Movie Ticket Price: ಟಿಕೆಟ್ ದರ ಗರಿಷ್ಠ 200 ರೂ. ಮಿತಿ; ಸರ್ಕಾರದ ಪರ ಅಂತಿಮ ತೀರ್ಪು ಬಂದರೆ ಪ್ರೇಕ್ಷಕರಿಗೆ ಹೆಚ್ಚುವರಿ ಹಣ ವಾಪಸ್
High Court : ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಎಲ್ಲಾ ಮಲ್ಟಿಪ್ಲೆಕ್ಸ್‌ಗಳು ಟಿಕೆಟ್ ಮಾರಾಟ ಮಾಡಿ ಸಂಗ್ರಹಿಸುವ ಹಣದ ಲೆಕ್ಕವನ್ನು ನಿರ್ವಹಿಸಬೇಕು. ಒಂದೊಮ್ಮೆ ನಿಯಮವನ್ನು ಪೀಠ ಎತ್ತಿಹಿಡಿದರೆ ಆ ಹಣವನ್ನು ಟಿಕೆಟ್ ಖರೀದಿದಾರರಿಗೆ ಮರಳಿಸಬೇಕು ಎಂದು ಆದೇಶಿಸಿದೆ.

-

ಬೆಂಗಳೂರು: ಸಿನಿಮಾ ಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ನಿಗದಿ ಮಾಡಿದ್ದ (Movie Ticket Price) ಸರ್ಕಾರದ ಆದೇಶವನ್ನು ಹೊಂಬಾಳೆ ಫಿಲ್ಮ್ಸ್ ಹಾಗೂ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್, ಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದವು. ಇತ್ತೀಚೆಗೆ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಹೀಗಾಗಿ, ‘ಕಾಂತಾರ: ಚಾಪ್ಟರ್ 1’ ಸೇರಿ ಅನೇಕ ಸಿನಿಮಾಗಳಿಗೆ ಟಿಕೆಟ್ ದರ ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ. ಇದಕ್ಕೆ ಸಂಬಂಧಿಸಿ ಈಗ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ.
ಟಿಕೆಟ್ ದರ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಮೇಲ್ಮವಿ ಸಲ್ಲಿಕೆ ಮಾಡಿದೆ. ಈ ವಿಚಾರವಾಗಿ ಹೊಂಬಾಳೆ ಫಿಲ್ಮ್ಸ್ ಹಾಗೂ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ಗೆ ಹೈಕೋರ್ಟ್ ನೋಟಿಸ್ ನೀಡಿದೆ.
200 ರೂಪಾಯಿಗಿಂತ (ಶೇ.18 ಜಿಎಸ್ಟಿ ಸೇರಿ 236 ರೂಪಾಯಿ) ಹೆಚ್ಚಿನ ಹಣ ಸಂಗ್ರಹ ಹೈಕೋರ್ಟ್ ತೀರ್ಪಿಗೆ ಒಳಪಡುತ್ತದೆ ಎಂದು ಕೋರ್ಟ್ ಹೇಳಿದೆ. ಒಂದೊಮ್ಮೆ ಅರ್ಜಿ ವಿಚಾರಣೆಯ ಬಳಿಕ ಸರ್ಕಾರದ ಪರ ಅಂತಿಮ ತೀರ್ಪು ಬಂದರೆ ಪ್ರೇಕ್ಷಕನಿಂದ ಪಡೆದ ಹೆಚ್ಚುವರಿ ಹಣ ಮರಳಿಸಬೇಕು ಎಂದು ಸೂಚನೆ ನೀಡಲಾಗಿದೆ. ಈ ಬಗ್ಗೆ ಚಿತ್ರಮಂದಿರದಲ್ಲಿ ಪ್ರಕಟಿಸಲು ಕೋರ್ಟ್ ಸೂಚನೆ ನೀಡಿದೆ.
ಈ ಸುದ್ದಿಯನ್ನೂ ಓದಿ | Mango Pachcha Movie: ಸಂಚಿತ್ ಸಂಜೀವ್ ಅಭಿನಯದ ʼಮ್ಯಾಂಗೋ ಪಚ್ಚʼ ಸಿನಿಮಾದ ಟೀಸರ್ ರಿಲೀಸ್
ರಾಜ್ಯ ಸರ್ಕಾರದ ವಾದ ಏನು?
ಸರ್ಕಾರದ ಪರ ಎಎಜಿ ಇಸ್ಮಾಯಿಲ್ ಜಬೀವುಲ್ಲಾ ವಾದ ಮಂಡಿಸಿದ್ದಾರೆ. ‘ಸರ್ಕಾರದ ನಿಯಮ ಕಾನೂನುಬದ್ಧ ಆಗಿದೆ’ ಎಂದು ಕೋರ್ಟ್ಗೆ ಮನವರಿಕೆ ಮಾಡಿದ್ದಾರೆ. ವಾಣಿಜ್ಯ ಮಂಡಳಿ ಪರ ಹಿರಿಯ ವಕೀಲ ವಿ.ಲಕ್ಷ್ಮೀನಾರಾಯಣ ವಾದ ಮಾಡಿದ್ದಾರೆ. ‘ವಾಣಿಜ್ಯ ಮಂಡಳಿ ಮನವಿ ಮೇರೆಗೆ ಸರ್ಕಾರ ದರ ನಿಗದಿ ಮಾಡಿದೆ. ಹೀಗಾಗಿ ದರ ನಿಗದಿ ಆದೇಶಕ್ಕೆ ನೀಡಿದ ತಡೆಯಾಜ್ಞೆ ತೆರವು ಮಾಡಬೇಕು’ ಎಂದು ಅವರು ಕೋರಿದ್ದಾರೆ.