ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Safari: ಬಿಸಿಲ ನಾಡಲ್ಲಿ ಈಗ ʼಜಂಗಲ್ ಸಫಾರಿʼ ಸದ್ದು !

ಕಲಬುರಗಿ ಜಿಲ್ಲೆಯ ಪ್ರಕೃತಿ ಪ್ರೇಮಿಗಳ ಗುಪ್ತಗಾಮಿನಿಯಾಗಿದ್ದ ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಈಗ ಅಧಿಕೃತವಾಗಿ ‘ಜಂಗಲ್ ಸಫಾರಿ’ಗೆ ಚಾಲನೆ ಸಿಕ್ಕಿದ್ದು, ಈ ಭಾಗದ ಪ್ರವಾಸೋ ದ್ಯಮಕ್ಕೆ ಹೊಸ ಆಯಾಮ ದೊರೆತಿದೆ. ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡುವ ಮೂಲಕ ಚಾರಣಿಗರ ಮತ್ತು ವನ್ಯಜೀವಿ ಪ್ರೇಮಿಗಳ ದಶಕಗಳ ಕನಸನ್ನು ನನಸು ಮಾಡಿದ್ದಾರೆ.

Safari: ಬಿಸಿಲ ನಾಡಲ್ಲಿ ಈಗ ʼಜಂಗಲ್ ಸಫಾರಿʼ ಸದ್ದು  !

-

Ashok Nayak
Ashok Nayak Mar 15, 2026 8:01 AM

ದೇವೇಂದ್ರ ಜಾಡಿ ಕಲಬುರಗಿ

ಕಲ್ಯಾಣ ಕರ್ನಾಟಕದ ಮಲೆನಾಡು ಚಿಂಚೋಳಿ ಇನ್ನು ಪ್ರವಾಸಿ ಕೇಂದ್ರ

ಪಶ್ಚಿಮ ಘಟ್ಟಗಳ ದಟ್ಟಾರಣ್ಯ, ಮಲೆನಾಡಿನ ಹಸಿರು ಸಿರಿಯನ್ನು ನೋಡಲು ಇನ್ನು ಮುಂದೆ ದಕ್ಷಿಣ ಕರ್ನಾಟಕದತ್ತ ಮುಖ ಮಾಡಬೇಕಿಲ್ಲ. ಬಿಸಿಲ ನಾಡು ಎಂದೇ ಹಣೆಪಟ್ಟಿ ಹೊತ್ತಿದ್ದ ಕಲ್ಯಾಣ ಕರ್ನಾಟಕದ ಒಡಲಲ್ಲೂ ಈಗ ವನ್ಯಜೀವಿಗಳ ವೈಭವ ಅನಾವರಣ ಗೊಳ್ಳಲಿದೆ.

ಕಲಬುರಗಿ ಜಿಲ್ಲೆಯ ಪ್ರಕೃತಿ ಪ್ರೇಮಿಗಳ ಗುಪ್ತಗಾಮಿನಿಯಾಗಿದ್ದ ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಈಗ ಅಧಿಕೃತವಾಗಿ ‘ಜಂಗಲ್ ಸಫಾರಿ’ಗೆ ಚಾಲನೆ ಸಿಕ್ಕಿದ್ದು, ಈ ಭಾಗದ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ದೊರೆತಿದೆ. ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡುವ ಮೂಲಕ ಚಾರಣಿಗರ ಮತ್ತು ವನ್ಯಜೀವಿ ಪ್ರೇಮಿಗಳ ದಶಕಗಳ ಕನಸನ್ನು ನನಸು ಮಾಡಿದ್ದಾರೆ.

ವನ್ಯಜೀವಿಗಳ ಅಪರೂಪದ ಲೋಕ: ಚಿಂಚೋಳಿ ಅರಣ್ಯವು ಕೇವಲ ಮರಗಿಡಗಳ ಗುಂಪಲ್ಲ, ಇದು ಜೀವವೈವಿಧ್ಯದ ಕಣಜ. ಸಫಾರಿಯ ಹಾದಿಯಲ್ಲಿ ನೀವು ಅದೃಷ್ಟವಂತ ರಾಗಿದ್ದರೆ ಚಿರತೆ, ಕಾಡು ಕೋಣ (ಗೌರ್) ಮತ್ತು ತೋಳಗಳ ದರ್ಶನ ಪಡೆಯಬಹುದು. ಇಲ್ಲಿನ ವಿಶೇಷ ಆಕರ್ಷಣೆ ಎಂದರೆ ಅಪರೂಪದ ‘ನಾಲ್ಕು ಕೊಂಬಿನ ಜಿಂಕೆ’ (ಚೌಸಿಂಗಾ). ಇದರೊಂದಿಗೆ ಕೃಷ್ಣಮೃಗ, ಹೈನಾ, ನೀಲಗಾಯ್ ಹಾಗೂ ಚುಕ್ಕೆ ಜಿಂಕೆಗಳು ಪ್ರವಾಸಿಗರ ಕಣ್ಮನ ಸೆಳೆಯಲಿವೆ. ಪಕ್ಷಿ ಕಾಶಿ ಎನಿಸಿಕೊಂಡಿರುವ ಇಲ್ಲಿ ಬ್ಲೂ ಪಿಜನ್ ಹಾಗೂ ಬಣ್ಣಬಣ್ಣದ ಪಾತರಗಿತ್ತಿಗಳ ಲೋಕವೇ ಸೃಷ್ಟಿಯಾಗಿದೆ.

ಇದನ್ನೂ ಓದಿ: SAFARI: ಸಫಾರಿ ನಿಷೇಧಕ್ಕೆ ಮುನ್ನ ಅಕ್ರಮ ಪ್ರವೇಶ ನಿಯಂತ್ರಿಸಿ !

ಸಫಾರಿ ಹಾದಿ ಮತ್ತು ಸಿದ್ಧತೆ: ಚಂದ್ರಂಪಳ್ಳಿ ನಿಸರ್ಗ ಧಾಮದಿಂದ ಆರಂಭವಾಗಿ ’ಲಾಲ್ ತಾಲಾಬ್’ ವರೆಗಿನ ಸುಮಾರು 28 ಕಿಲೋಮೀಟರ್ ಉದ್ದದ ಹಸಿರು ಹಾದಿಯಲ್ಲಿ ಈ ಸಫಾರಿ ಸಾಗಲಿದೆ. ಅರಣ್ಯ ಇಲಾಖೆಯು ಪ್ರವಾಸಿಗರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಎರಡು ಜೀಪ್‌ಗಳನ್ನು ಸಿದ್ಧಪಡಿಸಿದ್ದು, ಪರಿಸರಕ್ಕೆ ಧಕ್ಕೆ ಬಾರದಂತೆ ಸಫಾರಿ ನಡೆಸಲು ಯೋಜನೆ ರೂಪಿಸಿದೆ.

ಇದಲ್ಲದೇ, ಚಂದ್ರಂಪಳ್ಳಿ ಜಲಾಶಯದಲ್ಲಿ ಬೋಟಿಂಗ್ ಸೌಲಭ್ಯ ಆರಂಭವಾಗಿದ್ದು, ಪ್ರತಿ ವ್ಯಕ್ತಿಗೆ 175 ರೂ. ದರ ನಿಗದಿಪಡಿಸಲಾಗಿದೆ. ಪ್ರವಾಸಿಗರ ಸುರಕ್ಷತೆಗಾಗಿ ತರಬೇತಿ ಪಡೆದ ಸಿಬ್ಬಂದಿ, ಲೈಫ್ ಜಾಕೆಟ್ ಹಾಗೂ ವಿಮಾ ಸೌಲಭ್ಯ ಒದಗಿಸಲಾಗಿದೆ. ಇದು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಮೆರಗು ನೀಡಲಿದ್ದು, ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲಿದೆ.

ಪ್ರಾದೇಶಿಕ ಅಸಮಾನತೆ ನೀಗಿಸುವತ್ತ ಹೆಜ್ಜೆ: ಇದುವರೆಗೆ ಜಂಗಲ್ ಸಫಾರಿ ಎಂದರೆ ಕೇವಲ ಹಳೆ ಮೈಸೂರು ಭಾಗದ (ಬಂಡೀಪುರ, ನಾಗರಹೊಳೆ, ಕೆ.ಗುಡಿ) ಸೊತ್ತು ಎಂಬಂತಿತ್ತು. ಆದರೆ ಈಗ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಫಾರಿ ಆರಂಭಿಸಿರುವುದು ಪ್ರಾದೇಶಿಕ ಪ್ರವಾಸೋದ್ಯಮದ ಬೆಳವಣಿಗೆಗೆ ದೊಡ್ಡ ಮಟ್ಟದ ಉತ್ತೇಜನ ನೀಡಲಿದೆ. ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುವುದಲ್ಲದೆ, ಜಿಲ್ಲೆಯ ಆರ್ಥಿಕತೆಗೂ ಬಲ ಸಿಗಲಿದೆ. ಅಲ್ಲದೇ, ಹೈದರಾಬಾದ್ ಮತ್ತು ಮಹಾರಾಷ್ಟ್ರದ ಪ್ರವಾಸಿಗರನ್ನು ಸೆಳೆಯು ತ್ತಿರುವ ಚಿಂಚೋಳಿಯಲ್ಲಿ ಈಗ ವಾಸ್ತವ್ಯಕ್ಕೆ ಗೊಟ್ಟಂಗೊಟ್ಟಾ ಮತ್ತು ಚಂದ್ರಂಪಳ್ಳಿಯಲ್ಲಿ ಟೆಂಟ್ ಹೌಸ್‌ಗಳ ವ್ಯವಸ್ಥೆಯೂ ಇದೆ.

ಪ್ರವಾಸಿಗರ ಮಾಹಿತಿಗಾಗಿ

ವಯಸ್ಕರು (12 ವರ್ಷ ಮೇಲ್ಪಟ್ಟವರು): 450 ರು.

ಮಕ್ಕಳು (5 ರಿಂದ 12 ವರ್ಷದವರು): 250 ರು.

ಒಂದು ಜೀಪ್‌ನಲ್ಲಿ ಗರಿಷ್ಠ 5 ಜನರಿಗೆ ಅವಕಾಶ.

ಬೋಟಿಂಗ್‌ಗೆ ಪ್ರತಿ ವ್ಯಕ್ತಿಗೆ 175 ರು.

ಸಫಾರಿ ಸಮಯ

ಬೆಳಗ್ಗೆ: 06.00 ರಿಂದ 8.00 ಮತ್ತು 08.00 ರಿಂದ 10.00

ಸಂಜೆ: 04.00 ರಿಂದ 05.00

ನಿಸರ್ಗ ಶಿಬಿರ (ವಾಸ್ತವ್ಯ)

ಗೊಟ್ಟಂಗೊಟ್ಟಾ ಟೆಂಟ್ ಹೌಸ್: 1500 ರು. (ಇಬ್ಬರಿಗೆ/ರಾತ್ರಿ)

ಚಂದ್ರಂಪಳ್ಳಿ ನಿಸರ್ಗ ಶಿಬಿರ: 2000 ರು. (ಒಂದು ರೂಂಗೆ)

image

ಮುಂದಿನ ಒಂದೂವರೆ ವರ್ಷದಲ್ಲಿ ಚಿಂಚೋಳಿಯನ್ನು ಮಿನಿ ಪ್ರವಾಸಿ ಸರ್ಕೀಟ್ ಆಗಿ ಅಭಿವೃದ್ಧಿಪಡಿಸಲಾಗುವುದು. ಕಲೆ, ಸಂಸ್ಕೃತಿ ಮತ್ತು ಪ್ರಕೃತಿ ಸೌಂದರ್ಯವನ್ನು ಪರಿಚಯಿಸುವ ಮೂಲಕ ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮದ ಚಿತ್ರಣವನ್ನೇ ಬದಲಾಯಿಸಿ, ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ನಮ್ಮ ಸರಕಾರ ಬದ್ಧವಾಗಿದೆ.

-ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ