Murder Case: ಕೋಲಾರ: ಪ್ರೀತಿಗೆ ಒಪ್ಪದ ವಿವಾಹಿತೆಯನ್ನು ಇರಿದು ಕೊಂದ ಎರಡು ಮಕ್ಕಳ ತಂದೆ!
ಇಂಡಸ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಚಿರಂಜೀವಿ ಸಾಲ ವಸೂಲಿ ಮಾಡಲು ತೆರಳಿದಾಗ ಸುಜಾತಾಳ ಪರಿಚಯವಾಗಿದೆ. ಈ ವೇಳೆ ನನ್ನನ್ನು ಪ್ರೀತಿಸುವಂತೆ ಚಿರಂಜೀವಿ, ಸುಜಾತಳ ಬೆನ್ನು ಬಿದ್ದಿದ್ದಾನೆ. ಆದರೆ ಸುಜಾತ ಇದಕ್ಕೆ ಒಪ್ಪಿಲ್ಲ. ದೂರ ಇರುವಂತೆ ಆತನಿಗೆ ಹಿತವಚನ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಆತ ಆಕೆಯ ಕೊಲೆ ಮಾಡಿದ್ದಾನೆ.
ಆರೋಪಿ ಚಿರಂಜೀವಿ, ಕೊಲೆಯಾದ ಸುಜಾತ -
ಕೋಲಾರ, ಜ.15 : ತನ್ನನ್ನು ಪ್ರೀತಿಸುವಂತೆ ಮಹಿಳೆಯೊಬ್ಬಳ ಹಿಂದೆ ಬಿದ್ದ ಸೈಕೋ, ಆಕೆ ಅದಕ್ಕೆ ಒಪ್ಪದಿದ್ದುದಕ್ಕೆ ಬರ್ಬರವಾಗಿ ಕೊಲೆ (Murder Case) ಮಾಡಿದ್ದಾನೆ. ಈ ಘಟನೆ ಕೋಲಾರದ (Kolar news) ಹೊರವಲಯದ ಬಂಗಾರಪೇಟೆ (Bangarapete) ರಸ್ತೆಯಲ್ಲಿ ನಡೆದಿದೆ. ಚಿರಂಜೀವಿ ಎಂಬ ಪಾತಕಿ ಚಾಕುವಿನಿಂದ ಇರಿದು ಸುಜಾತ (27) ಎನ್ನುವ ಮಹಿಳೆಯನ್ನು ಕೊಲೆ ಮಾಡಿದ್ದಾನೆ.
ಕತ್ತಿಹಳ್ಳಿಯಿಂದ ನರಸಾಪುರ ಕೈಗಾರಿಕಾ ಪ್ರದೇಶದ ಕಡೆ ಕೆಲಸಕ್ಕೆ ಹೊರಟಿದ್ದ ಮಹಿಳೆಯನ್ನು ಕೋಲಾರದ ಬಳಿ ಆರೋಪಿ ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇಬ್ಬರಿಗೂ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಸುಜಾತ ಗಂಡನನ್ನು ತೊರೆದು ಪ್ರತ್ಯೇಕವಾಗಿ ವಾಸವಾಗಿದ್ದಳು. ಕಳೆದ ಕೆಲವು ದಿನಗಳಿಂದ ಚಿರಂಜೀವಿ ಸುಜಾತಾಳನ್ನ ಮದುವೆಯಾಗುವಂತೆ ಬಲವಂತ ಮಾಡುತ್ತಿದ್ದ. ಇದಕ್ಕೆ ಸುಜಾತ ಒಪ್ಪಿರಲಿಲ್ಲ. ಹಾಗಾಗಿ ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು.
ಕಳೆದ ರಾತ್ರಿ ಸಹ ಸುಜಾತಳ ಗ್ರಾಮಕ್ಕೆ ತೆರಳಿ ಮನೆ ಬಳಿ ಆರೋಪಿ ಹೋಗಿದ್ದ. ಈ ವೇಳೆ ಸುಜಾತ ಈತನನ್ನ ನಿರ್ಲಕ್ಷಿಸಿದ್ದಳು. ಇದರಿಂದ ಕೋಪಗೊಂಡ ಪಾಗಲ್ ಪ್ರೇಮಿ ಮಹಿಳೆಯನ್ನು ಕೊಲೆ ಮಾಡಿದ್ದಾನೆ. ನರಸಾಪುರದಲ್ಲಿ ಸ್ಟಾಫ್ ನರ್ಸ್ ಆಗಿದ್ದ ಸುಜಾತ, ಕಳೆದ ಮೂರು ತಿಂಗಳ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದಳು. ಈ ಹಿಂದೆಯೂ ಹಣಕಾಸು ವಿಚಾರಕ್ಕೆ ಸುಜಾತ ಮೇಲೆ ಆರೋಪಿ ಹಲ್ಲೆ ಮಾಡಿದ್ದ. ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿ ಚಿರಂಜೀವಿ ವಿರುದ್ಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆವು, ಆದರೂ ಕ್ರಮ ಕೈಗೊಳ್ಳಲಿಲ್ಲ, ಈಗ ನನ್ನ ಮಗಳನ್ನು ಕೊಲೆ ಮಾಡಿ ಬಿಟ್ಟ, ಆಗಲೇ ಸರಿಯಾದ ಕ್ರಮ ಕೈಗೊಂಡಿದ್ದಿದ್ದರೆ ಇವತ್ತು ನನ್ನ ಮಗಳು ಬದುಕಿರುತಿದ್ದಳು ಎಂದ ಸುಜಾತ ತಂದೆ ಕಣ್ಣೀರಿಟ್ಟಿದ್ದಾರೆ. ಕೋಲಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅರೋಪಿಯನ್ನು ಬಂಧಿಸಿದ್ದಾರೆ.
Murder case: ಬಾಲಕನ ಕೊಲೆ, ಹತ್ಯೆಗೈದ ಮೂವರು ಅಪ್ರಾಪ್ತ ವಯಸ್ಕರು ಅರೆಸ್ಟ್