Vishnuvardhan Samadhi: ವಿಷ್ಣುವರ್ಧನ್ ಸಮಾಧಿ ತೆರವು ಗೊತ್ತಿರಲಿಲ್ಲ: ಅಳಿಯ ಅನಿರುದ್ಧ ಪ್ರತಿಕ್ರಿಯೆ
Aniruddha: ಬೆಂಗಳೂರಿನ ಕೆಂಗೇರಿಯಲ್ಲಿರುವ ಅಭಿಮಾನ್ ಸ್ಟುಡಿಯೋದಲ್ಲಿನ ನಟ ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ತೆರವು ಮಾಡಲಾಗಿದ್ದು, ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ವಿಷ್ಣುವರ್ಧನ್ ಅಳಿಯ ಅನಿರುದ್ಧ ಪ್ರತಿಕ್ರಿಯಿಸಿದ್ದು, ಈ ವಿಚಾರ ಗೊತ್ತೇ ಇರಲಿಲ್ಲ ಎಂದಿದ್ದಾರೆ.


ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿನ ನಟ ವಿಷ್ಣುವರ್ಧನ್ (Dr. Vishnuvardhan) ಅವರ ಸಮಾಧಿಯನ್ನು ರಾತ್ರೋರಾತ್ರಿ ತೆರವು ಮಾಡಲಾಗಿದ್ದು, ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಂಗೇರಿ ಬಳಿ ಇರುವ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಅವರ ಅಂತ್ಯ ಸಂಸ್ಕಾರ ನಡೆಸಲಾಗಿತ್ತು. ಅದೇ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕೆಂದು ಅಭಿಮಾನಿಗಳು ಆಗ್ರಹಿಸಿದ್ದರು. ಆದರೆ ಅದು ಹಿರಿಯ ನಟ ಬಾಲಕೃಷ್ಣ ಅವರಿಗೆ ಸೇರಿದ ಸ್ಥಳವಾಗಿದ್ದು, ಅಲ್ಲಿ ಸ್ಮಾರಕ ನಿರ್ಮಿಸಲು ಅವರ ಮಕ್ಕಳು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರ ಕೋರ್ಟ್ ಮೆಟ್ಟಿಲೇರಿ ಇದೀಗ ತೀರ್ಪು ಬಾಲಣ್ಣನ ಮಕ್ಕಳ ಪರವಾಗಿ ಬಂದಿದೆ. ಹೀಗಾಗಿ ಅಭಿಮಾನ್ ಸ್ಟುಡಿಯೋದಲ್ಲಿ ನಿರ್ಮಾನ ಮಾಡಿದ್ದ ಚಿಕ್ಕ ಮಂಟಪವನ್ನು ತೆರವುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಷ್ಣುವರ್ಧನ್ ಅಳಿಯ ಅನಿರುದ್ಧ (Aniruddha) ಪ್ರತಿಕ್ರಿಯಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ʼʼಈ ವಿಚಾರ ತಿಳಿದು ತುಂಬಾ ನೋವಾಗಿದೆ. ಈ ಥರ ಅವರು ಮಾಡಬಾರದಿತ್ತು. ಇಡೀ ಕರ್ನಾಟಕಕ್ಕೇ ಗೊತ್ತಿರುವ ವಿಷಯ ಇದು. ಆ ಜಾಗದ ಬಗ್ಗೆ ಅಭಿಮಾನಿಗಳ ಮನಸ್ಸಿನಲ್ಲಿ ಅಭಿಮಾನದ, ಪ್ರೀತಿಯ, ಗೌರವದ ಭಾವ ಇದೆ. ನಾನು ಕೂಡ ಹಲವು ಬಾರಿ ಹೇಳಿದ್ದೇನೆ. ಇಲ್ಲಿನ ಪುಣ್ಯಭೂಮಿ ಹಾಗೇ ಇರಲಿ. ಯಾಕೆಂದರೆ ಅಭಿಮಾನಿಗಳು ಸಾವಿರಾರು, ಲಕ್ಷಾಂತರ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಪೂಜೆ, ಗೌರವವನ್ನು ಸಲ್ಲಿಸುತ್ತಿದ್ದಾರೆʼʼ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Kichcha Sudeepa: ದೇವಸ್ಥಾನ ಒಡೆದಷ್ಟೇ ಸಂಕಟವಾಗಿದೆ; ವಿಷ್ಣುವರ್ಧನ್ ಸಮಾಧಿ ತೆರವಿಗೆ ಕಿಚ್ಚ ಸುದೀಪ್ ಆಕ್ರೋಶ
ಸಾಕಷ್ಟು ಅಂಖ್ಯೆಯ ಅಭಿಮಾನಿಗಳ ಆಗಮನ
ʼʼಮುಖ್ಯವಾಗಿ 2 ದಿನ ಇಲ್ಲಿಗೆ ಅತ್ಯಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಾರೆ. ಅವರ ಹುಟ್ಟುಹಬ್ಬವಾದ ಸೆಪ್ಟೆಂಬರ್ 18 ಮತ್ತು ಅವರ ಪುಣ್ಯ ಸ್ಮರಣೆಯ ದಿನವಾದ ಡಿಸೆಂಬರ್ 30ರಂದು ಜನಸಂದಣಿ ಹೆಚ್ಚಿರುತ್ತದೆ. ಇದನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದರ ಜತೆಗೆ ಸಾಕಷ್ಟು ಸಮಾಜ ಸೇವೆ ನಡೆಯುತ್ತದೆʼʼ ಎಂದು ತಿಳಿಸಿದ್ದಾರೆ.
ಬಾಲಣ್ಣ ಕುಟುಂಬಕ್ಕೆ ಮನವಿ
ʼʼಬಾಲಣ್ಣ ಅವರ ಕುಟುಂಬಸ್ಥರಲ್ಲಿ ನಾನು ಹಿಂದೆಯೂ ಮನವಿ ಮಾಡಿದ್ದೆ. ದಯವಿಟ್ಟು ಅಭಿಮಾನಿಗಳಿಗೆ ಇಲ್ಲಿಗೆ ಆಗಮಿಸಲು, ಪೂಜೆ ಸಲ್ಲಿಸಲು ಅವಕಾಶ ನೀಡಿ. ಪೂಜೆ ಸಲ್ಲಿಸುವುದಕ್ಕೆ ಅನುಮತಿ ನೀಡಿ ಎಂದು ಕೇಳಿಕೊಂಡಿದ್ದೆ. ಹೀಗೆ ಮಾಡುವುದಿಂದ ಕಲಾವಿದರ ಕುಟುಂಬದಿಂದ ಮತ್ತೊಬ್ಬ ಕಲಾವಿದನಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಈ ನಡೆ ಮಾದರಿಯಾಗುತ್ತದೆ ಎಂದು ಈ ಹಿಂದೆಯೇ ಹೇಳಿದ್ದೆ. ಆದರೆ ಈಗ ಈ ರೀತಿಯಾಗಿದ್ದು ತುಂಬಾ ನೋವು ತಂದಿದೆʼʼ ಎಂದಿದ್ದಾರೆ.
ತಮ್ಮ ಒಪ್ಪಿಗೆ ಮೇರೆಗೆ ಸಮಾಧಿ ತೆರವಾಗಿದೆ ಎನ್ನುವ ಆರೋಪವನ್ನು ನಿರಾಕರಿಸಿದ ಅವರು ಈ ಬಗ್ಗೆ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ʼʼನಾನು ಬಾಲಣ್ಣ ಅವರ ಕುಟುಂಬಕ್ಕೆ ಮನವಿ ಸಲ್ಲಿಸಿರುವ ವಿಡಿಯೊವನ್ನು ಈ ಹಿಂದೆ ಹಂಚಿಕೊಂಡಿದ್ದೆ. ಆದರೆ ಅದು ಜನಕ್ಕೆ ತಲುಪಿಲ್ಲ. ಹೀಗಾಗಿ ಪ್ರತಿಬಾರಿ ಏನಾದರೊಂದು ವಿವಾದವಾದಾಗ ನಮ್ಮನ್ನೇ ದೂಷಿಸುವ ಪ್ರವೃತ್ತಿ ಕಂಡುಬರುತ್ತಿದೆ. ಅದು ಯಾಕೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ ನಮ್ಮನ್ನು ವಿಲನ್ ಅಗಿ ಚಿತ್ರಿಸಿ ಆ ಮೂಲಕ ತಾವು ಹೀರೋಗಳಾಗಲು ಪ್ರಯತ್ನಿಸುತ್ತಿದ್ದಾರೆ. ಸಮಾಧಿ ತೆರವು ವಿಚಾರ ನನಗೆ ಗೊತ್ತೇ ಇರಲಿಲ್ಲʼʼ ಎಂದು ಹೇಳಿದ್ದಾರೆ.