ವಾರದ ಬಳಿಕ ಕಬ್ಬು ಬೆಳೆಗಾರರ ಹೋರಾಟ ಅಂತ್ಯ; ಅ.26ರ ದೆಹಲಿ ಸಭೆಯ ನಿರ್ಧಾರದತ್ತ ರೈತರ ಚಿತ್ತ
Sugarcane farmers protest: ನ.26ರಂದು ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಕಬ್ಬಿನ ದರ ಸೇರಿದಂತೆ ಪ್ರಮುಖ ಬೇಡಿಕೆಗಳ ಕುರಿತು ನಿರ್ಧಾರವಾಗುವ ನಿರೀಕ್ಷೆಯಿದ್ದು, ಅಲ್ಲಿ ನಿಗದಿಯಾಗುವ ದರವನ್ನೇ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳಿಗೂ ಅನ್ವಯಿಸಬೇಕು ಎಂದು ಕಬ್ಬು ಬೆಳೆಗಾರರು ಆಗ್ರಹಿಸಿದ್ದಾರೆ.
-
ವಿಶ್ವವಾಣಿ ಸುದ್ದಿಮನೆ, ಕಲಬುರಗಿ: ಕಬ್ಬಿಗೆ ನ್ಯಾಯಯುತ ಬೆಲೆ, ತೂಕ–ರಿಕವರಿಯಲ್ಲಿ ಪಾರದರ್ಶಕತೆ ಹಾಗೂ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನಗರದ ರಾಮಮಂದಿರ ವೃತ್ತದ ಬಳಿ ಏಳು ದಿನಗಳಿಂದ ನಡೆಯುತ್ತಿದ್ದ ಕಬ್ಬು ಬೆಳೆಗಾರರ ಹೋರಾಟಕ್ಕೆ (Sugarcane farmers protest) ಸೋಮವಾರ ವಿರಾಮ ನೀಡಲಾಯಿತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಭರವಸೆ ಹಾಗೂ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸುವ ವಿಶ್ವಾಸದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಹಿಂಪಡೆದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಎಂ. ಸುಬೇದಾರ್ ನೇತೃತ್ವದಲ್ಲಿ ರೈತ ಮುಖಂಡರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರಿಗೆ ಮನವಿ ಸಲ್ಲಿಸಿದರು. ನ.26ರಂದು ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಕಬ್ಬಿನ ದರ ಸೇರಿದಂತೆ ಪ್ರಮುಖ ಬೇಡಿಕೆಗಳ ಕುರಿತು ನಿರ್ಧಾರವಾಗುವ ನಿರೀಕ್ಷೆಯಿದ್ದು, ಅಲ್ಲಿ ನಿಗದಿಯಾಗುವ ದರವನ್ನೇ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳಿಗೂ ಅನ್ವಯಿಸಬೇಕು ಎಂದು ಆಗ್ರಹಿಸಿದರು.
ಕಬ್ಬಿಗೆ ಟನ್‌ಗೆ ₹5,500, ತೊಗರಿಗೆ ಕ್ವಿಂಟಲ್‌ಗೆ ₹15 ಸಾವಿರ, ಸಕ್ಕರೆಗೆ ಕೆ.ಜಿ.ಗೆ ₹60 ನಿಗದಿಪಡಿಸಬೇಕು. ಇತರ ಬೆಳೆಗಳಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ವೈಜ್ಞಾನಿಕ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು. ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚ, ಕಾರ್ಖಾನೆಗಳಲ್ಲಿನ ತೂಕ–ರಿಕವರಿ ವ್ಯತ್ಯಾಸ, ಎಥನಾಲ್ ಕೋಟಾ ಹಾಗೂ ವಿದ್ಯುತ್‌ನಿಂದ ಹಾನಿಗೊಳಗಾದ ಕಬ್ಬಿಗೆ ಪರಿಹಾರ ನೀಡುವಂತೆಯೂ ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಇಕ್ರಂ ಶರೀಫ್, ರೈತರೊಂದಿಗೆ ಹತ್ತು ದಿನಗಳ ಹಿಂದೆಯೇ ಸಭೆ ನಡೆಸಿ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ. ರೈತರ ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದೆ ಸಮರ್ಥವಾಗಿ ಮಂಡಿಸಲಾಗುವುದು. ಎಲ್ಲ ರೈತರಿಗೂ ನ್ಯಾಯವಾಗುವಂತೆ ಸಮಾನ ದರ ನಿಗದಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ಮಳೆ–ನೀರಿನ ಕೊರತೆ, ಗೊಬ್ಬರ, ಬೀಜ ಹಾಗೂ ಕೀಟನಾಶಕಗಳ ಬೆಲೆ ಏರಿಕೆಯ ನಡುವೆ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ. ತೊಗರಿ ಸೇರಿದಂತೆ ವಿವಿಧ ಬೆಳೆಗಾರರ ಸಮಸ್ಯೆಗಳನ್ನೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ರೈತರ ಬೆವರಿಗೆ ಬೆಲೆ ದೊರೆಯಬೇಕು. ರೈತರಿಗೆ ಅನ್ಯಾಯವಾಗಲು ಜಿಲ್ಲಾಡಳಿತ ಬಿಡುವುದಿಲ್ಲ ಎಂದು ಹೇಳಿದರು.
ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಡಿಸಿಪಿ ಶಾಲೂ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಜೆಸ್ಕಾಂ ಮುಖ್ಯ ಎಂಜಿನಿಯರ್ ವೆಂಕಟೇಶ್, ರೈತ ಮುಖಂಡರಾದ ಗುಳ್ಳಪ್ಪಗೌಡ ಪಾಟೀಲ್, ಬಸವರಾಜ ಕೋರಿ, ವಿಜಯಕುಮಾರ ಮುಷ್ಟೂರು, ವೀರೇಶ ದೊಡ್ಡಮನಿ, ಜಗದೀಶ ಪಾಟೀಲ ರಾಜಾಪುರ, ಸಿದ್ದರಾಮ ಪಾಟೀಲ್ ಮಂಗಲಗಿ, ವೀರೇಶ್ ಸಾಹುಕಾರ, ಉಮಾಪತಿ ಪಾಟೀಲ, ರಮೇಶ ಹೂಗಾರ, ಎಂ.ಎಸ್. ಪಾಟೀಲ ನರಿಬೋಳ, ಮಲ್ಲಿಕಾರ್ಜುನ ಸಾರವಾಡ, ಸಿದ್ರಾಮಯ್ಯ ಹಿರೇಮಠ, ಸಿದ್ದು ಎಸ್.ಎಲ್., ಕರೆಪ್ಪ ಕರಗೊಂಡ, ಅಶೋಕ ಹೂಗಾರ, ಬಸವರಾಜ ಚಾನಕೋಟೆ, ಶರಣಗೌಡ ಮಾಲಿಪಾಟೀಲ, ಬಸವಾಮೃತ ಗೋರಕ್ಷಕ ಶರಣು, ಮಹಾನಂದ ಪಡಶೆಟ್ಟಿ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.