ಮತಗಳ್ಳತನ ಮಾಡುತ್ತಿರುವುದೇ ಕಾಂಗ್ರೆಸ್; ರಾಹುಲ್ ಗಾಂಧಿಗೆ 5 ಪ್ರಶ್ನೆ ಕೇಳಿದ ಎಚ್.ಎಂ.ರಮೇಶ್ ಗೌಡ
HM Ramesh Gowda: ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರು 136 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ದರು. ಇಷ್ಟು ಕರಾರುವಕ್ಕಾಗಿ ಸಂಖ್ಯೆ ಹೇಳಬೇಕು ಎಂದರೆ ಅವರೇನು ಬ್ರಹ್ಮನೇ. ಅವರು ಹೇಳಿದ ಪ್ರಕಾರವೇ 136 ಸ್ಥಾನ ಗೆದ್ದಿದ್ದಾರೆ. ಹಾಗಾದರೆ ಇವರೂ ರಿಗ್ಗಿಂಗ್ ಮಾಡಿ, ಮತಗಳ್ಳತನ ಮಾಡಿ ಗೆದ್ದಿದ್ದಾರಾ? ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ವಾಗ್ದಾಳಿ ನಡೆಸಿದ್ದಾರೆ.


ಬೆಂಗಳೂರು: ಮತಗಳ್ಳತನ ಎಂದು ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಮಾಡಿರುವ ಆರೋಪವು ಪರಮಸುಳ್ಳು. ಕಾಂಗ್ರೆಸ್ ಪಕ್ಷವೇ ಮತಗಳ್ಳತನದಲ್ಲಿ ನಿರತವಾಗಿದೆ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ (HM Ramesh Gowda) ದೂರಿದ್ದಾರೆ. ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಆಯೋಗಕ್ಕೆ ಐದು ಪ್ರಶ್ನೆ ಕೇಳಿದ್ದಾರೆ. ಜೆಡಿಎಸ್ ಕೂಡ ಅವರಿಗೆ ಐದು ಪ್ರಶ್ನೆ ಕೇಳುತ್ತದೆ. ನೈತಿಕತೆ ಇದ್ದರೆ ಅವರು ಈ ಪ್ರಶ್ನೆಗಳಿಗೆ ಉತ್ತರ ಕೊಡಲಿ ಎಂದು ಅವರು ಸವಾಲು ಹಾಕಿದ್ದಾರೆ.
ಇವೇ ಐದು ಪ್ರಶ್ನೆಗಳು
- ನೀವು ಚುನಾವಣಾ ಆಯೋಗಕ್ಕೆ ಉತ್ತರ ಕೊಡುವುದಕ್ಕೆ ಹೆದರುತ್ತಿರುವುದು ಯಾಕೆ?
- ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಮಾಗಡಿ, ಕುಣಿಗಲ್ ಸೇರಿ ಅನೇಕ ವಿಧಾನಸಭೆ ಕ್ಷೇತ್ರಗಳಲ್ಲಿ ಗಿಫ್ಟ್ ಕೂಪನ್ ಹಂಚಿ ಗೆದ್ದಿದ್ದೀರಿ. ಇದು ಮತಗಳ್ಳತನ ಅಲ್ಲವೇ?
- ಗೃಹಲಕ್ಷ್ಮೀ ಗ್ಯಾರಂಟಿಯನ್ನು ಚುನಾವಣಾ ಅಸ್ತ್ರವನ್ನಾಗಿ ಬಳಕೆ ಮಾಡುತ್ತೀರಿ. ಚುನಾವಣೆ ಬಂದ ಕೂಡಲೇ ನಾಲ್ಕುಐದು ತಿಂಗಳ ಗೃಹಲಕ್ಷ್ಮೀ ಹಣ ಜಮೆ ಮಾಡುತ್ತೀರಿ. ನಿಯಮಿತವಾಗಿ ಪ್ರತೀ ತಿಂಗಳು ಜಮೆ ಮಾಡುತ್ತಿಲ್ಲ, ಯಾಕೆ? ಇದು ಚುನಾವಣಾ ಅಕ್ರಮ ಅಲ್ಲವೇ?
- ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 9 ಲೋಕಸಭೆ ಕ್ಷೇತ್ರಗಳಲ್ಲಿ ಮತಗಳ್ಳತನ ಆಗಿಲ್ಲವೇ? ಆಗಿಲ್ಲದಿದ್ದರೆ ಮತಗಳ್ಳರಿಗೆ ನಿಮ್ಮ ಮೇಲೆ ವಿಶೇಷ ಪ್ರೀತಿ ಯಾಕೆ?
- ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಸೇರಿ ಅನೇಕ ಕ್ಷೇತ್ರಗಳಲ್ಲಿ ಅತೀ ಕಡಿಮೆ ಅಂತರದಿಂದ ನಿಮ್ಮ ಶಾಸಕರು ಗೆದ್ದಿದ್ದಾರೆ. ಹಾಗಿದ್ದರೆ ಅವರೂ ಮತಗಳ್ಳತನ ಮಾಡಿಯೇ ಗೆಲುವು ಸಾಧಿಸಿದ್ದಾರೆಯೇ?
ನೀವು ಚುನಾವಣಾ ಆಯೋಗಕ್ಕೆ ಐದು ಪ್ರಶ್ನೆ ಕೇಳಿದ್ದೀರಿ. ನಾನೂ ನಿಮ್ಮನ್ನು ಐದು ಪ್ರಶ್ನೆ ಕೇಳುತ್ತೇನೆ. ಉತ್ತರಿಸಿ. ಎಲೆಕ್ಷನ್ ಕಮಿಷನ್ ಉತ್ತರ ಕೊಡಿ ಎಂದರೆ ನಾನು ನಿಮ್ಮಂತೆಯೇ ಜಾರಿಕೊಳ್ಳುವುದಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ರಮೇಶ್ ಗೌಡರು ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದರು.
ರಾಹುಲ್ ಗಾಂಧಿ ಅವರು ಲೋಕಸಭೆಯ ಪ್ರತಿಪಕ್ಷ ನಾಯಕ ಎಂಬುದನ್ನು ಮರೆತಿದ್ದಾರೆ. ಅವರು ಲೋಕಸಭೆಯಲ್ಲಿ ಈ ವಿಷಯವನ್ನು ಮಾತನಾಡಬೇಕೆ ಹೊರತು ಹಾದಿ ಬೀದಿಯಲ್ಲಿ ರಂಪ ಮಾಡಬಾರದು. ಬೆಂಗಳೂರಿಗೆ ಬಂದು ಅವರದೇ ಪಕ್ಷದ ಸರ್ಕಾರ ಇರುವ ರಾಜ್ಯದಲ್ಲಿ ಆಡಳಿತ ತಂತ್ರವನ್ನು ದುರುಪಯೋಗ ಮಾಡಿಕೊಂಡು ಪ್ರತಿಭಟನೆ ಪ್ರಹಸನ ನಡೆಸಿ ಹೋಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಜೆಡಿಎಸ್ ಹಾಗೂ ಬಿಜೆಪಿ ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸಿದೆವು. ಆದರೆ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಲು ಆಗಲಿಲ್ಲ. ಆದರೂ ನಾವು ಸಾಂವಿಧಾನಿಕ ಸಂಸ್ಥೆಯಾಗಿರುವ ಚುನಾವಣೆ ಆಯೋಗವನ್ನು ದೂರುವ ಕೆಲಸ ಮಾಡಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರು 136 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ದರು. ಇಷ್ಟು ಕರಾರುವಕ್ಕಾಗಿ ಸಂಖ್ಯೆ ಹೇಳಬೇಕು ಎಂದರೆ ಅವರೇನು ಬ್ರಹ್ಮನೇ. ಅವರು ಹೇಳಿದ ಪ್ರಕಾರವೇ 136 ಸ್ಥಾನ ಗೆದ್ದಿದ್ದಾರೆ. ಹಾಗಾದರೆ ಇವರೂ ರಿಗ್ಗಿಂಗ್ ಮಾಡಿ, ಮತಗಳ್ಳತನ ಮಾಡಿ ಗೆದ್ದಿದ್ದಾರಾ? ಎಂದು ಅವರು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿಯವರು ಅಧಿವೇಶನದಲ್ಲಿ ಇದೆಲ್ಲಾ ಮಾತಾಡಬಹುದಲ್ವಾ? ಅಲ್ಲಿ ಸಮಯ ಹಾಳು ಮಾಡಿ, ಹಾದಿಬೀದಿಯಲ್ಲಿ ಮಾತಾಡೋದು ಯಾಕೆ? ಅವರಿಗೆ ಕೇವಲ ಬಿಹಾರ ಚುನಾವಣೆಯಲ್ಲಿ ಜನರ ಗಮನ ಬೇರೆಡೆಗೆ ಸೆಳೆದು ಮತ ಗಳಿಕೆ ಮಾಡುವ ಏಕೈಕ ದುರುದ್ದೇಶದಿಂದ ಆಯೋಗದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಹಾರದಲ್ಲಿ ಸೋಲುವ ಹತಾಶೆ ಅವರನ್ನು ಕಾಡುತ್ತಿದೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಲೆಕ್ಕ ಸುಳ್ಳು
ರಾಹುಲ್ ಗಾಂಧಿ ಅಸತ್ಯದ ಮಾಹಿತಿ ಇಟ್ಟುಕೊಂಡು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರು ತಮ್ಮ ಪಕ್ಷ ಮತಗಳ್ಳತನದಲ್ಲಿ ತೊಡಗಿತ್ತು ಎಂಬುದನ್ನು ಮರೆಮಾಚುವ ದುರುದ್ದೇಶದಿಂದ ಜನರ ಗಮನ ಬೇರೆಡೆಗೆ ಸೆಳೆಯುವ ನಾಟಕ ಆಡುತ್ತಿದ್ದಾರೆ. ಶಿವಾಜಿನಗರ, ಸರ್ವಜ್ಞನಗರ ಸೇರಿದಂತೆ ನಗರದ ಹಲವಾರು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತಗಳ್ಳತನ ಮಾಡಿದೆ. ಅದಕ್ಕೆ ದಾಖಲೆಗಳು ಇವೆ ಎಂದ ಎಚ್.ಎಂ. ರಮೇಶ್ ಗೌಡ ಅವರು, ಮಾಧ್ಯಮಗೋಷ್ಟಿಯಲ್ಲಿ ಕೆಲ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಈ ಸುದ್ದಿಯನ್ನೂ ಓದಿ | Karnataka Rains: ನಾಳೆ ಕರಾವಳಿ ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್; ಭಾರಿ ಮಳೆ ಸಾಧ್ಯತೆ
ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಗೆದ್ದಿರುವ ಬಹುತೇಕ ವಿಧಾನಸಭೆ ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ. ತಾವು ಅಂತಹ ತಪ್ಪು ಮಾಡಿ ಆಯೋಗದ ಮೇಲೆ ಆರೋಪ ಮಾಡುತ್ತಿದೆ ಕಾಂಗ್ರೆಸ್. ಈ ದಾಖಲೆಗಳ ಬಗ್ಗೆ ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ನಾಯಕರು ಮಾತನಾಡಬೇಕು. ನಾನು ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಚರ್ಚೆಗೆ ಬರಲಿ, ನಾನು ತಯಾರಿದ್ದೇನೆ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ಸವಾಲು ಹಾಕಿದ್ದಾರೆ.