಜೋಶಿಮಠ ಕಣಿವೆಯಲ್ಲಿ ನಡೆದ ಹೆಲಿಕಾಪ್ಟ‌ರ್ ದುರಂತದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಅರುಣ್ ಸಾಳುಂಕೆ ಸೇರಿ ಐವರು ಕನ್ನಡಿಗರು ಮೃತಪಟ್ಟಿದ್ದಾರೆ. ಸ್ನೇಹಿತರ ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ವೇಳೆ ದುರ್ಘಟನೆ ನಡೆದಿದೆ.

ಉತ್ತರಾಖಂಡ ಹೆಲಿಕಾಪ್ಟರ್ ದುರಂತ; ಬೆಂಗಳೂರಿನ ಸಿಸಿಬಿ ಇನ್ಸ್‌ಪೆಕ್ಟರ್ ಸಾವು

ಮೃತ ಸಿಸಿಬಿ ಇನ್ಸ್‌ಪೆಕ್ಟರ್‌ ಅರುಣ್ ಸಾಲುಂಕೆ. -

Prabhakara R
Prabhakara R Oct 30, 2026 6:21 PM

ಬೆಂಗಳೂರು: ಉತ್ತರಾಖಂಡದ ಜೋಶಿಮಠ ಕಣಿವೆಯಲ್ಲಿ ಖಾಸಗಿ ಸಂಸ್ಥೆಯ ಹೆಲಿಕಾಪ್ಟ‌ರ್ ಶುಕ್ರವಾರ ಪತನಗೊಂಡು ನಡೆದ ದುರಂತದಲ್ಲಿ (Uttarakhand helicopter crash) ಬೆಂಗಳೂರಿನ ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಅರುಣ್ ಸಾಲುಂಕೆ ಸೇರಿ ಐವರು ಕನ್ನಡಿಗರು ಹಾಗೂ ಒಬ್ಬ ಪೈಲಟ್‌ ಸೇರಿ ಒಟ್ಟು ಆರು ಜನರು ಮೃತಪಟ್ಟಿದ್ದಾರೆ. ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಬೆಂಗಳೂರು ಮೂಲದ ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟ‌ರ್ ಪತನಗೊಂಡಿದೆ.

ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಮಧ್ಯಾಹ್ನ 1:14ಕ್ಕೆ ಟೇಕಾಫ್‌ ಆಗಿತ್ತು. ಜೋಶಿಮಠ ಕಣಿವೆಯ ಮೇಲೆ ಹಾರಾಟ ನಡೆಸುತ್ತಿದ್ದಾಗ ಏಕಾಏಕಿ ಏರ್ ಟ್ರಾಫಿಕ್ ಕಂಟ್ರೋಲ್ ಜೊತೆಗಿನ ಸಂಪರ್ಕ ಕಡಿತಗೊಂಡಿದೆ. ಹೆಲಿಕಾಪ್ಟರ್‌ನ ಜಿಪಿಎಸ್ ಹಾಗೂ ಟ್ರ್ಯಾಕಿಂಗ್ ಸಿಸ್ಟಮ್‌ನಿಂದಲೂ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ತಕ್ಷಣವೇ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು.

ಮೃತರನ್ನು ದೆಹಲಿಯ ಪೈಲಟ್ ಕ್ಯಾಪ್ಟನ್ ಹಿಮಾಂಶು, ಬೆಂಗಳೂರಿನ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಅರುಣ್ ಸಾಲುಂಕೆ, ವಕೀಲ ಸುಧೀರ್. ಕೆ, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಚಳ್ಳಿಯ ಉದ್ಯಮಿ ಪ್ರತಾಪ್ ಗೌಡ, ತುಮಕೂರು ಜಿಲ್ಲೆಯ ಕುಣಿಗಲ್‌ನ ಕೋಳಿತಿಮ್ಮಯ್ಯನ ಪಾಳ್ಯದ ಶಂಕರೇಗೌಡ (40), ಹುಲಿಯೂರುದುರ್ಗದ ಕೋಳಿ ವ್ಯಾಪಾರಿ ಎಚ್.ಎಸ್.ನಟರಾಜ್ (50) ಎಂದು ಗುರುತಿಸಲಾಗಿದೆ.

ದುರಂತದಲ್ಲಿ ಮೃತಪಟ್ಟ ಸಿಸಿಬಿ ಇನ್ಸ್‌ಪೆಕ್ಟ‌ರ್ ಅರುಣ್ ಸಾಲುಂಕೆ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇವರು ಚಾರ್ ಧಾಮ್ ಯಾತ್ರೆಗಾಗಿ ಸ್ನೇಹಿತರ ಜತೆ ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ.

ಘಟನೆ ನಡೆದ ಸ್ಥಳಕ್ಕೆ ಭಾರತೀಯ ಸೇನೆ, ಎಸ್‌ಡಿಆರ್‌ಎಫ್‌ ಹಾಗೂ ಚಮೋಲಿ ಜಿಲ್ಲಾಡಳಿತದ ರಕ್ಷಣಾ ತಂಡಗಳು ಧಾವಿಸಿದ್ದು, ಶೋಧ ಕಾರ್ಯಾಚರಣೆ ಪೂರ್ಣಗೊಳಿಸಿವೆ. ಅಪಘಾತದ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ಎಲ್ಲಾ ಹೆಲಿಕಾಪ್ಟರ್‌ಗಳ ಹಾರಾಟವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.

Uttarakhand helicopter crash  (2)

ಇನ್ಸ್‌ಪೆಕ್ಟರ್‌ ಅರುಣ್ ಸಾಲುಂಕೆ ಯಾರು?

ಪೊಲೀಸ್ ಅಧಿಕಾರಿ ಅರುಣ್ ಸಾಲುಂಕೆ ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದವರು. ಅರುಣ ಸಾಲುಂಕೆ ಅವರು 2007ನೇ ಬ್ಯಾಚ್‌ನ ಪೊಲೀಸ್ ಅಧಿಕಾರಿಯಾಗಿದ್ದು, ತಮ್ಮ ವೃತ್ತಿಜೀವನದ ಆರಂಭದಲ್ಲಿ ದೆಹಲಿಯಲ್ಲಿ ಇಂಟೆಲಿಜೆನ್ಸ್ ವಿಭಾಗದಲ್ಲಿ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಬೆಂಗಳೂರಿಗೆ ವರ್ಗಾವಣೆಯಾಗಿ ವಿವಿಧ ಪೊಲೀಸ್ ಠಾಣೆಗಳು ಹಾಗೂ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಬೆಂಗಳೂರಿನಲ್ಲಿ ನೆಲಮಂಗಲ, ಕುಣಿಗಲ್ ಮತ್ತು ಬಾಣಸವಾಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು, ಪ್ರಸ್ತುತ ಬೆಂಗಳೂರಿನ ಅಪರಾಧ ವಿಭಾಗದ ಕೇಂದ್ರ ಅಪರಾಧ ವಿಭಾಗವಾದ ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಅರುಣ ಸಾಲುಂಕೆ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಅವರ ತಂದೆ ಮತ್ತು ಸಹೋದರರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದಲ್ಲೇ ನೆಲೆಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಯೊಬ್ಬರು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿರುವ ಸುದ್ದಿ ಅವರ ಸ್ವಗ್ರಾಮದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ.