ಕರಾವಳಿಯ ಗಂಡುಕಲೆ ಕಂಡು ಮಂತ್ರಮುಗ್ಧರಾದ ಕಲಬುರಗಿ ಜನ: ‘ಕಾಂತಾರ ಮಣಿ’ಯಲ್ಲಿ ದೈವ–ಮಾನವ ಸಂಬಂಧದ ರೋಚಕ ಅನಾವರಣ
ದಕ್ಷಿಣ ಕನ್ನಡ ಸಂಘ, ಹೋಟೆಲ್, ಬೇಕರಿ ಹಾಗೂ ವಸತಿಗೃಹ ಮಾಲೀಕರ ಸಂಘದ ಸಹಯೋಗಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ಶಿವಾನುಭವ ಮಂಟಪದಲ್ಲಿ ಯಕ್ಷಗಾನ ಆಯೋಜಿಸಲಾಗಿತ್ತು. ಸುಮಾರು ಮೂರು ಗಂಟೆಗಳ ಕಾಲ ನಡೆದ ಪ್ರದರ್ಶನದಲ್ಲಿ ಕರಾವಳಿಯ ಗಂಡುಕಲೆಯ ವೈಭವವನ್ನು ಕಲಬುರಗಿ ಜನ ಕಣ್ತುಂಬಿಕೊಂಡರು.
-
ಲಿಂ. ಶ್ರೀ ಡಾ. ಶರಣಬಸವಪ್ಪ ಅಪ್ಪಾಜಿ ಪ್ರಥಮ ಪುಣ್ಯಸ್ಮರಣೋತ್ಸವ
ಕಲಬುರಗಿ: ಕರಾವಳಿಯ ಕಡಲ ಅಲೆಗಳ ಸದ್ದು, ಚೆಂಡೆ–ಮದ್ದಳೆಯ ಗಂಭೀರ ನಾದ ಹಾಗೂ ಗೆಜ್ಜೆಗಳ ಝೇಂಕಾರ ಕಲಬುರಗಿಯ ನೆಲದಲ್ಲಿ ಅನುರಣಿಸಿತು. ಬಣ್ಣಬಣ್ಣದ ವೇಷಭೂಷಣ, ಭವ್ಯ ಕಿರೀಟ, ಮುಖವರ್ಣಿಕೆ ಮತ್ತು ಭಾಗವತರ ಕಂಠದಿಂದ ಹೊಮ್ಮಿದ ಪದ್ಯಗಳ ಸೊಗಡಿಗೆ ಕಲಬುರಗಿ ಜನ ಮಂತ್ರಮುಗ್ಧರಾದರು. ಲಿಂ. ಶ್ರೀ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಪ್ರಥಮ ಪುಣ್ಯ ಸ್ಮರಣೋತ್ಸವದ ಅಂಗವಾಗಿ ನಡೆದ ‘ಕಾಂತಾರ ಮಣಿ’ ಯಕ್ಷಗಾನ ಪ್ರದರ್ಶನ ಕರಾವಳಿ–ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಸೇತುವೆಯಾಗಿ ಗಮನ ಸೆಳೆಯಿತು.
ದಕ್ಷಿಣ ಕನ್ನಡ ಸಂಘ, ಹೋಟೆಲ್, ಬೇಕರಿ ಹಾಗೂ ವಸತಿಗೃಹ ಮಾಲೀಕರ ಸಂಘದ ಸಹಯೋಗಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ಶಿವಾನುಭವ ಮಂಟಪದಲ್ಲಿ ಯಕ್ಷಗಾನ ಆಯೋಜಿಸಲಾಗಿತ್ತು. ಸುಮಾರು ಮೂರು ಗಂಟೆಗಳ ಕಾಲ ನಡೆದ ಪ್ರದರ್ಶನದಲ್ಲಿ ಕರಾವಳಿಯ ಗಂಡುಕಲೆಯ ವೈಭವವನ್ನು ಕಲಬುರಗಿ ಜನ ಕಣ್ತುಂಬಿಕೊಂಡರು.
ಇದನ್ನೂ ಓದಿ: K V Chandramouli Column: ಕಾವೇರಿ: 2033ರ ಮರು ಪರಿಶೀಲನೆಗೆ ಕರ್ನಾಟಕ ಈಗಲೇ ಸಜ್ಜಾಗಬೇಕಿದೆ
ದೈವ–ಮಾನವ ನಂಬಿಕೆಯ ಕಥನ
ಪ್ರಸಿದ್ಧ ಕೃತಿಕಾರ ಕೊಕ್ಕರ್ಣೆ ಸದಾಶಿವ ಅಮೀನ್ ರಚಿಸಿರುವ ‘ಕಾಂತಾರ ಮಣಿ’ ಪ್ರಸಂಗವು ದೈವ–ಮಾನವ ಸಂಬಂಧದ ಸುತ್ತ ಹೆಣೆದಿರುವ ಕಥನ. ಕಾಡು, ನೆಲ, ನೀರು ಮತ್ತು ಅಲ್ಲಿನ ಜನಜೀವನ ದೊಂದಿಗೆ ಬೆಸೆದುಕೊಂಡಿರುವ ದೈವ ನಂಬಿಕೆ, ಸಂಪ್ರದಾಯ ಹಾಗೂ ಆಧುನಿಕತೆಯ ಸಂಘರ್ಷ ಕಥೆಯ ಪ್ರಮುಖ ಎಳೆಗಳಾಗಿವೆ.
ಮಾನವನ ಅಹಂಕಾರ ಮತ್ತು ದೈವಿಕ ಶಕ್ತಿಯ ನಡುವಿನ ಸಂಘರ್ಷ, ನಂಬಿಕೆಯ ಪರೀಕ್ಷೆ, ಭಕ್ತಿ, ತ್ಯಾಗ ಮತ್ತು ಅಂತಿಮವಾಗಿ ಸತ್ಯದ ಗೆಲುವನ್ನು ಯಕ್ಷಗಾನದ ವಿಶಿಷ್ಟ ಶೈಲಿಯಲ್ಲಿ ಕಟ್ಟಿಕೊಡ ಲಾಗಿದೆ. ಕರಾವಳಿಯ ಜನಜೀವನದಲ್ಲಿ ದೈವಕ್ಕೆ ಇರುವ ಸ್ಥಾನ, ಆರಾಧನೆಯ ಹಿಂದಿರುವ ನಂಬಿಕೆ ಮತ್ತು ಸಂಸ್ಕೃತಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಆಶಯವೂ ಪ್ರಸಂಗ ದಲ್ಲಿದೆ.
ಚೆಂಡೆ ನಾದಕ್ಕೆ ಹೆಜ್ಜೆ ಹಾಕಿದ ಕಲಬುರಗಿ
ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ.), ನಡೂರು ತಂಡದ ಕಲಾವಿದರು ರಂಗದಲ್ಲಿ ತಮ್ಮ ಪ್ರತಿಭೆ ಮೆರೆದರು. ಗಣೇಶ್ ಆಚಾರ್ಯ ಬಿಲ್ಲಾಡಿ, ಸತೀಶ್ ಹಟ್ಟಿಯಂಗಡಿ ಸೇರಿದಂತೆ ಪ್ರಸಿದ್ಧ ಬಡಗುತಿಟ್ಟು ಕಲಾವಿದರ ಅಭಿನಯ, ಗಾಯನ, ಸಂಭಾಷಣೆ ಹಾಗೂ ವೇಷಭೂಷಣ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಭಾಗವತರ ಪದ್ಯಕ್ಕೆ ಮದ್ದಳೆಯ ಮಿಡಿತ, ಚೆಂಡೆಯ ಅಬ್ಬರಕ್ಕೆ ಪಾತ್ರಧಾರಿಗಳ ಗಂಭೀರ ಹೆಜ್ಜೆ ಹಾಗೂ ಸಂಭಾಷಣೆಯ ಏರಿಳಿತ—ಇವೆಲ್ಲವೂ ಶಿವಾನುಭವ ಮಂಟಪವನ್ನು ಕೆಲಕಾಲ ಕರಾವಳಿ ಯ ಯಕ್ಷಗಾನ ರಂಗಸ್ಥಳವನ್ನೇ ಆಗಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿರುವ ಪ್ರಸಂಗದ ಪದ್ಯ ಮತ್ತು ಸಂಭಾಷಣೆಗಳಿಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.⸻
‘ಮುಂದಿನ ಪೀಳಿಗೆಗೆ ದೈವದ ವೈಶಿಷ್ಟ್ಯ ಪರಿಚಯವಾಗಲಿ’
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಯಕ್ಷಗಾನ ಮೇಳ ಬಾರಿಸಿ, ಗಣಪತಿ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ‘ಕಾಂತಾರ ಮಣಿ’ ಪ್ರದರ್ಶನಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಲಿಂ. ಶ್ರೀ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಪ್ರಥಮ ಪುಣ್ಯಸ್ಮರಣೆಯ ಅಂಗವಾಗಿ ಐದು ದಿನಗಳ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ, ಬೈಕ್ ರ‍್ಯಾಲಿ, ದಾಸೋಹ ಹಾಗೂ ಇಷ್ಟಲಿಂಗ ಪೂಜೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದಿವೆ. ಇದರ ಭಾಗವಾಗಿ ದಕ್ಷಿಣ ಕನ್ನಡದ ಕಲೆ, ಆಚಾರ–ವಿಚಾರ ಮತ್ತು ಸಾಂಸ್ಕೃತಿಕ ವೈಭವವನ್ನು ಕಲಬುರಗಿ ಜನರಿಗೆ ಪರಿಚಯಿಸುವ ಉದ್ದೇಶದಿಂದ ಯಕ್ಷಗಾನ ಆಯೋಜಿಸಲಾಗಿದೆ ಎಂದರು.
ಈ ವೇಳೆ ನೀಲಾಂಬಿಕ ಪೊಲೀಸ್ ಪಾಟೀಲ್ ಶೇರಿಕಾರ್, ಸುರೇಶ್ ನಂದಗಾಂವ್, ದಕ್ಷಿಣ ಕನ್ನಡ ಸಂಘದ ಅಧ್ಯಕ್ಷ ಚಂದ್ರಶೇಖರ್, ಹೋಟೆಲ್ ಅಸೋಸಿಯೇಷನ್‌ನ ನರಸಿಂಹ ಮೆಂಡನ್, ಸದಾನಂದ ಪೆರ್ಲ, ಮಾಲ ಕಣ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
![]()
ದೈವದ ಕುರಿತ ನಂಬಿಕೆ, ಅದರ ವೈಶಿಷ್ಟ್ಯ ಹಾಗೂ ಕರಾವಳಿಯ ವಿಶಿಷ್ಟ ಸಂಸ್ಕೃತಿಯ ಆಳವನ್ನು ಮುಂದಿನ ಪೀಳಿಗೆ ತಿಳಿದುಕೊಳ್ಳಬೇಕು. ಇಂತಹ ಕಲೆಗಳ ಪ್ರದರ್ಶನದ ಮೂಲಕ ವಿವಿಧ ಭಾಗಗಳ ಸಂಸ್ಕೃತಿಗಳ ನಡುವೆ ಬೆಸುಗೆ ಬಲಪಡಿಸಬೇಕು.
- ಬಸವರಾಜ ದೇಶಮುಖ, ಕಾರ್ಯದರ್ಶಿ, ಶರಣಬಸವೇಶ್ವರ ವಿಷ್ಯವರ್ಧಕ ಸಂಘ