SIR in Karnataka: ಎಸ್ಐಆರ್ ಮೊದಲ ಕರಡು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲವೆ? ಚಿಂತೆ ಬೇಡ ಹೆಸರು ಸೇರಿಸಲು ಇನ್ನೂ ಇದೆ ಅವಕಾಶ; ಅದು ಹೇಗೆ ಎನ್ನುವ ವಿವರ ಇಲ್ಲಿದೆ
Karnataka SIR: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಡಿ ಮೊದಲ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಬರೋಬ್ಬರಿ 1.07 ಕೋಟಿ ಮಂದಿಯ ಹೆಸರನ್ನು ಕೈಬಿಡಲಾಗಿದೆ. ಈ ಪೈಕಿ ನಿಮ್ಮ ಹೆಸರು ಡಿಲೀಟ್ ಆಗಿದ್ದರೆ ಚಿಂತೆ ಮಾಡಬೇಕಾಗಿಲ್ಲ. ಇನ್ನೂ ಹೆಸರು ಸೇರಿಸಲು ಅವಕಾಶವಿದ್ದು, ಅದು ಹೇಗೆ ಎನ್ನುವ ವಿವರ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಆ. 24: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಡಿ (SIR in Karnataka) ಮೊದಲ ಕರಡು ಮತದಾರರ ಪಟ್ಟಿಯನ್ನು ಸೋಮವಾರ (ಆಗಸ್ಟ್ 24) ಪ್ರಕಟಿಸಲಾಗಿದೆ. ಬಿಡುಗಡೆಗೊಂಡಿರುವ ಎಸ್‌ಐಆರ್ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 1,07,96,399 ಮತದಾರರ ಹೆಸರನ್ನು ಕೈಬಿಡಲಾಗಿದೆ (Karnataka SIR). ಹಾಗಂತ ನಿಮ್ಮ ಹೆಸರು ಡಿಲೀಟ್ ಆಗಿದ್ದರೆ ಚಿಂತೆ ಮಾಡಬೇಕಾಗಿಲ್ಲ. ಇನ್ನೂ ಹೆಸರು ಸೇರಿಸಲು ಇದೆ ಅವಕಾಶ. ಅದು ಹೇಗೆ ಎನ್ನುವ ವಿವರ ಇಲ್ಲಿದೆ.
2026ರ ಜೂನ್ 16ರ ಮತದಾರರ ಪಟ್ಟಿಯಂತೆ ಕರ್ನಾಟಕದಲ್ಲಿ ಒಟ್ಟು 5.54 ಕೋಟಿ ಮತದಾರರಿದ್ದಾರೆ. ಈ ಪೈಕಿ 4.46 ಕೋಟಿ ಮತದಾರರ ಎನ್ಯೂಮರೇಷನ್ ಫಾರಂಗಳನ್ನು ಡಿಜಿಟಲೀಕರಣ ಮಾಡಲಾಗಿದೆ. 2002ರ ಮತದಾರರ ಪಟ್ಟಿಯಂತೆ ಮಾಹಿತಿ ಲಭ್ಯವಾಗದ 23.45 ಲಕ್ಷ ಮತದಾರರು ಹಾಗೂ ಮತದಾರರು ಸಲ್ಲಿಸಿರುವ ವಿವರಗಳಲ್ಲಿ ಲೋಪ ಅಥವಾ ವ್ಯತ್ಯಾಸ ಕಂಡುಬಂದಿರುವ 20.35 ಲಕ್ಷ ಮತದಾರರು ಸೇರಿ ಒಟ್ಟು 43.80 ಲಕ್ಷ ಮತದಾರರಿಗೆ ನೋಟಿಸ್ ಜಾರಿಗೊಳಿಸಲಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಹೆಸರು ಸೇರಿಸಲು ನೀವೇನು ಮಾಡಬೇಕು?
ಇನ್ನು ನಿಗದಿತ ಅವಧಿಯೊಳಗೆ ಭರ್ತಿ ಮಾಡಿದ ಎನ್ಯೂಮರೇಷನ್ ನಮೂನೆಯನ್ನು ಸಲ್ಲಿಸಲು ಸಾಧ್ಯವಾಗದ ಮತದಾರರು ಸೆಪ್ಟೆಂಬರ್ 23ರವರೆಗೆ ನಿಗದಿತ ಘೋಷಣಾ ಪತ್ರದೊಂದಿಗೆ ನಮೂನೆ-6 (Form 6) ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬಹುದು. ಇನ್ನೂ ಸರಳವಾಗಿ ಹೇಳುವುದಾದರೆ ನಮೂನೆ 6 ಅನ್ನು ಭರ್ತಿ ಮಾಡಿ, ಸೂಕ್ತ ದಾಖಲೆಗಳೊಂದಿಗೆ ಬೂತ್ ಮಟ್ಟದ ಅಧಿಕಾರಿಗೆ (BLO) ಸಲ್ಲಿಸಬೇಕು.
ಮನೆಯಲ್ಲೇ ಕೂತು ಅಪ್ಲೈ ಮಾಡಿ
ಇನ್ನು ನೀವು ಮನೆಯಲ್ಲೇ ಕೂತು ಅಪ್ಲೈ ಮಾಡಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು voters.eci.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಜತೆಗೆ ECINET ಮೊಬೈಲ್ ಆ್ಯಪ್ ಕೂಡ ಬಳಸಬಹುದು. ಕರಡು ಮತದಾರರ ಪಟ್ಟಿ ಪ್ರಕಟವಾಗಿದೆ ಎಂದರೆ ಹೆಸರನ್ನು ಶಾಶ್ವತವಾಗಿ ತೆಗೆದುಹಾಕಲಾಗಿದೆ ಎಂದು ಅರ್ಥವಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಇನ್ನು ತಪ್ಪಾಗಿರುವ ಹೆಸರಿನ ವಿರುದ್ಧವೂ ಆಕ್ಷೇಪಣೆ ಸಲ್ಲಿಸಬಹುದು. ಇದಕ್ಕಾಗಿ ವಿವರ ತಿದ್ದುಪಡಿಗೆ ಫಾರಂ-8 ಬಳಬಹುದು. ಹೆಸರು ತೆಗೆದುಹಾಕಲು ಫಾರಂ-7 ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 27ರಂದು ಪ್ರಕಟಗೊಳ್ಳಲಿದೆ.
ಎಸ್ಐಆರ್ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ; ರಾಜ್ಯದಲ್ಲಿ 1.07 ಕೋಟಿ ಮತದಾರರ ಹೆಸರು ಡಿಲೀಟ್!
ಪ್ರಮುಖ ಅರ್ಜಿ ನಮೂನೆಗಳು
ನಮೂನೆ 6 (Form 6): ಹೊಸ ಮತದಾರರ ನೋಂದಣಿಗಾಗಿ.
ನಮೂನೆ 6ಎ (Form 6A): ಸಾಗರೋತ್ತರ ಮತದಾರರಾಗಿ ನೋಂದಾಯಿಸಲು.
ನಮೂನೆ 7 (Form 7): ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು.
ನಮೂನೆ 8 (Form 8): ನಿವಾಸ ಸ್ಥಳ ಬದಲಾವಣೆ/ ನಮೂದುಗಳ ತಿದ್ದುಪಡಿ/ ಎಪಿಕ್ (EPIC) ಬದಲಾವಣೆ / ಪಿಡಬ್ಲ್ಯುಡಿ ಗುರುತು ದಾಖಲಿಸಲು.
ಯಾವೆಲ್ಲ ದಾಖಲೆ ಸಲ್ಲಿಸಬೇಕು?
ಚುನಾವಣಾ ಆಯೋಗದ ಪ್ರಕಾರ ಅರ್ಜಿ ನಮೂನೆಗಳೊಂದಿಗೆ ಸಲ್ಲಿಸಬಹುದಾದ ಸೂಚಕ ದಾಖಲೆಗಳ ಪಟ್ಟಿ:
- ಯಾವುದೇ ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ/ ಪಿಎಸ್‌ಯುಗಳ ನಿಯಮಿತ ನೌಕರರು ಅಥವಾ ಪಿಂಚಣಿದಾರರಿಗೆ ನೀಡಿರುವ ಗುರುತಿನ ಚೀಟಿ ಅಥವಾ ಪಿಂಚಣಿ ಪಾವತಿ ಆದೇಶ.
- ಭಾರತದಲ್ಲಿ 01.07.1987ಕ್ಕಿಂತ ಮುಂಚೆ ಸರ್ಕಾರ/ ಸ್ಥಳೀಯ ಪ್ರಾಧಿಕಾರಗಳು/ ಬ್ಯಾಂಕುಗಳು/ಅಂಚೆ ಕಛೇರಿ/ಎಲ್‌ಐಸಿ/ ಸಾರ್ವಜನಿಕ ವಲಯದ ಸಂಸ್ಥೆಗಳು ನೀಡಿರುವ ಯಾವುದೇ ಗುರುತಿನ ಚೀಟಿ, ಪ್ರಮಾಣಪತ್ರ ಅಥವಾ ದಾಖಲೆ.
- ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜನನ ಪ್ರಮಾಣಪತ್ರ.
- ಪಾಸ್‌ಪೋರ್ಟ್.
- ಮಾನ್ಯತೆ ಪಡೆದ ಮಂಡಳಿಗಳು/ವಿಶ್ವವಿದ್ಯಾಲಯಗಳು ನೀಡಿರುವ ಎಸ್‌ಎಸ್‌ಎಲ್‌ಸಿ/ಶೈಕ್ಷಣಿಕ ಪ್ರಮಾಣಪತ್ರ.
- ರಾಜ್ಯದ ಸಕ್ಷಮ ಪ್ರಾಧಿಕಾರಗಳಿಂದ ನೀಡಲಾದ ಖಾಯಂ ನಿವಾಸಿ ಪ್ರಮಾಣಪತ್ರ.
- ಅರಣ್ಯ ಹಕ್ಕುಗಳ ಪ್ರಮಾಣಪತ್ರ.
- ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಒಬಿಸಿ/ಎಸ್‌ಸಿ/ಎಸ್‌ಟಿ ಅಥವಾ ಯಾವುದೇ ಜಾತಿ ಪ್ರಮಾಣಪತ್ರ.
- ರಾಷ್ಟ್ರೀಯ ನಾಗರಿಕರ ನೋಂದಣಿ (ಅಸ್ತಿತ್ವ ಇರುವ ಕಡೆ).
- ರಾಜ್ಯ ಅಥವಾ ಸ್ಥಳೀಯ ಸರ್ಕಾರದ ಪ್ರಾಧಿಕಾರಗಳಿಂದ ನಿರ್ವಹಿಸಲಾಗಿರುವ ಕುಟುಂಬ ರಿಜಿಸ್ಟರ್.
- ಸರ್ಕಾರದಿಂದ ನೀಡಲಾದ ಯಾವುದೇ ಭೂ/ಮನೆ ಹಂಚಿಕೆ ಪ್ರಮಾಣಪತ್ರ.
- ಆಧಾರ್ ಸಂಬಂಧ, ಭಾರತ ಚುನಾವಣಾ ಆಯೋಗವು ಪತ್ರ ಸಂಖ್ಯೆ 23/2025-ERS/Vol.II ದಿನಾಂಕ 09.09.2025ರಂದು ಹೊರಡಿಸಿದ ಸೂಚನೆಗಳು ಅನ್ವಯಿಸುತ್ತವೆ.

ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸುವುದು ಹೇಗೆ?
- ನಿಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿ (BLO) ಬಳಿ ಇರುವ ಮತದಾರರ ಪಟ್ಟಿಯಿಂದ.
- ECINET ಮೊಬೈಲ್ ಅಪ್ಲಿಕೇಶನ್ (ECINET Mobile App) ಮೂಲಕ.
- voters.eci.gov.in ಪೋರ್ಟಲ್ ಮೂಲಕ.
- CEO ಕರ್ನಾಟಕ ಮತ್ತು ಸಂಬಂಧಿತ ಜಿಲ್ಲಾ ಚುನಾವಣಾಧಿಕಾರಿಯ ವೆಬ್‌ಸೈಟ್‌ಗಳ ಮುಖಾಂತರ ಕರಡು ಮತದಾರರ ಪಟ್ಟಿಯಲ್ಲಿನ ಹೆಸರು ಪರಿಶೀಲಿಸಬಹುದು.
ಮತದಾರರಾಗಲು ಅರ್ಹತೆಗಳು
ಭಾರತದ ಸಂವಿಧಾನದ 326ನೇ ವಿಧಿಯ ಪ್ರಕಾರ ಈ ಕೆಳಗಿನ ಅರ್ಹತೆ ಇದ್ದವರು ಮತದಾರರಾಗಬಹುದು:
- ಭಾರತ ದೇಶದ ನಾಗರಿಕರಾಗಿರಬೇಕು.
- ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
- ಸಂಬಂಧಿತ ವಿಧಾನಸಭಾ ಕ್ಷೇತ್ರದ ಸಾಮಾನ್ಯ ನಿವಾಸಿಯಾಗಿರಬೇಕು.
- ಯಾವುದೇ ಕಾನೂನು ಅಡಿಯಲ್ಲಿ ಅನರ್ಹರಾಗಿರಬಾರದು.
ಮೇಲ್ಮನವಿ ಸಲ್ಲಿಸಲು ಅವಕಾಶ
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ ವಿಚಾರಣೆಯ ನಂತರ ಪಟ್ಟಿಯಿಂದ ಹೆಸರು ಕೈ ಬಿಟ್ಟರೆ ಮೇಲ್ಮನವಿ ಸಲ್ಲಿಸಲೂ ಅವಕಾಶವಿದೆ. ಅದಕ್ಕೆ ನೀವು ಮಾಡಬೇಕಾದದ್ದು ಇಷ್ಟೆ.
- ಮತದಾರ ನೋಂದಣಾಧಿಕಾರಿ (ERO) ಆದೇಶದ ದಿನಾಂಕದಿಂದ 15 ದಿನಗಳೊಳಗೆ ಸಂಬಂಧಿಸಿದ ಜಿಲ್ಲಾ ದಂಡಾಧಿಕಾರಿ/ಜಿಲ್ಲಾಧಿಕಾರಿ ಬಳಿ ಮೊದಲ ಮೇಲ್ಮನವಿ ಸಲ್ಲಿಸಬಹುದು.
- ಮೊದಲ ಮೇಲ್ಮನವಿಯ ಆದೇಶದ ದಿನಾಂಕದಿಂದ 30 ದಿನಗಳೊಳಗೆ ಮುಖ್ಯ ಚುನಾವಣಾಧಿಕಾರಿ ಮುಂದೆ 2ನೇ ಮೇಲ್ಮನವಿ ಸಲ್ಲಿಸಬಹುದು.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.