ಕಲಬುರಗಿ ಪ್ರಬುದ್ಧ ಅಕಾಡೆಮಿಯ 2 ಕೋಟಿ ವೆಚ್ಚದ ಪಾರ್ಕಿಂಗ್ ಶೆಡ್ ಧರೆಗೆ; ಕಳಪೆ ಕಾಮಗಾರಿ ಆರೋಪ
ಕಲಬುರಗಿಯಲ್ಲಿ ಜನವರಿಯಲ್ಲಷ್ಟೇ ಉದ್ಘಾಟನೆಗೊಂಡಿದ್ದ ಈ ಅಕಾಡೆಮಿಯ ಕಟ್ಟಡದ ಛಾವಣಿ ಒಂದು ತಿಂಗಳ ಹಿಂದೆಯಷ್ಟೇ ಉದುರಿ ಬಿದ್ದಿತ್ತು. ಆ ಘಟನೆ ಮಾಸುವ ಮುನ್ನವೇ ಈಗ ಪಾರ್ಕಿಂಗ್ ಶೆಡ್ ಕುಸಿದಿದೆ. ಇದರಿಂದ ಕಟ್ಟಡದ ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಮೂಡಿವೆ.
ಕಲಬುರಗಿಯ ಪ್ರಬುದ್ಧ ಅಕಾಡೆಮಿ ಆವರಣದ ಪಾರ್ಕಿಂಗ್ ಶೆಡ್ ಕುಸಿದಿರುವುದು. -
ಕಲಬುರಗಿ: ನಗರದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ನಿರ್ಮಿಸಲಾದ 'ಪ್ರಬುದ್ಧ ಅಕಾಡೆಮಿ' (Prabuddha Academy) ಆವರಣದಲ್ಲಿ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಪಾರ್ಕಿಂಗ್ ಶೆಡ್ (parking shed) ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ ಮತ್ತು ಗಾಳಿಗೆ ನೆಲಸಮವಾಗಿದೆ. ಈ ಘಟನೆಯು ಕಟ್ಟಡದ ಕಾಮಗಾರಿಯ ಗುಣಮಟ್ಟದ ಕುರಿತು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಕೆಆರ್‌ಐಡಿಎಲ್ ವತಿಯಿಂದ ನಿರ್ಮಿಸಲಾಗಿದ್ದ ಈ ಶೆಡ್ ಕುಸಿಯುವ ಸಮಯದಲ್ಲಿ ಸ್ಥಳದಲ್ಲಿ ವಿದ್ಯಾರ್ಥಿಗಳಾಗಲಿ ಅಥವಾ ವಾಹನಗಳಾಗಲಿ ಇಲ್ಲದ ಕಾರಣ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಜನವರಿಯಲ್ಲಷ್ಟೇ ಉದ್ಘಾಟನೆಗೊಂಡಿದ್ದ ಈ ಅಕಾಡೆಮಿಯ ಕಟ್ಟಡದ ಛಾವಣಿ ಒಂದು ತಿಂಗಳ ಹಿಂದೆಯಷ್ಟೇ ಉದುರಿ ಬಿದ್ದಿತ್ತು. ಆ ಘಟನೆ ಮಾಸುವ ಮುನ್ನವೇ ಈಗ ಪಾರ್ಕಿಂಗ್ ಶೆಡ್ ಕುಸಿದಿರುವುದು ಆಡಳಿತ ಮಂಡಳಿಯ ನಿದ್ದೆಗೆಡಿಸಿದೆ.
ಪ್ರತಿಭಟನೆ ಮತ್ತು ತನಿಖೆಗೆ ಆಗ್ರಹ:
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಅವ್ವಣ್ಣಾ ಮ್ಯಾಕೇರಿ ಮಾತನಾಡಿ, "ಇಡೀ ಅಕಾಡೆಮಿಯ ಕಾಮಗಾರಿ ಅತ್ಯಂತ ಕಳಪೆಯಾಗಿದೆ ಎಂಬುದಕ್ಕೆ ಈ ಸರಣಿ ಅಪಘಾತಗಳೇ ಸಾಕ್ಷಿ. ಕಳೆದ ಎರಡು ವಾರಗಳ ಹಿಂದೆ ಉಪಹಾರ ಕೊಠಡಿಯ ಛಾವಣಿ ಕುಸಿದ ಹಿನ್ನೆಲೆಯಲ್ಲಿ ಎಇಇ ಸೌರಭ್ ಭೀಮನ್ ಅವರನ್ನು ಅಮಾನತುಗೊಳಿಸಲಾಗಿತ್ತು. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ," ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಕೇಂದ್ರವು ಉದ್ಘಾಟನೆಯಾದ ಕೆಲವೇ ತಿಂಗಳಲ್ಲಿ ಶಿಥಿಲಗೊಳ್ಳುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸ್ಪರ್ಧಾ ಆಕಾಂಕ್ಷಿಗಳ ಹಿತದೃಷ್ಟಿಯಿಂದ ಇಡೀ ಕಟ್ಟಡದ ಗುಣಮಟ್ಟವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಅಮಾನತು ಹಿನ್ನೆಲೆ:
ಹಿಂದೆ ಕಟ್ಟಡದ ಛಾವಣಿ ಉದುರಿದ ಸಂದರ್ಭದಲ್ಲಿ ಕೆಆರ್‌ಐಡಿಎಲ್ (KRIDL) ಸಂಸ್ಥೆಯ ಎಇಇ ಸೌರಭ ಭೀಮನ್ ಅವರನ್ನು ಅಮಾನತು ಮಾಡಲಾಗಿತ್ತು. ಇದೀಗ ಮತ್ತೆ ಅನಾಹುತ ಸಂಭವಿಸಿರುವುದರಿಂದ ಇಡೀ ಯೋಜನೆಯ ನಿರ್ವಹಣೆ ಮತ್ತು ಎಂಜಿನಿಯರ್‌ಗಳ ಪಾತ್ರದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಭಾರಿ ಗಾಳಿ ಮಳೆಗೆ ಎರಡೇ ತಿಂಗಳಲ್ಲಿ ಶೆಡ್ ಉರುಳಿ ಬಿದ್ದಿರುವುದು ಭ್ರಷ್ಟಾಚಾರದ ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ.
![]()
ಸುಮಾರು 30 ಕೋಟಿ ರೂಪಾಯಿ ವೆಚ್ಚದ ಇಡೀ ಕಟ್ಟಡವೇ ಕಳಪೆಯಾಗಿದೆ ಎಂಬುದಕ್ಕೆ ಈ ಪಾರ್ಕಿಂಗ್ ಶೆಡ್ ಕುಸಿತವೇ ಸಾಕ್ಷಿ. ಸರ್ಕಾರ ಕೂಡಲೇ ಇಡೀ ಕಟ್ಟಡದ ಗುಣಮಟ್ಟದ ಪರೀಕ್ಷೆ ನಡೆಸಬೇಕು. ವರದಿ ಬರುವವರೆಗೆ ಇಲ್ಲಿ ಕೋಚಿಂಗ್ ಆರಂಭಿಸಬಾರದು.
- ಅವ್ವಣ್ಣ ಮ್ಯಾಕೇರಿ, ಬಿಜೆಪಿ ಮುಖಂಡ