ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇವಗಿರಿಯ ಅಭಿವೃದ್ಧಿಯ ಸಾರಥಿ: ಜಿಲ್ಲಾಡಳಿತದ ಸರ್ವೋತ್ತಮ ಪ್ರಶಸ್ತಿಗೆ ಪಿಡಿಒ ಸುನೀತಾ ಗರಡಿ ಆಯ್ಕೆ

ಸುನೀತಾ ಗರಡಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಗ್ರಾಮದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದರು. ಕುಡಿಯುವ ನೀರು, ರಸ್ತೆ, ಚರಂಡಿ, ಸ್ವಚ್ಛತೆ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಹೈಟೆಕ್ ಲೈಬ್ರರಿ, ಅಂಗನವಾಡಿಯಂತಹ ಪ್ರಮುಖ ಸಾರ್ವಜನಿಕ ಕಟ್ಟಡಗಳ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಗ್ರಾಮಸ್ಥರ ಮೆಚ್ಚುಗೆ ಗಳಿಸಿದ್ದಾರೆ.

ಜಿಲ್ಲಾಡಳಿತದ ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆಯಾದ ಪಿಡಿಒ ಸುನೀತಾ ಗರಡಿ

-

Profile
Ashok Nayak Jul 5, 2026 7:52 AM

ಹಾವೇರಿ: ಗ್ರಾಮೀಣ ಅಭಿವೃದ್ಧಿಗೆ ಸಮರ್ಪಿತ ಸೇವೆ, ಪಾರದರ್ಶಕ ಆಡಳಿತ ಹಾಗೂ ಜನಸ್ನೇಹಿ ಕಾರ್ಯವೈಖರಿಯಿಂದ ದೇವಗಿರಿ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸುನೀತಾ ಗರಡಿ ಅವರು ಜಿಲ್ಲಾಡಳಿತದಿಂದ ನೀಡಲಾಗುವ ಸರ್ವೋತ್ತಮ ಪಿಡಿಒ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಈ ಸಾಧನೆ ದೇವಗಿರಿ ಗ್ರಾಮ ಪಂಚಾಯಿತಿಗೆ ಹೆಮ್ಮೆಯ ವಿಷಯವಾಗಿದೆ.

ಜಿಲ್ಲಾಡಳಿತ ಮತ್ರು ಜಿಲ್ಲಾ ಪಂಚಾಯತ ಹಾಗೂ ರಾಜ್ಯ ಸರ್ಕಾರಿ ‌ನೌಕರರ ಸಂಘ ಜಿಲ್ಲಾ ಘಟಕ ದಿಂದ ಹಮ್ಮಿಕೊಂಡಿರುವ ಸರಕಾರಿ‌ ನೌಕರರ ದಿನಾಚರಣೆ ಹಾಗೂ ಹಾವೇರಿ, ಗದಗ, ಧಾರವಾಡ ಜಿಲ್ಲೆಯ ಎಸ್ ಎಸ್ ಎಲ್ ಸಿ, ಪಿಯುಸಿಯ 700 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ‌ವು ಹಾವೇರಿ‌ ನಗರದ ಗುತ್ತಲ ರಸ್ತೆಯಲ್ಲಿರುವ ಸಾಯಿ ಪರಮೇಶ್ವರ ಗ್ರ್ಯಾಂಡ್ ಕನ್ವೆನ್ಷನ್ ಹಾಲ್ ನಲ್ಲಿ ಇಂದು ಸಂಜೆ‌ 4 ಗಂಟೆಗೆ ನಡೆಯಲಿದ್ದು ವಿವಿಧ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 10 ಸರಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ ನಡೆಯಲಿದೆ.

ಇದನ್ನೂ ಓದಿ: Cloud Seeding in Haveri: ಹಾವೇರಿ ಜಿಲ್ಲೆಯಲ್ಲಿ ಮಳೆ ಕೊರತೆ; ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆಗೆ ಮುಂದಾದ 6 ಶಾಸಕರು

ಸುನೀತಾ ಗರಡಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಗ್ರಾಮದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದರು. ಕುಡಿಯುವ ನೀರು, ರಸ್ತೆ, ಚರಂಡಿ, ಸ್ವಚ್ಛತೆ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಹೈಟೆಕ್ ಲೈಬ್ರರಿ, ಅಂಗನವಾಡಿಯಂತಹ ಪ್ರಮುಖ ಸಾರ್ವಜನಿಕ ಕಟ್ಟಡಗಳ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಗ್ರಾಮಸ್ಥರ ಮೆಚ್ಚುಗೆ ಗಳಿಸಿದ್ದಾರೆ.

ಇತ್ತೀಚೆಗೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಸರ್ಕಾರಿ ಶಾಲೆಯ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಹಾಗೂ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ಪಾರದರ್ಶಕತೆ ಕಾಪಾಡಿರುವುದು ಅವರ ವಿಶೇಷತೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಗ್ರಾಮ ಪಂಚಾಯಿತಿಯ ಆಡಳಿತದಲ್ಲಿ ಜನಸಹಭಾಗಿತ್ವಕ್ಕೆ ಹೆಚ್ಚಿನ ಮಹತ್ವ ನೀಡಿರುವ ಅವರು, ಗ್ರಾಮ ಸಭೆಗಳನ್ನು ಸಮರ್ಪಕವಾಗಿ ನಡೆಸಿ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಸ್ಪಂದಿಸುವ ಮೂಲಕ ಉತ್ತಮ ಆಡಳಿತದ ಮಾದರಿಯಾಗಿದ್ದಾರೆ.

ಜಿಲ್ಲಾಡಳಿತ ನೀಡುವ ಸರ್ವೋತ್ತಮ ಪಿಡಿಒ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅವರ ಹಲವು ವರ್ಷಗಳ ಪರಿಶ್ರಮ, ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಗೆ ಸಂದ ಗೌರವವಾಗಿದೆ. ಈ ಹಿನ್ನೆಲೆ ಯಲ್ಲಿ ದೇವಗಿರಿ ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳು ಸುನೀತಾ ಗರಡಿ ಅವರಿಗೆ ಅಭಿನಂದನೆ ಸಲ್ಲಿಸಿ, ಇನ್ನಷ್ಟು ಉತ್ತಮ ಸೇವೆ ಸಲ್ಲಿಸಲಿ ಎಂದು ಹಾರೈಸಿದ್ದಾರೆ.