ರಾಜ್ಯದಲ್ಲಿ ಚಳಿ ಅಬ್ಬರ: ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣಹವೆ ಮುಂದುವರಿಕೆ
ರಾಜ್ಯಾದ್ಯಂತ ಚಳಿಗಾಲದ ತೀವ್ರತೆ ಹೆಚ್ಚಾಗಿದ್ದು, ಇಂದು (ನವೆಂಬರ್ 22) ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಸಂಪೂರ್ಣ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಇಂದಿಗೆ ರಾಜ್ಯದ ಯಾವುದೇ ಭಾಗಕ್ಕೆ ಮಳೆ ಅಥವಾ ಪ್ರತಿಕೂಲ ಹವಾಮಾನದ ಎಚ್ಚರಿಕೆ ನೀಡಲಾಗಿಲ್ಲ.
ಸಂಗ್ರಹ ಚಿತ್ರ -
ಬೆಂಗಳೂರು: ರಾಜ್ಯಾದ್ಯಂತ ಚಳಿಗಾಲದ ತೀವ್ರತೆ ಹೆಚ್ಚಾಗಿದ್ದು, ಇಂದು (ನವೆಂಬರ್ 22) ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಸಂಪೂರ್ಣ ಒಣಹವೆ ಮುಂದುವರಿಯಲಿದೆ ಎಂದು (Karnataka Weather) ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಇಂದಿಗೆ ರಾಜ್ಯದ ಯಾವುದೇ ಭಾಗಕ್ಕೆ ಮಳೆ ಅಥವಾ ಪ್ರತಿಕೂಲ ಹವಾಮಾನದ ಎಚ್ಚರಿಕೆ ನೀಡಲಾಗಿಲ್ಲ. ಆದರೆ, ಬಂಗಾಳಕೊಲ್ಲಿಯಲ್ಲಿನ ವಾಯುಭಾರ ವ್ಯತ್ಯಾಸದಿಂದಾಗಿ ನಾಳೆಯಿಂದ (ನ.23) ದಕ್ಷಿಣ ಒಳನಾಡು ಹಾಗೂ ನ.24ರಿಂದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಶುಭ್ರ ಆಕಾಶ ಹಾಗೂ ಒಣಹವೆ ಇರಲಿದ್ದು, ಮಳೆಯ ಸಾಧ್ಯತೆ ಇಲ್ಲ. ಮುಂಜಾನೆ ಹಾಗೂ ರಾತ್ರಿ ವೇಳೆ ತಂಪಾದ ಗಾಳಿ ಬೀಸಲಿದ್ದು, ಹಗಲಿನಲ್ಲಿ ಬಿಸಿಲು ಮತ್ತು ಆರ್ದ್ರತೆಯಿಂದ ಕೂಡಿದ ವಾತಾವರಣ ಇರಲಿದೆ. ಕಾರವಾರ ಮತ್ತು ಹೊನ್ನಾವರ ಭಾಗಗಳಲ್ಲಿ ಕನಿಷ್ಠ ತಾಪಮಾನವು ವಾಡಿಕೆಗಿಂತ ಗಣನೀಯವಾಗಿ ಇಳಿಕೆಯಾಗಿದೆ. ಸಮುದ್ರದಲ್ಲಿ ಸದ್ಯಕ್ಕೆ ಯಾವುದೇ ಪ್ರತಿಕೂಲ ಹವಾಮಾನವಿಲ್ಲದ ಕಾರಣ ಮೀನುಗಾರರಿಗೆ ಯಾವುದೇ ಎಚ್ಚರಿಕೆ ನೀಡಲಾಗಿಲ್ಲ.
ಬೆಳಗಾವಿ, ಧಾರವಾಡ, ಕಲಬುರಗಿ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇಂದು ಸಂಪೂರ್ಣ ಒಣಹವೆ ಇರಲಿದ್ದು, ಮುಂಜಾನೆ ವೇಳೆ ಮಂಜು ಕವಿದ ವಾತಾವರಣ ಕಂಡುಬರಲಿದೆ. ಈ ಭಾಗದಲ್ಲಿ ಚಳಿಯ ಪ್ರಮಾಣ ತೀವ್ರಗೊಂಡಿದ್ದು, ಬೆಳಗಾವಿ ವಿಮಾನ ನಿಲ್ದಾಣ, ವಿಜಯಪುರ, ಬಾಗಲಕೋಟೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು ವಾಡಿಕೆಗಿಂತ ಬಹಳಷ್ಟು ಕಡಿಮೆಯಾಗಿದೆ. ಧಾರವಾಡ, ಗದಗ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲೂ ತಾಪಮಾನ ಕುಸಿತದಿಂದಾಗಿ ಜನರು ಚಳಿಗೆ ತತ್ತರಿಸುವಂತಾಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ತುಮಕೂರು, ಹಾಸನ, ಕೊಡಗು, ಶಿವಮೊಗ್ಗ ಸೇರಿದಂತೆ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಇಂದು ಒಣಹವೆ ಮುಂದುವರಿಯಲಿದೆ. ದಾವಣಗೆರೆಯಲ್ಲಿ ಕನಿಷ್ಠ ತಾಪಮಾನವು ತೀವ್ರವಾಗಿ ಕುಸಿದಿದ್ದು, ರಾಜ್ಯದಲ್ಲೇ ಅತ್ಯಂತ ಕಡಿಮೆ (ಸುಮಾರು 8°C ಆಸುಪಾಸು) ದಾಖಲಾಗಿದೆ. ಬೆಂಗಳೂರುಮೈಸೂರು, ಚಿತ್ರದುರ್ಗ, ಮಂಡ್ಯ ಮತ್ತು ಶಿವಮೊಗ್ಗದಲ್ಲೂ ಕನಿಷ್ಠ ತಾಪಮಾನ ವಾಡಿಕೆಗಿಂತ ಕಡಿಮೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 29°C ಹಾಗೂ ಕನಿಷ್ಠ 18°C ತಾಪಮಾನ ದಾಖಲಾಗುವ ನಿರೀಕ್ಷೆಯಿದೆ.