ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಾವೇರಿಯಲ್ಲಿ ಟ್ರ್ಯಾಕ್ಟರ್‌ಗಳ ಕರ್ಕಶ ಸದ್ದು, ಡಿಜೆ ಹಾವಳಿ: ಕ್ರಮಕ್ಕೆ ಸಾರ್ವಜನಿಕರ ಆಗ್ರಹ

Haveri News: ಹಾವೇರಿ ಜಿಲ್ಲೆಯ ವಸತಿ ಪ್ರದೇಶಗಳು ಹಾಗೂ ಸಾರ್ವಜನಿಕ ರಸ್ತೆಗಳಲ್ಲಿ ಟ್ರ್ಯಾಕ್ಟರ್‌ಗಳ ಕರ್ಕಶ ಸದ್ದು, ಡಿಜೆ ಹಾವಳಿಯಿಂದಾಗಿ ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ಈ ಕುರಿತು ಪೊಲೀಸ್‌ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಾವೇರಿಯಲ್ಲಿ ಟ್ರ್ಯಾಕ್ಟರ್‌ಗಳ ಕರ್ಕಶ ಸದ್ದು, ಡಿಜೆ ಹಾವಳಿ

-

Profile
Siddalinga Swamy Nov 13, 2026 9:00 PM

ಹಾವೇರಿ, ನ.13: ಜಿಲ್ಲೆಯಲ್ಲಿ ಕರ್ಕಶ ಶಬ್ದ ಹೊರಸೂಸುವ ಟ್ರ್ಯಾಕ್ಟರ್‌ಗಳು ಹಾಗೂ ಅತಿಯಾದ ಧ್ವನಿವರ್ಧಕಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಸತಿ ಪ್ರದೇಶಗಳ ಜನರ ನೆಮ್ಮದಿಗೆ ಕುತ್ತು ತಂದಿದೆ. ವಿಶೇಷವಾಗಿ ಗರ್ಭಿಣಿಯರು, ನವಜಾತ ಶಿಶುಗಳು, ಮಕ್ಕಳು ಹಾಗೂ ವೃದ್ಧರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಟ್ರ್ಯಾಕ್ಟರ್‌ಗಳಿಗೆ ಅಳವಡಿಸಿರುವ ಬೃಹತ್ ಸ್ಪೀಕರ್‌ಗಳು ಹಾಗೂ ಡಿಜೆ ಸೌಂಡ್ ಸಿಸ್ಟಮ್‌ಗಳಿಂದ ಕಿವಿಗಡಚಿಕ್ಕುವ ಶಬ್ದ ಹೊರಹೊಮ್ಮುತ್ತಿದ್ದು, ಮನೆಗಳಲ್ಲಿ ವಿಶ್ರಾಂತಿ ಪಡೆಯುವವರಿಗೂ ನೆಮ್ಮದಿ ಇಲ್ಲದಂತಾಗಿದೆ. ಅತಿಯಾದ ಶಬ್ದದಿಂದ ಮಕ್ಕಳ ನಿದ್ರೆ ಮತ್ತು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಆತಂಕ ಪೋಷಕರಲ್ಲಿ ವ್ಯಕ್ತವಾಗಿದೆ.

ಇನ್ನೂ ಶಬ್ದ ಕಡಿಮೆ ಮಾಡುವಂತೆ ಸೌಜನ್ಯದಿಂದ ಮನವಿ ಮಾಡಿದರೆ, ಕೆಲ ಟ್ರ್ಯಾಕ್ಟರ್ ಚಾಲಕರು ಸಾರ್ವಜನಿಕರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿ ದರ್ಪ ತೋರುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಹಿರೇಕೆರೂರು ಪೊಲೀಸರು ಬೈಕ್‌ಗಳ ಮಾರ್ಪಡಿಸಿದ ಸೈಲೆನ್ಸರ್‌ಗಳ ವಿರುದ್ಧ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ಮಾದರಿಯಲ್ಲಿ ವಸತಿ ಪ್ರದೇಶಗಳು ಹಾಗೂ ಸಾರ್ವಜನಿಕ ರಸ್ತೆಗಳಲ್ಲಿ ಅತಿಯಾದ ಶಬ್ದ ಮಾಡುತ್ತ ಸಂಚರಿಸುವ ಟ್ರ್ಯಾಕ್ಟರ್‌ಗಳ ವಿರುದ್ಧವೂ ವಿಶೇಷ ಕಾರ್ಯಾಚರಣೆ ನಡೆಸಬೇಕು. ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ದಂಡ ವಿಧಿಸಿ, ಅಕ್ರಮವಾಗಿ ಅಳವಡಿಸಿರುವ ಧ್ವನಿವರ್ಧಕಗಳನ್ನು ಜಪ್ತಿ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕಬೇಕು. ತಾಯಂದಿರು, ನವಜಾತ ಶಿಶುಗಳು, ಮಕ್ಕಳು ಮತ್ತು ವೃದ್ಧರ ನೆಮ್ಮದಿಯ ಬದುಕಿಗೆ ರಕ್ಷಣೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.