ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kalaburagi Jail Incident: 40 ಗಂಟೆ ಕಳೆದರೂ ಸಿಗದ ಇಬ್ಬರು ಕೈದಿಗಳು; ತೀವ್ರಗೊಂಡ ಶೋಧ

ಮಂಗಳವಾರ ನಸುಕಿನ ಜಾವ ಜೈಲಿನ ಕಬ್ಬಿಣದ ಕಂಬಿ ಕತ್ತರಿಸಿ, 20 ಅಡಿ ಎತ್ತರದ ಗೋಡೆ ಹಾರಿ ಎಸ್ಕೇಪ್ ಆಗಿದ್ದ ಮೂವರ ಪೈಕಿ ಸಂತೋಷ್ ಎಂಬಾತನನ್ನು ಪೊಲೀಸರು ಶೂಟೌಟ್ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಪೋಕ್ಸೋ ಮತ್ತು ಕೊಲೆ ಪ್ರಕರಣದಂತಹ ಗಂಭೀರ ಅಪರಾಧ ಹಿನ್ನೆಲೆಯುಳ್ಳ ಮಸ್ತಾನ್ ಮತ್ತು ಸಾಗರ್ ಎಂಬ ಇಬ್ಬರು ಕೈದಿಗಳು ಇನ್ನೂ ಮುಕ್ತವಾಗಿ ತಿರುಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.

40 ಗಂಟೆ ಕಳೆದರೂ ಸಿಗದ ಇಬ್ಬರು ಕೈದಿಗಳು; ತೀವ್ರಗೊಂಡ ಶೋಧ

-

Profile
Ashok Nayak Jul 16, 2026 9:21 AM

ಕಲಬುರಗಿ ಜೈಲಿನಿಂದ ಸಜಾ ಕೈದಿಗಳ ಪರಾರಿ ಪ್ರಕರಣ

ಮಸ್ತಾನ್, ಸಾಗರ್ ಪತ್ತೆಗೆ ನೆರೆ ರಾಜ್ಯಗಳಲ್ಲೂ ಜಾಲ ಬೀಸಿದ ಪೊಲೀಸರು

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಶಿಕ್ಷಿತ ಕೈದಿಗಳು ಪರಾರಿಯಾಗಿ 40 ಗಂಟೆಗಳು ಕಳೆದರೂ, ಇಬ್ಬರು ಪ್ರಮುಖ ಆರೋಪಿಗಳ ಸುಳಿವು ಇನ್ನು ಲಭ್ಯವಾಗಿಲ್ಲ. ಕಾರಾಗೃಹ ಇಲಾಖೆಯ ಇತಿಹಾಸದಲ್ಲೇ ಕಪ್ಪು ಚುಕ್ಕೆಯಾಗಿ ಪರಿಣಮಿಸಿರುವ ಈ ಪ್ರಕರಣದಲ್ಲಿ ಪರಾರಿಯಾದ ಇಬ್ಬರು ಕದೀಮರು ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದು, ಇಡೀ ಪೊಲೀಸ್ ಪಡೆ ಈಗ ಅವರ ಬೆನ್ನಟ್ಟಿದೆ.

ಕೈಗೆ ಸಿಗದ ಇಬ್ಬರು ಅಪಾಯಕಾರಿ ಕೈದಿಗಳು

ಮಂಗಳವಾರ ನಸುಕಿನ ಜಾವ ಜೈಲಿನ ಕಬ್ಬಿಣದ ಕಂಬಿ ಕತ್ತರಿಸಿ, 20 ಅಡಿ ಎತ್ತರದ ಗೋಡೆ ಹಾರಿ ಎಸ್ಕೇಪ್ ಆಗಿದ್ದ ಮೂವರ ಪೈಕಿ ಸಂತೋಷ್ ಎಂಬಾತನನ್ನು ಪೊಲೀಸರು ಶೂಟೌಟ್ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಪೋಕ್ಸೋ ಮತ್ತು ಕೊಲೆ ಪ್ರಕರಣದಂತಹ ಗಂಭೀರ ಅಪರಾಧ ಹಿನ್ನೆಲೆಯುಳ್ಳ ಮಸ್ತಾನ್ ಮತ್ತು ಸಾಗರ್ ಎಂಬ ಇಬ್ಬರು ಕೈದಿಗಳು ಇನ್ನೂ ಮುಕ್ತವಾಗಿ ತಿರುಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ. ಇವರಿಗಾಗಿ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: Kalaburagi Central Jail: ಕಲಬುರಗಿ ಕೇಂದ್ರ ಕಾರಾಗೃಹದಿಂದ ಸಜಾ ಅಪರಾಧಿಗಳು ಎಸ್ಕೇಪ್ ಪ್ರಕರಣ: ಬಸ್‌ನಲ್ಲಿ ಪರಾರಿಯಾಗುತ್ತಿದ್ದ ಕೈದಿ ಹುಮನಾಬಾದ್‌ನಲ್ಲಿ ವಶಕ್ಕೆ!

ಗಡಿ ಭಾಗಗಳಲ್ಲಿ ಪೊಲೀಸ್ ಜಾಲ

ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳು ಜಿಲ್ಲೆ ಬಿಟ್ಟು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಕಲಬುರಗಿ ಜಿಲ್ಲಾ ಪೊಲೀಸರು ನೆರೆಯ ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿ ಭಾಗಗಳಿಗೂ ವಿಶೇಷ ತಂಡಗಳನ್ನು ರವಾನಿಸಿದ್ದಾರೆ. ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ಹಾಗೂ ಪ್ರಮುಖ ಚೆಕ್ ಪೋಸ್ಟ್‌ಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಂಧಿತ ಆರೋಪಿ ಸಂತೋಷ್‌ನಿಂದ ಇವರಿಬ್ಬರ ಸಂಭವನೀಯ ಅಡಗುದಾಣ ಗಳ ಬಗ್ಗೆ ಖಾಕಿ ಪಡೆ ಮಾಹಿತಿ ಕಲೆ ಹಾಕುತ್ತಿದೆ.

ಭದ್ರತಾ ವೈಫಲ್ಯ: ಎಂಟು ಅಧಿಕಾರಿಗಳ ಅಮಾನತು

ಇಷ್ಟು ದೊಡ್ಡ ಮಟ್ಟದ ಭದ್ರತಾ ಲೋಪಕ್ಕೆ ಕಾರಣರಾದ ಜೈಲು ಅಧೀಕ್ಷಕರು ಸೇರಿ ಒಟ್ಟು ಎಂಟು ಜನ ಸಿಬ್ಬಂದಿಯನ್ನು ಸರ್ಕಾರ ಈಗಾಗಲೇ ಅಮಾನತುಗೊಳಿಸಿದೆ. ಜೈಲಿನೊಳಗೆ ಕಬ್ಬಿಣ ಕತ್ತರಿಸುವ ಬ್ಲೇಡ್ ತಲುಪಿದ್ದು ಹೇಗೆ ಮತ್ತು ಇಬ್ಬರು ಆರೋಪಿಗಳು ತಪ್ಪಿಸಿಕೊಳ್ಳಲು ಹೊರಗಿನಿಂದ ಯಾರಾದರೂ ಸಹಾಯ ಮಾಡಿದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ಚುರುಕುಗೊಂಡಿದೆ.

Prisoner 2

ಪ್ರತಿಪಕ್ಷಗಳ ವಾಗ್ದಾಳಿ: ರಾಜಕೀಯ ಚರ್ಚೆ ತೀವ್ರ

ರಾಜ್ಯದ ಪ್ರಮುಖ ಕಾರಾಗೃಹದಲ್ಲೇ ಇಂತಹ ಘಟನೆ ನಡೆದಿರುವುದು ಮತ್ತು ಇಬ್ಬರು ಆರೋಪಿ ಗಳು ಇನ್ನೂ ಸಿಗದೇ ಇರುವುದು ರಾಜಕೀಯ ವಲಯದಲ್ಲೂ ತಲ್ಲಣ ಸೃಷ್ಟಿಸಿದೆ. ಸರ್ಕಾರದ ಬೇಜವಾಬ್ದಾರಿತನ ಮತ್ತು ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಇದು ಸಾಕ್ಷಿ ಎಂದು ಆರೋಪಿಸಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ.

ಇಲ್ಲಿಯವರೆಗೆ ನಡೆದಿದ್ದೇನು?

ಜುಲೈ 14ರಂದು ಜೈಲು ಬ್ರೇಕ್: ಮಸ್ತಾನ್, ಸಂತೋಷ್ ಹಾಗೂ ಸಾಗರ್ ಎಂಬ ಮೂವರು ಶಿಕ್ಷಿತ ಕೈದಿಗಳು ಸಿನಿಮೀಯ ಮಾದರಿಯಲ್ಲಿ ಜೈಲಿನಿಂದ ಪರಾರಿ.

ಭದ್ರತಾ ಲೋಪದ ಸ್ಕೆಚ್: ಬ್ಯಾರಕ್‌ನ ಗ್ರಿಲ್ ಕಂಬಿಗಳನ್ನು ಕತ್ತರಿಸಿ, ಮುಂಚಿತವಾಗಿಯೇ ಸಿದ್ಧಪಡಿಸಿಕೊಂಡಿದ್ದ ಏಣಿ ಬಳಸಿ 20 ಅಡಿ ಎತ್ತರದ ಕಾಂಪೌಂಡ್ ಗೋಡೆ ಹಾರಿದ ಕೈದಿಗಳು.

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ: ಕೈದಿಗಳು ಗೋಡೆ ಹಾರಿ ಓಡಿ ಹೋಗುತ್ತಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.

ಪೊಲೀಸ್ ಶೂಟೌಟ್, ಒಬ್ಬನ ಬಂಧನ: ಕಪನೂರ ಕೈಗಾರಿಕಾ ಪ್ರದೇಶದ ಬಳಿ ಅಡಗಿದ್ದ ಆರೋಪಿ ಸಂತೋಷ್ ಪತ್ತೆ; ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಹಿನ್ನೆಲೆ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದ ಖಾಕಿ ಪಡೆ.

ಇಬ್ಬರು ಕೈದಿಗಳಿಗಾಗಿ ತೀವ್ರ ಹುಡುಕಾಟ: ಶೂಟೌಟ್‌ನಲ್ಲಿ ಗಾಯಗೊಂಡ ಸಂತೋಷ್ ಆಸ್ಪತ್ರೆಗೆ ದಾಖಲು; ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಪ್ರಮುಖ ಕೈದಿಗಳಾದ ಮಸ್ತಾನ್ ಮತ್ತು ಸಾಗರ್ ಪತ್ತೆಗೆ ನೆರೆ ರಾಜ್ಯಗಳಲ್ಲೂ ಮುಂದುವರಿದ ಹೈ ಅಲರ್ಟ್ ಕಾರ್ಯಾಚರಣೆ.

ಎಂಟು ಅಧಿಕಾರಿಗಳ ಅಮಾನತು: ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯದ ಆರೋಪದಡಿ ಜೈಲು ಅಧೀಕ್ಷಕ ಸೇರಿದಂತೆ ಎಂಟು ಜನ ಜೈಲು ಸಿಬ್ಬಂದಿಯನ್ನು ಅಮಾನತುಗೊಳಿಸಿದ ಸರ್ಕಾರ.