Kichcha Sudeepa: ಹಿರಿಯ ನಟ ಬಾಲಣ್ಣ ಸಮಾಧಿಯನ್ನು ಅವರದೇ ಜಾಗದಿಂದ ಒಡೆದು ಹಾಕಲಾಗಿದೆ: ಕಿಚ್ಚ ಸುದೀಪ್ ಬೇಸರ
Dr. Vishnuvardhan: ಸ್ಯಾಂಡಲ್‌ವುಡ್‌ನ ಹಿಡಿಯ ನಟ ಡಾ. ವಿಷ್ಣುವರ್ದನ್ ಅವರ ಸಮಾಧಿಯನ್ನು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಿಂದ ತೆರವುಗೊಳಿಸಲಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಗೆ ಸಂಬಂಧಿಸಿ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದು, ಬಾಲಕೃಷ್ಣ ಅಂತಹ ಹಿರಿಯ ನಟರ ಸಮಾಧಿಯನ್ನು ಕೂಡ ಒಡೆದು ಹಾಕಿದ್ದಾರೆ ಎಂದು ಹೇಳಿದ್ದಾರೆ.


ಬೆಂಗಳೂರು: ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್ ಆಳಿದ್ದ, ಲಕ್ಷಾಂತರ ಅಭಿಮಾನಿಗಳ ಪಾಲಿನ ಸಾಹಸಸಿಂಹ ಡಾ. ವಿಷ್ಣುವರ್ಧನ್ (Dr. Vishnuvardhan) ಅವರ ಬೆಂಗಳೂರಿನ ಅಭಿಮಾನ್ ಸ್ಟುಡಿಯೊದಲ್ಲಿದ್ದ ಸ್ಮಾರಕವನ್ನು ರಾತ್ರೋರಾತ್ರಿ ನೆಲಸಮಗೊಳಿಸಲಾಗಿದ್ದು, ಈ ವಿಚಾರ ರಾಜ್ಯಾದ್ಯಂತ ತೀವ್ರ ಆಕ್ರೋಶ ಹುಟ್ಟುಹಾಕಿದೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಿಚ್ಚ ಸುದೀಪ್ (Kichcha Sudeepa), ವರ್ಷಾನುಗಟ್ಟಲೆಯಿಂದ ನಂಬಿ, ಮೊರೆ ಹೋದಂತಹ ದೇವಸ್ಥಾನವನ್ನು ಒಡೆದು ಹಾಕಿದಾಗ ಎಷ್ಟು ನೋವು ಆಗುತ್ತದೋ, ಅಷ್ಟೇ ನೋವು ಮತ್ತು ಸಂಕಟ ಆಗಿದೆ ಎಂದು ಭಾವುಕರಾಗಿದ್ದಾರೆ. ಜತೆಗೆ ಹಿರಿಯ ನಟ ಬಾಲಕೃಷ್ಣ ಅವರಿಗೆ ಸೇರಿದ ಜಾಗದಲ್ಲಿ ಅವರದ್ದೇ ಸಮಾಧಿಯನ್ನು ಕೂಡ ಒಡೆದು ಹಾಕಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದು, ವಿಷ್ಣು ಸ್ಮಾರಕ ಮರುವಸ್ಥಾಪನೆ ಮಾಡಲು ಮುಂದಾಗುವುದಾಗಿಯೂ ಘೋಷಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Actress Shruthi: ವಿಷ್ಣುವರ್ಧನ್ ಸಮಾಧಿಗೆ ನನ್ನ ಜಾಗವನ್ನೇ ಕೊಡುತ್ತಿದ್ದೆ: ನಟಿ ಶ್ರುತಿ
ಸುದೀಪ್ ಹೇಳಿದ್ದೇನು?
ʼʼನಾನು ಕೇಳ್ಪಟ್ಟೆ, ಬಾಲಕೃಷ್ಣ ಅಂತಹ ಹಿರಿಯ ನಟರ ಸಮಾಧಿಯನ್ನು ಕೂಡ ಒಡೆದು ಹಾಕಿದ್ದಾರೆ. ಅಲ್ಲಿದಂತಹ ಒಂದು ಗಣಪತಿ ದೇವಸ್ಥಾನವೂ ಈಗಲ್ಲಿ ಇಲ್ಲ. ವಿಷ್ಣು ಅವರ ಸ್ಮಾರಕ ಕೂಡ ಅಲ್ಲಿ ಇಲ್ಲ ಅಂದರೆ ಏನು ಅರ್ಥ? ಮನುಷ್ಯನ ಭಾವನೆಗಳಿಗಿಂತ, ಗೌರವಕ್ಕಿಂತ, ಅಭಿಮಾನಕ್ಕಿಂತ, ಈ ಒಂದು ಭೂಮಿ ವ್ಯವಹಾರ ಅಷ್ಟು ದೊಡ್ಡದಾಯಿತಾ? ಹಣ ನಮಗೆ ಅಷ್ಟು ಮುಖ್ಯ ಅಲ್ಲ. ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಇದು ನನ್ನ ವಿನಂತಿ. ನ್ಯಾಯಾಲಯಕ್ಕೆ ಹೋಗುವುದಾದರೆ ನಾನೂ ಬರಲು ಸಿದ್ಧ. ಸರ್ಕಾರ, ನ್ಯಾಯಾಲಯ ಮತ್ತು ಆ ಭೂಮಿ ಖರೀದಿ ಮಾಡಿರುವವರಲ್ಲಿ ನನ್ನದೊಂದು ಮನವಿ- ನಿಮಗೆ ಏನು ಹಣಕಾಸು ಬೇಕೋ, ಅದನ್ನು ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ. ನಾನೇ ಮುಂದೆ ನಿಂತು ಅದನ್ನು ಮತ್ತೆ ಒಂದು ಸ್ಮಾರಕವಾಗಿ ಮರುಸ್ಥಾಪನೆ ಮಾಡುವುದಕ್ಕೆ ಮುಂದಾಗಿತ್ತೇನೆ. ಅದಕ್ಕೆ ಒಂದು ಅವಕಾಶ ಮಾಡಿ ಕೊಡಿ. ಅವರು ನಮ್ಮ ಎದೆಯ ಒಳಗೆ ಸದಾ ಇರುತ್ತಾರೆ ನಿಜ. ಹಾಗಂತ ಪ್ರಾರ್ಥನೆ, ಗೌರವಕ್ಕೆ ಸಂಕೇತವಾಗಿ ಒಂದು ಸ್ಥಳ ಬೇಕು. ಆ ಪ್ರೀತಿಗೆ, ಪ್ರೇಮಕ್ಕೆ, ಅಭಿಮಾನಕ್ಕೆ ದ್ರೋಹ ಮಾಡಬೇಡಿ ಅಂತ ನಾನು ವಿನಂತಿ ಮಾಡುತ್ತೇನೆʼʼ ಎಂದು ಸುದೀಪ್ ಬರೆದುಕೊಂಡಿದ್ದಾರೆ.
ಏನಿದು ವಿವಾದ?
2009ರ ಡಿಸೆಂಬರ್ 30ರಂದು ಡಾ. ವಿಷ್ಣುವರ್ಧನ್ ನಿಧನರಾದಾಗ ಬೆಂಗಳೂರಿನ ಕೆಂಗೇರಿ ಬಳಿ ಇರುವ ಅಭಿಮಾನ್ ಸ್ಟುಡಿಯೊದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಅದೇ ಸ್ಥಳದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಿಸಬೇಕು ಎನ್ನುವುದು ಅವರ ಅಭಿಮಾನಿಗಳ ಆಗ್ರಹ. ಅಲ್ಲಿ ಚಿಕ್ಕ ಸ್ಮಾರಕ್ಕವೂ ನಿರ್ಮಾಣವಾಗಿತ್ತು. ಆದರೆ ಅದು ಹಿರಿಯ ನಟ ಬಾಲಕೃಷ್ಣ ಅವರಿಗೆ ಸೇರಿದ ಜಾಗವಾಗಿದ್ದು, ಅಲ್ಲಿ ಸ್ಮಾರಕ ನಿರ್ಮಾಣ ಮಾಡಲು ಬಾಲಣ್ಣ ಅವರ ಮಕ್ಕಳು ವಿರೋಧ ವ್ಯಕ್ತಪಡಿಸಿದರು. ವಿವಾದ ಕೋರ್ಟ್ ಮೆಟ್ಟಿಲೇರಿತು. ಸುಮಾರು 16 ವರ್ಷ ವಾದ-ಪ್ರತಿವಾದ ನಡೆದು ಇದೀಗ ಆ ಜಾಗ ಬಾಲಣ್ಣ ಅವರ ಮಕ್ಕಳಿಗೆ ಸೇರಿದ್ದ ಎಂದು ತೀರ್ಪು ಹೊರ ಬಂದಿದೆ. ಅವರ ಈ ಜಾಗವನು ಮಾರಾಟ ಮಾಡುತ್ತಿದ್ದು, ಹೀಗಾಗಿ ರಾತ್ರೋರಾತ್ರಿ ವಿಷ್ಣುವರ್ಧನ್ ನೆನಪಿಗಾಗಿ ನಿರ್ಮಿಸಿದ ಚಿಕ್ಕ ಮಂಟಪ ತೆರವು ಮಾಡಲಾಗಿದೆ.